ಮಡಿಕೇರಿ, ಫೆ. ೮: ಇಲ್ಲಿನ ಹೊರ ವಲಯದ ಕರ್ಣಂಗೇರಿಯಲ್ಲಿರುವ ಮೆಡಿಕಲ್ ಕಾಲೇಜು ಬಳಿ ಆಸು-ಪಾಸಿನ ನಿವಾಸಿಗಳು ಕಸವನ್ನು ತಂದು ಸುರಿಯುತ್ತಿದ್ದು, ರಸ್ತೆ ಬದಿಯಲ್ಲಿ ಕಸದ ರಾಶಿ ನಿರ್ಮಾಣವಾಗಿದೆ.

ಕರ್ಣಂಗೇರಿ - ಉಕ್ಕಡಕ್ಕಾಗಿ ಮೆಡಿಕಲ್ ಕಾಲೇಜ್‌ಗೆ ತೆರಳುವ ರಸ್ತೆ ಮುಂದಕ್ಕೆ ತ್ಯಾಗರಾಜ್‌ಕಾಲೋನಿ ಕಡೆಗೆ ಸಾಗುತ್ತದೆ. ಕಾಲೇಜಿಗೆ ತೆರಳುವ ಗೇಟಿನ ಸ್ವಲ್ಪ ಕೆಳಭಾಗದಲ್ಲಿ ಕಾಂಕ್ರಿಟ್ ರಸ್ತೆ ಬದಿ ಸುತ್ತಮುತ್ತಲಿನ ಜನರು ಕಸಗಳನ್ನು ತಂದು ರಾಶಿ ಹಾಕುತ್ತಿದ್ದು, ಕಸಗಳನ್ನು ನಾಯಿಗಳು ರಸ್ತೆಗೆ ಎಳೆದು ಹಾಕುತ್ತಿವೆ. ಇದರಿಂದ ರಸ್ತೆಯಲ್ಲಿ ನಡೆದಾಡಲು ಅಸಹ್ಯವಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ. ನಗರಸಭೆಯ ಕಸ ಸಂಗ್ರಹ ವಾಹನ ಈ ಪ್ರದೇಶಕ್ಕೆ ಹೋಗದೇ ಇರುವುದರಿಂದ ಜನರು ಕಸಗಳನ್ನು ತಂದು ರಸ್ತೆ ಬದಿ ಸುರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಯಾವುದೇ ಸ್ಪಂದನ ದೊರೆತಿಲ್ಲವೆಂದು ಅಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.