ಮಡಿಕೇರಿ, ಫೆ.೭: ವಿದ್ಯಾಭ್ಯಾಸದ ಪಯಣದ ಒಂದು ಹಂತವನ್ನು ಮುಗಿಸಿ ಮುಂದಿನ ಹೆಜ್ಜೆಗೆ ಅಣಿಯಾಗುತ್ತಿರುವ ವಿದ್ಯಾರ್ಥಿಗಳು ತಮ್ಮಶೈಕ್ಷಣಿಕ ಜೀವನದ ಸವಿ ನೆನಪುಗಳ ಬುತ್ತಿಯೊಂದಿಗೆ ಭವಿಷ್ಯದ ದಿನಗಳತ್ತ ಹೆಜ್ಜೆ ಹಾಕಬೇಕು ಎಂದು ಸಂಸ್ಥೆಯ ಪ್ರಾಚಾರ್ಯರಾದ ಅಲೆಕ್ಸ್ ರಾಣಿ ಅಭಿಪ್ರಾಯಪಟ್ಟರು.

ನಗರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ‘ನೆನಪಿನ ಬುತ್ತಿಗೆ ಸವಿ ನೆನಪುಗಳ ತುತ್ತು' ಎನ್ನುವ ಹೊಸ ಪರಿಕಲ್ಪನೆಯೊಂದಿಗೆ ಹಮ್ಮಿಕೊಳ್ಳಲಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲಾ -ಕಾಲೇಜುಗಳಲ್ಲಿ ಕಳೆದ ದಿನಗಳು ಸವಿ ನೆನಪುಗಳಾಗಿ ಮಕ್ಕಳ ಮನಗಳಲ್ಲಿ ಉಳಿಯುವಂತಾಗಬೇಕು. ಮಕ್ಕಳು ಆ ನೆನಪುಗಳ ಜೊತೆಗೆ ಮುಂದೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರೆವರೆಂಡ್ ಫಾದರ್ ನವೀನ್, ಮೌಲ್ಯಾಧರಿತ ಶಿಕ್ಷಣದಿಂದ ಮಾತ್ರ ನಿಜವಾದ ಜ್ಞಾನದ ಗಳಿಕೆ ಸಾಧ್ಯ. ಗುರು -ಹಿರಿಯರಲ್ಲಿ ವಿನಮ್ರರಾಗಿ, ಪ್ರಾಮಾಣಿಕ ಪ್ರಯತ್ನ ಮಾಡುವ ವಿದ್ಯಾರ್ಥಿಗಳು ಮಾತ್ರ ವಿದ್ಯಾಭ್ಯಾಸದ ನಿರೀಕ್ಷಿತ ಗುರಿ ತಲುಪಲು ಸಾಧ್ಯ ಎಂದು ಹೇಳಿದರು. ಪ್ರಮಾಣ ಪತ್ರ, ಪ್ರಶಸ್ತಿ ಪತ್ರ, ಅಂಕ ಪಟ್ಟಿಗಳನ್ನು ಒಟ್ಟು ಮಾಡಿಕೊಂಡು ಉನ್ನತ ಗಳಿಕೆಯ ಕೆಲಸ ಗಿಟ್ಟಿಸಿಕೊಳ್ಳು ವುದಷ್ಟೇ ವಿದ್ಯಾರ್ಜನೆಯ ಗುರಿಯಾಗಿರದೇ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದೂ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಂಸ್ಥೆಯ ಸಂಚಾಲಕರಾದ ಸಿಸ್ಟರ್ ಆಂತೋಣಿಯಮ್ಮ ಮಾತನಾಡಿದರು.

‘ದಿ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್’ ಮತ್ತು ‘ದಿ ಬೆಸ್ಟ್ ಹೌಸ್ ಆಫ್ ದ ಇಯರ್’ ಪ್ರಶಸ್ತಿಗಳನ್ನು ಈ ಸಂದರ್ಭ ವಿತರಿಸಲಾಯಿತು. ಅಕ್ಷಿತಾ ಹೆಚ್ ಎ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ಗಳಿಸಿದರೆ ದಯಾ ‘ಬೆಸ್ಟ್ ಹೌಸ್’ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

೨೦೨೧-೨೨ನೇ ಸಾಲಿನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಮತ್ತು ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾಲೇಜು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ತೇಜಾವತಿ ನಿರೂಪಿಸಿದರು. ಪ್ರಥಮ ಪಿ ಯು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮನ ಸೆಳೆಯಿತು. ದ್ವಿತೀಯ ಪಿಯು ಮಕ್ಕಳಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.

ಕಾಲೇಜಿನ ಕನ್ನಡ ಉಪನ್ಯಾಸಕಿ ಕೆ. ಜಯಲಕ್ಷಿö್ಮ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನಾಯಕಿ ಆರುಶಿ ಅಯ್ಯಪ್ಪ ವಂದಿಸಿದರು. ಜಯಲಕ್ಷ್ಮಿ ಹಾಗೂ ಆರ್ಥರ್ ಕಿರಣ್ ನಿರೂಪಿಸಿದರು.