ಮಡಿಕೇರಿ, ಫೆ. ೮: ಕೊಡಗಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಇಂದು ಕೂಡ ಮುಂದುವರಿದಿದ್ದು, ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸೋಮವಾರಪೇಟೆ ಬಿಟಿಸಿಸಿ ಸರ್ಕಾರಿ ಪದವಿ ಕಾಲೇಜು ಹಾಗೂ ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ಭಾರತಿ ಪದವಿ ಕಾಲೇಜುಗಳಲ್ಲಿ ಕೇಸರಿ ಶಾಲು ಹಾಗೂ ಹಿಜಾಬ್ ವಿವಾದ ಉಂಟಾಯಿತು.
ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಾರೆ ಎಂಬ ಕಾರಣಕ್ಕಾಗಿ ಕೆಲ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ವಿಜಯ್ ಅವರು ಸರ್ಕಾರದ ಆದೇಶದನ್ವಯ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವಂತಿಲ್ಲ ಎಂದು ಹೇಳಿದರು. ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರ ಪೋಷಕರನ್ನು ಕರೆಸಿದ ಅವರು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಗೋಳಿಕಜೆ ಧನಂಜಯ ಅವರ ನೇತೃತ್ವದಲ್ಲಿ ಸಭೆ ನಡೆಸಿದರು. ಸಭೆಯ ಬಳಿಕ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಧನಂಜಯ ಅವರು ಸರ್ಕಾರದ ಆದೇಶದನ್ವಯ ಕಾಲೇಜಿನಲ್ಲಿ ಸಮವಸ್ತç ಹೊರತುಪಡಿಸಿ ಹಿಜಾಬ್ ಆಗಲಿ ಕೇಸರಿ ಶಾಲುಗಳನ್ನಾಗಲಿ ಹಾಕಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ ಮೇರೆಗೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಕಳಚಿ ತರಗತಿಗಳಿಗೆ ತೆರಳಿದರು.
ಆದರೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರ ಪೋಷಕರು ಹಿಜಾಬ್ ಧರಿಸದೆ ನಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ವಿದ್ಯಾರ್ಥಿನಿಯರನ್ನು ಮನೆಗಳಿಗೆ ಕರೆದೊಯ್ದರು. ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಪೋಷಕ ಅಯೂಖ್ಖಾನ್ ಅವರು ನಾವು ನಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಹಿಜಾಬ್ ಧರಿಸದೆ ಕಾಲೇಜಿಗೆ ಕಳುಹಿಸುವುದಿಲ್ಲ. ಒಂದು ವೇಳೆ ಹಿಜಾಬ್ ಕಳಚಿಯೇ ಕಾಲೇಜಿಗೆ ಬರಬೇಕು ಎಂದು ಷರತ್ತು ವಿಧಿಸಿದರೆ ನಮ್ಮ ಮಕ್ಕಳನ್ನು ಬೇರೆ ಕಡೆಗೆ ಸೇರಿಸುತ್ತೇವೆ ಎಂದು ಹೇಳಿದರು.
ನಿನ್ನೆ ದಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಆ ಗೊಂದಲ ಇಂದು ಕೂಡ ಮುಂದುವರಿಯಬಹುದು ಎಂಬ ಕಾರಣಕ್ಕಾಗಿ ಪೊಲೀಸ್ ಇಲಾಖೆ ಸೂಚನೆಯಂತೆ ಇಂದು ಭೌತಿಕ ತರಗತಿಗಳನ್ನು ರದ್ದು ಮಾಡಿ ಆನ್ಲೈನ್ ತರಗತಿಗಳನ್ನು ಮಾತ್ರ ನಡೆಸಲಾಯಿತು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಪ್ರಾಂಶುಪಾಲ ಜಗತ್ ತಿಮ್ಮಯ್ಯ ಅವರು, ಕಾಲೇಜಿನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪೊಲೀಸ್ ಇಲಾಖೆ ನಿರ್ದೇಶನದಂತೆ ಆನ್ಲೈನ್ ತರಗತಿ ಮಾತ್ರ ನಡೆಸಲಾಯಿತು ಎಂದು ತಿಳಿಸಿದರು. ಈ ವಿವಾದ ಸಂಬAಧ ನ್ಯಾಯಾಲಯದ ತೀರ್ಪಿನ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕುಶಾಲನಗರ
ಕುಶಾಲನಗರ: ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ಕಲ್ಪಿಸಬಾರದು ಎಂದು ಆಗ್ರಹಿಸಿ ಕುಶಾಲನಗರದ ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರಕಾರಿ ಪಾಲಿಟೆಕ್ನಿಕ್ ಮತ್ತು ಕನ್ನಡ ಭಾರತಿ ಪದವಿ ಕಾಲೇಜಿನ ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ಕೇಸರಿ ಶಾಲುಧಾರಿಗಳಾಗಿ ಕಾಲೇಜಿಗೆ ಬಂದ ದೃಶ್ಯ ಕಂಡುಬAತು.
ಈ ಸಂದರ್ಭ ಕಾಲೇಜಿನ ತರಗತಿಗಳಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಶಿಕ್ಷಕರು ಅನುಮತಿ ಕಲ್ಪಿಸದ ಹಿನ್ನೆಲೆಯಲ್ಲಿ ಆವರಣದಲ್ಲಿ ನಿಂತು ಘೋಷಣೆ ಕೂಗಿ ನಂತರ ಕುಶಾಲನಗರ ಪಟ್ಟಣದ ಗಣಪತಿ ದೇವಾಲಯದ ಮುಂಭಾಗ ಸೇರಿದ ಸಾವಿರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಸ್ಥಳೀಯ ಹಿಂದೂಪರ ಸಂಘಟನೆಗಳ ಪ್ರಮುಖರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಶಾಲೆಯಲ್ಲಿ ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬಾರದು. ಸಮವಸ್ತç ಕಡ್ಡಾಯಗೊಳಿಸುವ ಸರ್ಕಾರ ಆದೇಶವನ್ನು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭ ಸಮೀಪದಲ್ಲಿ ನಿಂತಿದ್ದ ಕೆಲವು ವಿದ್ಯಾರ್ಥಿಗಳ ಮತ್ತು ಹಿಜಾಬ್ ಪರ ಗುಂಪು ಅಂಬೇಡ್ಕರ್ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ಪ್ರಾರಂಭಿಸಿದರು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಕೂಡಲೇ ಗುಂಪನ್ನು ಸಮಾಧಾನಿಸುವಲ್ಲಿ ಯಶಸ್ವಿಯಾದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಸೋಮವಾರಪೇಟೆ
ಸೋಮವಾರಪೇಟೆ: ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನಲ್ಲೂ ಕೇಸರಿ ಶಾಲು, ಹಿಜಾಬ್ ವಿವಾದ ಕಂಡುಬAದಿದ್ದು, ದಿಢೀರ್ ಘಟನೆಯಿಂದ ಗೊಂದಲಕ್ಕೀಡಾದ ಕಾಲೇಜು ಪ್ರಾಂಶುಪಾಲರು ತರಗತಿಗಳಿಗೆ ರಜೆ ಘೋಷಿಸುವ ಮೂಲಕ ಸದ್ಯದ ಮಟ್ಟಿಗೆ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇಂದು ಬೆಳಿಗ್ಗೆ ಮುಸ್ಲಿಂ ಸಮುದಾಯದ ೪ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಇದನ್ನು ಖಂಡಿಸಿದ ಕಾಲೇಜಿನ ಇತರ ಕೆಲ ವಿದ್ಯಾರ್ಥಿಗಳು, ಕಾಲೇಜಿನಲ್ಲಿ ಎಲ್ಲರೂ ಸಮಾನರಾಗಿದ್ದು, ಸಮವಸ್ತç ಧರಿಸಿ ಆಗಮಿಸಬೇಕು. ನಾವುಗಳೆಲ್ಲರೂ ಸಮವಸ್ತç ಧರಿಸಿದ್ದು, ಅವರುಗಳೂ ಅದೇ ನಿಯಮ ಪಾಲಿಸಬೇಕು. ಹಿಜಾಬ್ ಧರಿಸಿ ಬಂದರೆ ನಾವುಗಳು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹೋಗುತ್ತೇವೆ ಎಂದು ಪಟ್ಟುಹಿಡಿದರು.
ಇದರೊಂದಿಗೆ ನಿನ್ನೆ ದಿನವೂ ಕಾಲೇಜಿನಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಪ್ರಾಂಶುಪಾಲರು ಸಮವಸ್ತç ಧರಿಸಿ ಆಗಮಿಸುವಂತೆ ಹೇಳಿದ್ದರು. ಆದರೂ ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ತರಗತಿಗಳ ಒಳಗಿದ್ದಾರೆ. ಕೇಸರಿ ಶಾಲು ಧರಿಸಿರುವ ನಮ್ಮನ್ನು ತಡೆದಿರುವುದು ಸರಿಯಲ್ಲ. ನಾವುಗಳು ಶಾಲು ಧರಿಸಿಯೇ ತರಗತಿಗೆ ಪ್ರವೇಶಿಸುತ್ತೇವೆ. ಬೇಡವಾದಲ್ಲಿ ಹಿಜಾಬ್ ಧರಿಸಿರುವವರನ್ನು ತೆಗೆಯಲು ಹೇಳಿ, ನಾವು ಶಾಲು ತೆಗೆದು ಎಂದಿನAತೆ ತರಗತಿಗೆ ಹೋಗುತ್ತೇವೆ ಎಂದು ೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಟ್ಟುಹಿಡಿದರು.
ಈ ಸಂದರ್ಭ ಕಾಲೇಜು ಆವರಣದಲ್ಲಿ ಗೊಂದಲ ಉಂಟಾಯಿತು. ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕಾಗಮಿಸಿದ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ವಿರೂಪಾಕ್ಷ ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಯತ್ನಿಸಿದರು.
ಕಾಲೇಜು ಪ್ರಾಂಶುಪಾಲ ರಾಜು ಮಾತನಾಡಿ, ಈ ವಿವಾದದ ಬಗ್ಗೆ ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯಬೇಕು. ಅಲ್ಲಿಯವರೆಗೆ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಕಾಲೇಜಿಗೆ ರಜೆ ಘೋಷಣೆ ಮಾಡಿದ್ದು, ಮನೆಗಳಿಗೆ ತೆರಳುವಂತೆ ಸೂಚಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿದ್ಯಾರ್ಥಿಗಳು ನಮಗೆ ತರಗತಿಗಳು ಬೇಕು. ಕಾಲೇಜಿನಲ್ಲಿ ಎಲ್ಲರೂ ಸಮಾನರಾಗಿದ್ದು, ಅವರುಗಳು ಹಿಜಾಬ್ ಧರಿಸಿದರೆ ನಾವುಗಳು ಕೇಸರಿ ಶಾಲು ಧರಿಸುತ್ತೇವೆ. ಅವರಿಗೊಂದು ನ್ಯಾಯ; ನಮಗೊಂದು ನ್ಯಾಯ ಇರಬಾರದು. ಹಿಜಾಬ್ ಸಂಬAಧ ನಿನ್ನೆದಿನ ಪ್ರಾಂಶುಪಾಲರಿಗೆ ಕೆಲವರು ಬೆದರಿಕೆ ಒಡ್ಡಿದ್ದಾರೆ. ಅವರುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಬೆದರಿಕೆ ಹಾಕಿದ್ದರೆ ಪೊಲೀಸ್ ಇಲಾಖೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇಂದು ತರಗತಿಗೆ ರಜೆ ಘೋಷಿಸಿದ್ದು, ವಿದ್ಯಾರ್ಥಿಗಳು ಮನೆಗೆ ತೆರಳುವಂತೆ ಇನ್ಸ್ಪೆಕ್ಟರ್ ಮಹೇಶ್ ಸೂಚಿಸಿದರು. ನಂತರ ವಿದ್ಯಾರ್ಥಿಗಳು ಕೇಸರಿ ಶಾಲಿನೊಂದಿಗೆ ಸುಮಾರು ೩ ಕಿ.ಮೀ. ಮೆರವಣಿಗೆ ನಡೆಸಿ, ಪಟ್ಟಣದ ಜೇಸೀ ವೇದಿಕೆ ಬಳಿ ಜಮಾಯಿಸಿದರು.
ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿ ಕೌಶಿಕ್ ಹಾಗೂ ವಿದ್ಯಾರ್ಥಿನಿ ಧನ್ಯ ಅವರುಗಳು, ಮುಸ್ಲಿಂ ವಿದ್ಯಾರ್ಥಿನಿಯರು ನಾಳೆಯಿಂದ ಹಿಜಾಬ್ ಧರಿಸಿ ಬಂದರೆ ನಾವುಗಳು ಕೇಸರಿ ಶಾಲು ಧರಿಸಿ ಹೋಗುತ್ತೇವೆ. ಅವರು ತೆಗೆಯುವವರೆಗೂ ನಾವು ಶಾಲು ತೆಗೆಯುವುದಿಲ್ಲ ಎಂದರು.