ಮಡಿಕೇರಿ, ಫೆ. ೭: ಕೊಡಗಿನ ಮೂಲ ಜನಾಂಗವನ್ನು ಕತ್ತಲೆಯಲ್ಲಿಡುವ ಹುನ್ನಾರ ಕಳೆದ ಹತ್ತು ವರ್ಷಗಳಿಂದ ಪದೇಪದೇ ನಡೆಯುತ್ತಿದ್ದು, ತಲಕಾವೇರಿ ಭಾಗಮಂಡಲ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಅಮ್ಮ ಕೊಡವ ಜನಾಂಗವನ್ನು ಕೈ ಬಿಟ್ಟಿರುವ ಬಗ್ಗೆ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು, ಕೂಡಲೇ ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿಯ ಪುನರ್ ಪರಿಶೀಲನೆ ಮಾಡಬೇಕು ಕೊಡವ ಹಾಗೂ ಅಮ್ಮ ಕೊಡವ ಜನಾಂಗಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕೇವಲ ಎರಡು ಸ್ಥಾನಗಳನ್ನು ನೀಡಿ ಕೊಡವ ಜನಾಂಗವನ್ನು ಕತ್ತಲೆಯಲ್ಲಿಟ್ಟರೆ, ಈ ಹಿಂದೆ ಇಲ್ಲಿನ ಮುಖ್ಯ ಪೂಜಾರಿಗಳು ಎಂದು ಹೇಳಲಾಗುವ ಅಮ್ಮ ಕೊಡವ ಜನಾಂಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ದೂರಿದ್ದಾರೆ. ಸಮಿತಿಯಲ್ಲಿ ಸ್ಥಾನ ನೀಡದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ವಿವರಿಸಿದ್ದಾರೆ.