ಸೋಮವಾರಪೇಟೆ,ಫೆ.೭: ತಾಲೂಕಿನ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೂಜಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ರೂ. ೫ ಲಕ್ಷ ಅನುದಾನ ಮೀಸಲಿಡುವಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಜಿಲ್ಲಾ ಪಂಚಾಯತ್ ಅಭಿಯಂತರ ಟಿ.ಪಿ. ವೀರೇಂದ್ರ ಅವರಿಗೆ ಸೂಚಿಸಿದರು.

ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲು ಆಗಮಿಸಿದ್ದ ಶಾಸಕರನ್ನು ಭೇಟಿ ಮಾಡಿದ ಕೂಜಗೇರಿ ಗ್ರಾಮಸ್ಥರು, ನಮ್ಮ ಗ್ರಾಮಕ್ಕೆ ತೆರಳಲು ಈವರೆಗೆ ಸುಸಜ್ಜಿತ ರಸ್ತೆ ಇಲ್ಲ. ಕೆರೆ ಏರಿಯ ಮೇಲೆ ನಡೆದುಕೊಂಡೇ ಗ್ರಾಮ ತಲುಪಬೇಕಾಗಿದೆ. ಮಳೆಗಾಲದಲ್ಲಂತೂ ಮಣ್ಣಿನ ರಸ್ತೆಯಲ್ಲಿ ನಡೆಯಲೂ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ರಸ್ತೆ ಅವ್ಯವಸ್ಥೆಯಿಂದ ಗ್ರಾಮಕ್ಕೆ ಯಾವುದೇ ವಾಹನಗಳೂ ಬರುತ್ತಿಲ್ಲ. ಈ ಕಾರಣದಿಂದ ದಿನಸಿ ಸಾಮಾಗ್ರಿಗಳನ್ನು ಹೊತ್ತು ಕಾಲ್ನಡಿಗೆಯಲ್ಲೇ ತೆರಳುವಂತಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವಾಸಿಗಳು ಹೆಚ್ಚಿದ್ದರೂ ಸಹ ರಸ್ತೆಗೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ ಎಂದು ಶಾಸಕರ ಗಮನ ಸೆಳೆದರು.

ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಕ್ಷಣ ೫ ಲಕ್ಷ ಅನುದಾನ ಮೀಸಲಿಟ್ಟು ಕಾಮಗಾರಿ ಪ್ರಾರಂಭಿಸುವAತೆ ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯಿತಿ ಅಭಿಯಂತರ ಟಿ.ಪಿ. ವೀರೇಂದ್ರ ಅವರಿಗೆ ರಂಜನ್ ಸೂಚಿಸಿದರು. ಗ್ರಾಮಸ್ಥರಾದ ರಾಜು, ವೀರಪ್ಪ, ಮಲ್ಲಿಕಾರ್ಜುನ, ಪ್ರವೀಣ್ ಸೇರಿದಂತೆ ಇತರರು ರಸ್ತೆ ಅವ್ಯವಸ್ಥೆಯ ಬಗ್ಗೆ ಶಾಸಕರಿಗೆ ವಿವರಿಸಿದರು.