ಸೋಮವಾರಪೇಟೆ,ಫೆ.೭: ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಮೂಲಕ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ.೧೦.೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸ್ವಚ್ಛ ಸಂಕೀರ್ಣವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಸ್ವಚ್ಛ-ಸುಂದರ ಭಾರತ ನಿರ್ಮಾಣ ಮಾಡುವ ಉದ್ದೇಶದಿಂದ ಸ್ವಚ್ಛ ಭಾರತ್ ಯೋಜನೆಯನ್ನು ಸ್ವತಃ ಪ್ರಧಾನಿಗಳೇ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಜಾರಿಗೆ ತಂದಿದ್ದಾರೆ. ಇದರ ಉದ್ದೇಶ ಸಾಕಾರಗೊಳ್ಳಬೇಕು ಎಂದರು.
ಈ ಸಂದರ್ಭ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ರೋಹಿಣಿ, ಸದಸ್ಯರಾದ ನವೀನ್, ನಾಗರಾಜು, ಮಂಜುನಾಥ್, ವೆಂಕಟೇಶ್, ಮಲ್ಲಿಕ, ಗಣೇಶ್, ಪ್ರಮುಖರಾದ ಎಸ್.ಬಿ. ಭರತ್ಕುಮಾರ್, ಗೌಡಳ್ಳಿ ಸುನಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.