ಗೋಣಿಕೊಪ್ಪಲು, ಫೆ. ೭: ಗ್ರಾ.ಪಂ.ಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರದ ಪ್ರಯೋಜನವನ್ನು ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಪಂ. ವತಿಯಿಂದ ನಡೆಯುತ್ತಿದೆ. ಈ ಸಾಲಿಗೆ ಪಂಚಾಯಿತಿ ವ್ಯಾಪ್ತಿಗೆ ಬರುವ ವಿಶೇಷಚೇತನರಿಗೆ ನಗದು ರೂಪದಲ್ಲಿ ಹಾಗೂ ವಸ್ತು ರೂಪದಲ್ಲಿ ಸವಲತ್ತುಗಳು ವಿತರಿಸಿದ್ದೇವೆ. ಇದರ ಸದುಪಯೋಗಪಡೆದುಕೊಳ್ಳು ವಂತೆ ಗ್ರಾ.ಪಂ. ಅಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ ತಿಳಿಸಿದರು.
ಹಾತೂರು ಗ್ರಾ.ಪಂ.ಆವರಣದಲ್ಲಿ ಆಯೋಜಿಸಲಾಗಿದ್ದ ವಿಶೇಷಚೇತನರಿಗೆ ಪಂಚಾಯಿತಿ ನಿಧಿಯಿಂದ ಶೇ.೫ ಅನುದಾನದಲ್ಲಿ ಸವಲತ್ತುಗಳು ವಿತರಿಸಿ ಅವರು ಮಾತನಾಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿಶೇಷಚೇತನರನ್ನು ಗುರುತಿಸಿ ನಿಯಮಾನುಸಾರ ಅರ್ಹ ಪಲಾನುಭವಿಗಳಿಗೆ ಸವಲತ್ತುಗಳು ನೀಡಲಾಗಿದೆ, ಮುಂದೆಯೂ ವಿವಿಧ ಯೋಜನೆಯಲ್ಲಿ ಬರುವ ಸವಲತ್ತುಗಳು ನೀಡುವ ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಪಿಡಿಒ ಉಜ್ಮ ಜಬೀನ್ ಮಾತನಾಡಿ, ೨೦೨೧-೨೨ನೇ ಸಾಲಿನ ಶೇ. ೫ ಅನುದಾನವನ್ನು ಬಳಸಿಕೊಂಡು ಪ್ರತಿ ವಿಶೇಷ ಚೇತನರಿಗೆ ತಲಾ ೩ ಸಾವಿರ ಮೌಲ್ಯದಲ್ಲಿ ವಸ್ತುಗಳ ರೂಪದಲ್ಲಿ ನೀಡಲಾಗಿದೆ, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಪಂಚಾಯಿತಿ ಉಪಾಧ್ಯಕ್ಷೆ ಸುಮಾ, ಸದಸ್ಯರು ಹಾಜರಿದ್ದರು.