ಗೋಣಿಕೊಪ್ಪಲು, ಫೆ. ೯: ರಸ್ತೆ ಕಾಮಗಾರಿಯಲ್ಲಿ ಗುತ್ತಿಗೆದಾರರು ಗುಣಮಟ್ಟದ ಕೆಲಸ ನಿರ್ವಹಿಸದೆ ಕಳಪೆ ಕಾಮಗಾರಿ ನಡೆಸಿದ್ದಾರೆ ಎಂದು ಅಮ್ಮತ್ತಿ ಹಿರಿಯ ನಾಗರಿಕರು ಆರೋಪಿಸಿದ್ದಾರೆ.

ಅಮ್ಮತ್ತಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಮಾಡುತ್ತಿರುವ ಚರಂಡಿಯ ಕಾಮಗಾರಿ ಹಾಗೂ ಮುಖ್ಯ ರಸ್ತೆ ಡಾಂಬರೀಕರಣಕ್ಕೆ ಎರಡು ಕೋಟಿ ಮೂವತ್ತಾರು ಲಕ್ಷ ಹಣ ಮಂಜೂರು ಆಗಿದೆ. ಈ ಹಣದಲ್ಲಿ ಗುತ್ತಿಗೆದಾರ ಮಾಡಿರುವ ಕೆಲಸವೂ ಸಂಪೂರ್ಣ ಕಳಪೆಯಿಂದ ಕೂಡಿದ್ದು ಈ ನಿಟ್ಟಿನಲ್ಲಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರಿಗೆ ಗ್ರಾಮದ ಮುಖಂಡರು ಲಿಖಿತ ದೂರು ನೀಡಿ ಒತ್ತಾಯಿಸಿದ್ದರು.

ಈ ಹಿನ್ನೆಲೆ ಕಾಮಗಾರಿ ಸ್ಥಳಕ್ಕೆ ತೆರಳಿದ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾಡಿರುವ ಕಾಮಗಾರಿ ಮೇಲ್ನೋಟಕ್ಕೆ ಕಳಪೆ ಆಗಿರುವುದನ್ನು ಮನಗಂಡ ಸುಜಾ ಕುಶಾಲಪ್ಪ ಸ್ಥಳದಿಂದ ಲೋಕೋಪಯೋಗಿ ಇಲಾಖೆಯ ಎಇಇ ರವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ಕಾಮಗಾರಿ ಪರಿಶೀಲನೆ ನಡೆಸಲು ನಿರ್ದೇಶನ ನೀಡಿದರು.

ಗುತ್ತಿಗೆದಾರರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸುಜಾ ಕುಶಾಲಪ್ಪ, ಈ ರೀತಿಯಲ್ಲಿ ಕಳಪೆ ಕಾಮಗಾರಿ ಕಂಡು ಬಂದಲ್ಲಿ ಜಿಲ್ಲೆಯ ಗುಣ ನಿಯಂತ್ರಣ ಪರಿವೀಕ್ಷಣಾ ತಂಡಕ್ಕೆ ತಮ್ಮ ಮೇಲೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ವೇಳೆ ದೂರವಾಣಿಯ ಕರೆಗೆ ಉತ್ತರಿಸಿದ ಗುತ್ತಿಗೆದಾರ, ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ನಡೆಸುತ್ತೇನೆ. ಅಲ್ಲದೆ ಕಾಮಗಾರಿ ಸಂಪೂರ್ಣಗೊಳಿಸುವ ಭರವಸೆ ನೀಡಿದರು. ಗುತ್ತಿಗೆದಾರರ ಮಾತಿಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ,ಈತ ಯಾವುದೇ ಕೆಲಸ ಕಾರ್ಯ ನಡೆಸಿದರೂ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಇವರನ್ನು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡುವಂತೆ ಪಟ್ಟು ಹಿಡಿದರು. ಅಂತಿಮವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಗ್ರಾಮದ ಹಿರಿಯರಾದ ರೈತ ಸಂಘದ ಅಮ್ಮತ್ತಿ ವಲಯದ ಅಧ್ಯಕ್ಷ ಕಾವಡಿಚಂಡ ಗಣಪತಿ, ಪ್ರಮುಖರಾದ ಕೇಚಂಡ ಕುಶಾಲಪ್ಪ, ನೆಲ್ಲಮಕ್ಕಡ ವಿವೇಕ್ ದೇವಯ್ಯ, ಮೊಳ್ಳೆರ ಹರ್ಷ, ಕುಟ್ಟಂಡ ವಿನು ಪೂವಯ್ಯ, ಮೊಳ್ಳೆರ ರತನ್ ಪೂಣಚ್ಚ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮೂಕೊಂಡ ಶಶಿ ಸುಬ್ರಮಣಿ, ಸುವೀನ್ ಗಣಪತಿ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು. - ಹೆಚ್.ಕೆ.ಜಗದೀಶ್