ಸಿದ್ದಾಪುರ ಪೆ ೭: ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಯು ಮುಂಬರುವ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ವಿಲೀನವಾಗುವುದರಲ್ಲಿ ಸಂಶಯವಿಲ್ಲ ಎಂದು ನೆಲ್ಲಿಹುದಿಕೇರಿ ಜೆಡಿಎಸ್ ಯುವ ಘಟಕ ರಸ್ತೆ ಕಾಮಗಾರಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜೆಡಿಎಸ್ ಪಕ್ಷದ ತಾಲೂಕು ಉಪಾಧ್ಯಕ್ಷ ಶಿಹಾಬುದ್ದೀನ್ ಹಾಗೂ ಸಂಘಟನಾ ಕಾರ್ಯದರ್ಶಿ ಶರತ್, ಶಾಸಕರ ಅನುದಾನದಲ್ಲಿ ನೆಲ್ಲಿಹುದಿಕೇರಿ ನಗರದಲ್ಲಿ ನಡೆದ ಕಾಮಗಾರಿಯು ಸೂಕ್ತ ಮೇಲ್ವಿಚಾರಣೆ ಇಲ್ಲದೆ ಕಳಪೆಯಾಗಿದೆ. ಗ್ರಾ.ಪಂ. ಅಧ್ಯಕ್ಷರೂ, ಸದಸ್ಯರು ಈ ಬಗ್ಗೆ ಗಮನ ಹರಿಸಿಲ್ಲ. ಮುಕ್ತಾಯಗೊಂಡ ರಸ್ತೆ ಕಾಮಗಾರಿಯ ಬಹುತೇಕ ಜಾಗದಲ್ಲಿ ಡಾಂಬರು ಕಿತ್ತು ಹೋಗುತ್ತಿದೆ. ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಂಡ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ಸಂಬAಧಪಟ್ಟವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.