ಮಡಿಕೇರಿ, ಫೆ. 5: ಶ್ರೀರಂಗಪಟ್ಟಣದಿಂದ ಗುಡ್ಡೆಹೊಸೂರಿನ ತನಕ ಚತುಷ್ಪÀಥದ ಹೆದ್ದಾರಿ ಯೋಜನೆ ರೂಪಿಸಲಾಗಿದೆ. ಇದರಿಂದ ಜನರಿಗೆ ಬಹಳ ಪ್ರಯೋಜನವಾಗಲಿದ್ದು, ಮೇ ತಿಂಗಳಿನಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಸುದರ್ಶನ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೂ. 9 ಸಾವಿರದ 500 ಕೋಟಿ ವೆಚ್ಚದಲ್ಲಿ ಬೆಂಗಳೂರು-ಮೈಸೂರು ನಡುವೆ 10 ಪಥದ ರಾಷ್ಟ್ರೀಯ ಹೆದ್ದಾರಿ ಮಾಡುವ ಯೋಜನೆಯನ್ನು ಕೈಗೆತ್ತಿಗೊಳ್ಳಲಾಗಿದೆ. 2018ರಲ್ಲಿ ಈ ಯೋಜನೆ ಘೋಷಣೆಯಾದಾಗ ರೂ. 6,400 ಕೋಟಿ ಎಂದು ಅಂದಾಜಿಸಲಾಗಿತ್ತು. ಇದೀಗ ವೆಚ್ಚ ಹೆಚ್ಚಾಗಿದೆ. 6 ಪಥ ಎಕ್ಸ್ಪ್ರೆಸ್ ಲೈನ್ ಹಾಗೂ ಡಬಲ್ ಸರ್ವೀಸ್ ರಸ್ತೆ ಸೇರಿ ಒಟ್ಟು 10 ಪಥದ ಹೆದ್ದಾರಿ ಇದಾಗಿರುತ್ತದೆ. ಈ ಹೆದ್ದಾರಿಯನ್ನು ಮುಂದಿನ ದಸರಾದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದೊಂದಿಗೆ ಮಾತನಾಡಿದಾಗ ರೂ. 3,993 ಕೋಟಿ ವೆಚ್ಚದಲ್ಲಿ ಶ್ರೀರಂಗಪಟ್ಟಣ ಬಳಿ ‘ಡೀವಿಯೇಷನ್’ ನೀಡಿ ಹೊಸ ಗ್ರೀನ್ ಫೀಲ್ಡ್ನಲ್ಲಿ ಕುಶಾಲನಗರ ತನಕ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಅನುಮತಿ ನೀಡಿದೆ. ಈ ಹೊಸ ಯೋಜನೆ ಮೂಲಕ ಶ್ರೀರಂಗಪಟ್ಟಣದಿಂದ ಗುಡ್ಡೆಹೊಸೂರು ತನಕ ಹೊಸ 4 ಪಥದ ರಾಷ್ಟ್ರೀಯ ಹೆದ್ದಾರಿ ಬರಲಿದೆ. ಶ್ರೀರಂಗಪಟ್ಟಣದಿಂದ ಪಿರಿಯಾಪಟ್ಟಣ ಹಾಗೂ ಪಿರಿಯಾಪಟ್ಟಣದಿಂದ ಗುಡ್ಡೆಹೊಸೂರು ತನಕ 2 ಹಂತದಲ್ಲಿ ರಸ್ತೆ ನಿರ್ಮಾಣವಾಗಲಿದೆ. ಈ ಬಗ್ಗೆ ಟೆಂಡರ್ ಆಹ್ವಾನಿಸಲಾಗಿದೆ. ದೊಡ್ಡ ಮಟ್ಟದ ಯೋಜನೆಯಾಗಿರುವ ಹಿನ್ನೆಲೆ ಟೆಂಡರ್ಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆಗೂ ಮುನ್ನ ಹೆದ್ದಾರಿ ವ್ಯಾಪ್ತಿಯಲ್ಲಿರುವ ಬೀದಿ ದೀಪ, 66 ಕೆ.ವಿ. ಲೈನ್, ಪವರ್ಗ್ರೀಡ್ ಲೈನ್ ಸ್ಥಳಾಂತರ, ಕೆರೆ ಇರುವ ಜಾಗದಲ್ಲಿ ಅನುಮತಿ, ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಲು ಕ್ರಮವಹಿಸಲು ಮೈಸೂರಿನಲ್ಲಿ ಸಭೆ ನಡೆಸಿ ಒಂದು ತಿಂಗಳೊಳಗೆ ಈ ನಿಟ್ಟಿನಲ್ಲಿ ಪೂರ್ವ ತಯಾರಿ ನಡೆಸಲು ಸೂಚಿಸಲಾಗಿದೆ ಎಂದು ವಿವರಿಸಿದರು.
ಟೆಂಡರ್ ಪ್ರಕ್ರಿಯೆ ಬಳಿಕ ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ. 2-3 ವರ್ಷದಲ್ಲಿ ಕಾಮಗಾರಿ ಮುಗಿಯಲಿದೆ. ಉದ್ದೇಶಿತ ಯೋಜನೆಯಿಂದ ಒಂದು ಗಂಟೆಯಲ್ಲಿ ಶ್ರೀರಂಗಪಟ್ಟಣದಿಂದ ಕೆಂಗೇರಿಗೆ ಸಾಗಬಹುದು. ಕೊಡಗಿಗೆ ಬರುವುದು ಕೂಡ ಸುಲಭವಾಗಿ ಸುತ್ತಿಬಳಸಿ ಬರುವುದು ತಪ್ಪುತ್ತದೆ. ವಾಹನ ದಟ್ಟಣೆ ಕ್ಷೀಣಿಸುತ್ತದೆ ಎಂದ ಅವರು, ಗುಂಗ್ರಾಲ್
(ಮೊದಲ ಪುಟದಿಂದ) ಛತ್ರದಿಂದ ಕಟ್ಟೆಮಳವಾಡಿ ಬಂದು ಹುಣಸೂರಿಗೆ ಸಂಪರ್ಕಿಸಿ ಕಂಪ್ಲಪುರ-ಪಿರಿಯಾಪಟ್ಟಣ-ಬೈಲುಕೊಪ್ಪ- ಕುಶಾಲನಗರಕ್ಕೆ ಸಾಮಾನ್ಯ ಬೈಪಾಸ್ ಇರಲಿದೆ. ಈ ಸಂಬಂಧ ಭೂಸ್ವಾಧೀನ ಕಾರ್ಯಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವ್ಯಾಜ್ಯ, ತಾಂತ್ರಿಕ ತೊಂದರೆ ಇರುವ ಜಮೀನುಗಳ ಸ್ವಾದೀನ ಸಂಬಂಧ ಕ್ರಮವಹಿಸಲಾಗುವುದು. ಈ ಯೋಜನೆ ಕೊಡಗಿಗೆ ಬಹಳ ಪ್ರಯೋಜನವಾಗಲಿದ್ದು, ಮುಂದಿನ ದಿನಗಳಲ್ಲಿ ಮಡಿಕೇರಿಗೆ ವಿಸ್ತರಿಸಿ ನಂತರ ಸಂಪಾಜೆ, ಪೆರಾಜೆ ಮೂಲಕ ದಕ್ಷಿಣ ಕನ್ನಡಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಇದು ಅರಣ್ಯ ಭಾಗವಾಗಿರುವ ಹಿನ್ನೆಲೆ ರಸ್ತೆ ಅಗಲೀಕರಣ ಮೂಲಕ ರಸ್ತೆ ಸುಸಜ್ಜಿತಗೊಳಿಸಲು ತಯಾರಿ ನಡೆಸಲಾಗಿದೆ. ಇದರಿಂದ ಮರ ಕಡಿಯಲಾಗುತ್ತದೆ ಎಂದು ವಿವಾದ ಸೃಷ್ಟಿಸುವುದು ಬೇಡ ಎಂದು ಹೇಳಿದ ಅವರು, ಸುಂಟಿಕೊಪ್ಪಕ್ಕೆ ಬೈಪಾಸ್ ನೀಡುವ ಇರಾದೆ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಪೈಪ್ಲೈನ್ ಮೂಲಕ ಗ್ಯಾಸ್ ಪೂರೈಕೆ
2018ರಲ್ಲೆ ಮನೆಮನೆಗೆ ಪೈಪ್ಲೈನ್ ಮೂಲಕ ಗ್ಯಾಸ್ ಪೂರೈಕೆ ಮಾಡುವ ಯೋಜನೆ ಕಾರ್ಯಕ್ರಮ ಕೇಂದ್ರ ರೂಪಿಸಿತ್ತು. ಅದರಂತೆ ರಾಜ್ಯದ 20 ಕಡೆಗಳಲ್ಲಿ ಈ ನಿಟ್ಟಿನಲ್ಲಿ ಕೆಲಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಮಂಗಳೂರು ಮೂಲಕ ಮಡಿಕೇರಿಗೂ ಈ ಯೋಜನೆ ವಿಸ್ತರಿಸುವ ಚಿಂತನೆ ಇದೆ. ಗ್ರಾಮಮಟ್ಟದಲ್ಲಿ ಯೋಜನೆ ರೂಪಿಸಬೇಕೆಂಬ ಹೆಬ್ಬಯಕೆ ಇದೆ ಎಂದರು.
‘ಹಿಜಾಬ್’ ವಿರುದ್ಧ ಆಕ್ರೋಶ
ಶಿಕ್ಷಣ ಸಂಸ್ಥೆಗಳಿಗೆ ಇಷ್ಟ ಬಂದಂತೆ ಬಟ್ಟೆ ಧರಿಸಿ ಪ್ರವೇಶಿಸುವ ಹಕ್ಕಿಲ್ಲ. ಹಿಂದೂ ಧರ್ಮದ ಭಾರತದಲ್ಲಿ ಪರಧರ್ಮದವರ ಹಿತೋಪದೇಶ ಬೇಕಾಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಮನಸ್ಸಿಗೆ ಬಂದಂತೆ ವಸ್ತ್ರ ಧರಿಸಿ ಶಿಕ್ಷಣ ಸಂಸ್ಥೆಗಳಿಗೆ ಹೋಗ ಲಾಗುವುದಿಲ್ಲ, ಇಷ್ಟ ಬಂದಂತೆ ವಸ್ತ್ರ ಧರಿಸಿ ಹೋಗಬೇಕೆಂದಿದ್ದರೆ ಮದರಸ ಗಳಿಗೆ ತೆರಳಿ. ಶಾಲಾ, ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಪಾಲಿಸಿ ಭಾರತದ ಸಂಪ್ರದಾಯಗಳಿಗೆ ಗೌರವ ನೀಡಿ. ಇತ್ತೀಚಿನ ಕೆಲವರು ಕಾಲೇಜಿಗೆ ಬರುವುದು ‘ಜಾಬ್’ಗಾಗಿ ಅಲ್ಲ ‘ಹಿಜಾಬ್’ಗಾಗಿ ಎಂಬಂತಾಗಿದೆ ಎಂದು ಹೇಳಿದರು. ಸಮವಸ್ತ್ರ ಎಂಬುದು ಬಣ್ಣದ ಬಟ್ಟೆಯಲ್ಲ, ಅದೊಂದು ಸಮಾನತೆಯ, ಭ್ರಾತೃತ್ವ ಬೆಸೆಯುವ ಸಂಕೇತವಾಗಿದೆ ಎಂದರು.
ಈ ಸಂದರ್ಭ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಉಪಸ್ಥಿತರಿದ್ದರು. ಶ್ರೀರಂಗಪಟ್ಟಣದಿಂದ ಗುಡ್ಡೆಹೊಸೂರಿನ ತನಕ ಚತುಷ್ಪಥ ಹೆದ್ದಾರಿ - ಪ್ರತಾಪ್ ಸಿಂಹ