ಚೆಯ್ಯಂಡಾಣೆ, ಫೆ. ೬: ಕೊಡಗು ಜಿಲ್ಲಾ ಪಂಚಾಯಿತಿ ನರಿಯಂದಡ ಗ್ರಾಮ ಪಂಚಾಯಿತಿ ೨೦೨೧-೨೨ನೇ ಸಾಲಿನ ಎಂ.ಎನ್.ಆರ್.ಜಿ.ಎ. ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಲೆಕ್ಕ ಪರಿಶೋಧನೆಯ ಮೇಲುಸ್ತುವಾರಿ ವಹಿಸಿ ಮಾತನಾಡಿದ ಜಿಲ್ಲಾ ಎನ್‌ಆರ್‌ಹೆಚ್ ಸಂಯೋಜಕ ಪ್ರೀತಮ್ ಪೊನ್ನಪ್ಪ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳು ನಡೆದ ಮಾಹಿತಿಯನ್ನು ಪರಿಶೀಲಿಸಿದ್ದು, ಉತ್ತಮ ಕಾಮಗಾರಿ ನಡೆದಿದೆ. ಇನ್ನು ಕೂಡ ಗ್ರಾಮಸ್ಥರು ಕಾಮಗಾರಿಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ನೋಡಲ್ ಅಧಿಕಾರಿ ಅರುಣ್ ರತಿ ಮಾತನಾಡಿ, ಎಲ್ಲಿ ಸರಕಾರದ ಅನುದಾನ ಇರುತ್ತದೋ ಅಲ್ಲಿ ಕಣ್ಗಾವಲು ಇಡಬೇಕು. ಸಾಮಾಜಿಕ ಆಡಿಟರ್ ಎಂದರೆ ಸ್ವಲ್ಪ ವಿಶೇಷತೆ ಇದೆ. ಸಾರ್ವಜನಿಕರ ಮುಂದೆ ಸಾರ್ವಜನಿಕವಾಗಿ ಆರ್ಥಿಕ ವರ್ಷದಲ್ಲಿ ಕಾರ್ಯಕ್ರಮಗಳಲ್ಲಿ ಯಾವುದೆಲ್ಲ ಪರಿಶೋಧನೆ ಆಗುತ್ತೆ ಅದರ ಖರ್ಚು ವೆಚ್ಚಗಳನ್ನು ಸಾರ್ವಜನಿಕರ ಮುಂದೆ ಪ್ರಸ್ತುತಪಡಿಸುವುದು.

ಇದು ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಸಹಕಾರಿಯಾಗುತ್ತದೆ. ಸಾರ್ವಜನಿಕರು ತಮಗೆ ಬೇಕಾದ ಸವಲತ್ತುಗಳಿಗೆ ಗ್ರಾಮ ಪಂಚಾಯಿತಿ ಮುಖಾಂತರ ಅರ್ಜಿ ಸಲ್ಲಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಲು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದರು.

ತಾಲೂಕು ಸಂಯೋಜಕಿ ಅಕ್ಷತಾ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸವಲತ್ತು ಪಡೆದುಕೊಳ್ಳಲು ಕಾರ್ಮಿಕ ಕಾರ್ಡ್ ಇರಲೇ ಬೇಕು. ಇದ್ದರೆ ದನದ ಕೊಟ್ಟಿಗೆ, ಆಡು ಶೆಡ್, ಕೋಳಿ ರೂಮ್, ಮೀನು ಹೊಂಡ,ಕೃಷಿ ಹೊಂಡ, ಎರೆಹುಳ ತೊಟ್ಟಿ ಹಾಗೂ ತೋಟಗಾರಿಕೆ ಇಲಾಖೆಯಿಂದ ವಿಶಿಷ್ಟವಾದ ಬೆಳೆಗಳನ್ನು ನೀಡುತ್ತಾರೆ. ಕೊಡಗಿನಲ್ಲಿ ಅಡಿಕೆ, ತೆಂಗು ಹಾಗೂ ಕರಿಮೆಣಸು ಬಳ್ಳಿಗಳನ್ನು ಕೊಡುತ್ತಾರೆ. ಇದೆಲ್ಲ ಪಡೆದುಕೊಳ್ಳಲು ಮೊದಲು ಕಾರ್ಮಿಕ ಕಾರ್ಡ್, ಜಾಬ್ ಕಾರ್ಡ್ ಇರಲೇಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಂತ್ರಿಕ ಸಹಾಯಕಿ ನಾವಾನಿ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾಮ ಲೆಕ್ಕಿಗೆ ಪೂಜಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಹಾಗೂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಸ್ವಾಗತಿಸಿ, ವಂದಿಸಿದರು.