ಮಡಿಕೇರಿ, ಜ. ೨೯: ಬಹುಭಾಷಾ ಚಿತ್ರನಟಿಯಾಗಿ ಗುರುತಿಸಿಕೊಂಡು ಇದೀಗ ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡಿರುವ ಕೊಡಗಿನ ತಾರೆ ಹರ್ಷಿಕಾಪೂಣಚ್ಚ ಇದೀಗ ಹಲವಾರು ಚಿತ್ರಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಕೊರೊನಾ ಸಮಯದಲ್ಲಿ ಇಡೀ ರಾಜ್ಯಾದ್ಯಂತ ಸಾಮಾಜಿಕ ಕಳಕಳಿಯ ಸೇವೆಯ ಮೂಲಕ ಭಾರೀ ಸುದ್ದಿಯಲ್ಲಿದ್ದ ಹರ್ಷಿಕಾ ಇದೀಗ ಮತ್ತೆ ನಟನೆಯ ಮೂಲಕ ಸುದ್ದಿಯಾಗುತ್ತಿದ್ದಾರೆ. ಈಗಾಗಲೇ ಭೋಜ್‌ಪುರಿ ಭಾಷಾ ಚಿತ್ರ ರಂಗದಲ್ಲಿ ಸಂಚಲನ ಮೂಡಿಸಿರುವ ಈಕೆ ಬಿಡುವಿನ ಮಧ್ಯೆ ಕನ್ನಡ ಚಿತ್ರರಂಗದಲ್ಲೂ ಮುಖ ಮಾಡಿದ್ದಾರೆ.

ಇವರ ಅಭಿನಯದ ಚೊಚ್ಚಲ ಭೋಜ್‌ಪುರಿ ಸಿನಿಮಾ ಹಮ್ ಹೆ ರಾಹಿಪ್ಯಾರ್ ಕೆ ಸೂಪರ್ ಹಿಟ್ ಆಗಿದೆ. ಇದರ ಬೆನ್ನಲ್ಲೇ ಸಜನ್‌ರೇ ಜೂಟ್ ಮತ್ ಬೋಲೋ ಹಾಗೂ ಸನಮ್ ಮೇರೆ ಹಮ್ರಾಜ್ ಎಂಬ ಇನ್ನೆರಡು ಭೋಜ್‌ಪುರಿ ಸಿನಿಮಾಗಳು ತೆರೆಕಾಣಲು ಸಜ್ಜಾಗಿದೆ.

ಇದೀಗ ಕನ್ನಡ ಚಿತ್ರರಂಗದತ್ತ ಮತ್ತೆ ಹರ್ಷಿಕಾ ಮರಳಿದ್ದು, ಹಲವು ವರ್ಷಗಳ ಅಂತರದ ಬಳಿಕ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗೆ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ‘ಸ್ತಬ್ಧ’ ಹೆಸರಿನ ಈ ಹೊಸ ಸಿನಿಮಾನದ ಮುಹೂರ್ತ ಈಗಾಗಲೇ ನೆರವೇರಿದ್ದು, ಈ ಚಿತ್ರ ಸದ್ದು ಮಾಡಲಾರಂಭಿಸಿದೆ.

ರಾಘವೇAದ್ರ ರಾಜ್‌ಕುಮಾರ್ ಹಾಗೂ ಹರ್ಷಿಕಾ ಸ್ತಬ್ಧದಲ್ಲಿ ಅಪ್ಪ - ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಡಾ. ರಾಜ್‌ಕುಮಾರ್ ಅವರ ಮೂವರು ಪುತ್ರರಾದ ಖ್ಯಾತ ನಟರೊಂದಿಗೆ ಅಭಿನಯಿಸುತ್ತಿರುವ ಖ್ಯಾತಿಗೆ ಇವರು ಪಾತ್ರರಾಗುತ್ತಿದ್ದಾರೆ. ನಟ ಶಿವಣ್ಣ, ಪುನೀತ್ ಸರ್ ಜತೆ ನಟಿಸಿದ್ದೆ. ಇದೀಗ ರಾಘಣ್ಣ ಜತೆ ಅವರ ಮಗಳ ಪಾತ್ರದಲ್ಲಿ ಅಭಿನಯಿಸುತ್ತಿ ದ್ದೇನೆ. ಕನ್ನಡದ ಈ ಖ್ಯಾತ ನಟರೊಂದಿಗೆ ನಟಿಸುವ ಅವಕಾಶ ದೊರೆತ ಬಗ್ಗೆ ಸಂತಸವಿರುವುದಾಗಿ ಹರ್ಷಿಕಾ ಹೇಳಿದ್ದಾರೆ.

ಈಕೆಯ ಅಭಿನಯದ; ಸೂಪರ್ ಆಗಿದೆ ಲೈಫು, ಕಟ್ಲೆ, ಕಾಲನಾಗಿಣಿ ಈಗಾಗಲೇ ತೆರೆಗೆ ಬರಲು ಸಿದ್ಧವಾಗಿದೆ. ಇದರೊಂದಿಗೆ ಹಗ್ಗ, ತಾಯ್ತ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ಕೊರೊನಾ ಸೇವೆಯ ಬಳಿಕ ವೃತ್ತಿ ಜೀವನವಾದ ಅಭಿನಯದಲ್ಲಿ ಇದೀಗ ಮತ್ತೆ ಇವರು ‘ಬ್ಯುಸಿ’ ಯಾಗಿದ್ದಾರೆ. -ಶಶಿ