ಮಡಿಕೇರಿ, ಫೆ. ೭: ಭಾಗಮಂಡಲದಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿರುವ ರಾಜ್ಯಮಟ್ಟದ ಜೇನು ಕೃಷಿ ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಜೇನು ಕೃಷಿಗೆ ಸಂಬAಧಿಸಿದ ಮ್ಯೂಸಿಯಂ, ಮಧುವನ ಕೇಂದ್ರದಲ್ಲಿನ ಜೇನು ಸಾಕಾಣಿಕೆಯ ಪ್ರಾತ್ಯಕ್ಷಿಕೆಯನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು.

ತರಬೇತಿ ಕೇಂದ್ರದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ವಿದ್ಯಾರ್ಥಿಗಳು ಜೇನು ಕೃಷಿಯನ್ನು ಒಂದು ಉದ್ಯಮವಾಗಿ ಕೈಗೊಂಡು ಜಿಲ್ಲೆಯಲ್ಲಿ ಹೆಚ್ಚಿನ ಕೃಷಿಕರು ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ತರಬೇತಿ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.

ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ ರೈತ ಉತ್ಪಾದಕರ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯವರು ಕೈಗೊಂಡಿರುವ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿದರು.

ಎಫ್.ಪಿ.ಆರ್‌ಒ ಬ್ರಾಂಡ್‌ನಲ್ಲಿ ಉತ್ಪಾದಿಸಿದ ಕಾಳುಮೆಣಸು, ಏಲಕ್ಕಿ, ಜೇನು, ಕಾಫಿ ಪುಡಿ, ತೆಂಗಿನಎಣ್ಣೆಯನ್ನು ವೀಕ್ಷಿಸಿದರು. ಈ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗುವAತೆ ಜಿಲ್ಲಾಧಿಕಾರಿ ತಿಳಿಸಿದರು.ಬಳಿಕ ಜೇನು ಸಹಕಾರ ಸಂಘಕ್ಕೆ ಭೇಟಿ ನೀಡಿ ಜೇನು ಸಂಸ್ಕರಣಾ ಘಟಕವನ್ನು ವೀಕ್ಷಿಸಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್, ತಹಶೀಲ್ದಾರ್ ಪಿ.ಎಸ್. ಮಹೇಶ್, ಜೇನು ಕೃಷಿ ಪ್ರವರ್ತಕ ವಸಂತ, ಭಗಂಡೇಶ್ವರ ಸಹಕಾರ ಸಂಘದ ಅಧ್ಯಕ್ಷ ಕೋಡಿ ಪೊನ್ನಪ್ಪ, ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹಾಗೂ ಇತರರು ಇದ್ದರು.