ಮಡಿಕೇರಿ, ಫೆ. ೬: ಸಮೃದ್ಧ ವಾಗಿದ್ದ ಕಾಡನ್ನು ಕಡಿದು ಮನೆ, ಜಮೀನಾಗಿ ಪರಿವರ್ತಿಸಿ ಕೊಂಡಿದ್ದ ಟಿಬೇಟಿಯನ್ನರು ಇದೀಗ ಕಾಡು ಕಡಿಯಲಾಗಿದ್ದ ಪ್ರದೇಶದಲ್ಲಿಯೇ ಅರಣ್ಯವನ್ನು ಬೆಳೆಸುವ ಮೂಲಕ ಮಾದರಿ ಕಾರ್ಯಕ್ಕೆ ಕಾರಣರಾಗಿದ್ದಾರೆ. ೧೮ ವರ್ಷಗಳ ಪರಿಶ್ರಮದ ಫಲವಾಗಿ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿನ ಕಗ್ಯು ನಳಂದ ದೇವಾಲಯದ ಮುಂಬದಿ ೧೦೦ ಎಕರೆ ಅರಣ್ಯ ಕಂಗೊಳಿಸುತ್ತಿದೆ.
ಇದೊಂದು ವಿನೂತನ ಪ್ರಯೋಗ.. ಬೌದ್ಧ ಬಿಕ್ಷÄಗಳಿಗೆ ಧಾರ್ಮಿಕ ಪ್ರವಚನ ಹೇಳುವ ಸಂತರೋರ್ವರ ಪ್ರಕೃತ್ತಿ ಪ್ರೇಮದ ಫಲವಾಗಿ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಹಸಿರು ರಾಶಿ ಮನಸೆಳೆಯುವಂತೆ ಸೃಷ್ಟಿಯಾಗಿದೆ.
ಕರ್ಮಾ ಗುರೂಜಿ ಎಂಬ ಟಿಬೇಟಿಯನ್ ಸಂತ ಧಾರ್ಮಿಕತೆಯ ಜತೆ ಪ್ರಕೃತಿ ಪ್ರೇಮದ ಪಾಠವನ್ನು ಈ ಗುರುಕುಲದಲ್ಲಿ ಹೇಳಿಕೊಡುತ್ತಿದ್ದಾರೆ. ಅದೂ ಪ್ರಾಯೋಗಿಕವಾಗಿ.. ಕಾಡು ಬೆಳೆಸುವ ಮೂಲಕ.
ಸತ್ಯಂ, ಶಿವಂ ಸುಂದರA ಪರಿಕಲ್ಪನೆಯಲ್ಲಿ.. ಅದೇ ಹೆಸರಿನಲ್ಲಿ ರೂಪುಗೊಂಡ ಈ ದಟ್ಟಾರಣ್ಯದ ಯಶಸ್ಸಿನ ಹಿನ್ನೆಲೆಯಲ್ಲಿ ಟಿಬೇಟಿಯನ್ ಸಂತನ ೧೮ ವರ್ಷಗಳ ಪರಿಶ್ರಮ ಇದೆ. ಧಾರ್ಮಿಕ ಪ್ರವಚನವನ್ನೇ ಮುಖ್ಯ ಧ್ಯೇಯವಾಗಿಸಿಕೊಂಡ ಧಾರ್ಮಿಕ ಗುರು ನಿಸರ್ಗದ ಬಗೆಗಿನ ಪ್ರೇಮದಿಂದ ಅರಣ್ಯ ಬೆಳೆದ ಪರಿಯೇ ಗಮನಾರ್ಹವಾದದ್ದು.
ಟಿಬೇಟಿಯನ್ ಶಿಬಿರದ ಇತರೆಲ್ಲಾ ಧಾರ್ಮಿಕ ಮಂದಿರದಲ್ಲಿ ಧರ್ಮಗುರುಗಳು ಟಿಬೇಟಿಯನ್ ಲಾಮಾಗಳಿಗೆ ಧಾರ್ಮಿಕ ಪ್ರವಚನ ಕಲಿಸುವುದರಲ್ಲಿ ತಲ್ಲೀನರಾಗಿದ್ದರೆ ಕಗ್ಯು ನಳಂದ ಧಾರ್ಮಿಕ ಮಂದಿರದ ಗುರುವಾಗಿರುವ ಕರ್ಮಾ ಗುರೂಜಿ ಧಾರ್ಮಿಕ ಪ್ರವಚನದ ಜತೆಜತೆಯಲ್ಲಿಯೇ ಲಾಮಗಳಿಗೆ ಪ್ರಕೃತಿಯ ಆರಾಧನೆಯನ್ನೂ ಪರಿಣಾಮಕಾರಿಯಾಗಿ ಕಲಿಸತೊಡಗಿದರು. ಎಲ್ಲಾ ವಿಚಾರಗಳ ಮೂಲ ಸತ್ವ ಇರುವುದೇ ನಮ್ಮ ಸುತ್ತಲಿನ ನಿಸರ್ಗದಲ್ಲಿ ಎಂಬುದನ್ನು ಶಿಷ್ಯರಿಗೆ ತಿಳಿಹೇಳುವ ನಿಟ್ಟಿನಲ್ಲಿ ಹೊಸದೊಂದು ಪ್ರಯೋಗಕ್ಕೆ ಮುಂದಾದ ಕರ್ಮಾ ಗುರೂಜಿ ೧೮ ವರ್ಷಗಳ ಹಿಂದೆ ಇದಕ್ಕಾಗಿ ತಮ್ಮ ಮಂದಿರದ ಮುಂದೆ ಪಾಳು ಬಿದ್ದಿದ್ದ ವಿಸ್ತಾರ ಜಾಗದಲ್ಲಿ ಕಾಡು ಬೆಳೆಸುವ ವಿನೂತನ ಪ್ರಯೋಗದಲ್ಲಿ ತೊಡಗಿಸಿಕೊಂಡರು.
ಹಲವಾರು ವರ್ಷಗಳಿಂದ ಬೆಂಗಾಡಿದ್ದ ಜಾಗದಲ್ಲಿ ಕಾಡು ಸಸಿಗಳನ್ನು ನೆಟ್ಟು ನೀರು ಹಾಕಿ ಬೆಳೆಸಿದ ಪರಿಣಾಮವೇ ಈ ಜಾಗದಲ್ಲಿ ಈಗ ಹಸಿರು ಕಂಗೊಳಿಸಿದೆ. ಒಂದಲ್ಲ ಎರಡಲ್ಲ ೧೦೦ ಎಕ್ರೆ ಭೂಮಿಯಲ್ಲಿ ಎಲ್ಲೆಲ್ಲೂ ಗಿಡಮರಗಳ ಹಸಿರು ಸೊಂಪು ಕಂಡುಬರುತ್ತಿದೆ. ಈ ಕಾಡಿನಲ್ಲಿ ಆನೆಗಳು, ಜಿಂಕೆ, ಕಾಡೆಮ್ಮೆ, ಮೊಲ, ನವಿಲು ಮುಂತಾದ ಜೀವವೈವಿಧ್ಯಗಳು, ಹಲವಾರು ಪಕ್ಷಿ ಪ್ರಬೇಧಗಳು ಕೂಡ ಆಸರೆ ಪಡೆದಿವೆ. ೧೯೯೫ ರಲ್ಲಿ ೫೦ ಸಸಿ ನೆಟ್ಟಿದ್ದೆ. ಈಗ ಆ ಸಸಿಗಳೇ ಹೆಮ್ಮರವಾಗಿ ಬೆಳೆದು ನಿಂತಿವೆ. ಟಿಬೇಟಿಯನ್ ಧಾರ್ಮಿಕ ಮುಖಂಡರಾದ ದಲೈಲಾಮ ಮತ್ತು ಕರ್ಮಪ ಅವರ ಪ್ರಕೃತಿ ಪ್ರೀತಿಯ ಸೆಲೆಯಲ್ಲಿಯೇ ಈ ಕಾಡು ರೂಪುಗೊಂಡಿದೆ. ಇಂಥ ಅರಣ್ಯ ನಮ್ಮ ಮಂದಿರದ ಭಕ್ತರಲ್ಲಿ ಹೊಸ ಉತ್ಸಾಹ, ಹೊಸ ಶಕ್ತಿಯನ್ನು ಮೂಡಿಸಿದೆ ಎಂದು ಮನತೃಪ್ತಿಯಿಂದ ಹೇಳಬಲ್ಲೆ ಎಂದು ಕರ್ಮಾ ಗುರೂಜಿ ಹೇಳುತ್ತಾರೆ.
ಕರ್ಮಾ ಗುರೂಜಿ ಇದೇ ಬೈಲುಕುಪ್ಪೆಯಲ್ಲಿ ೫೦ ವರ್ಷಗಳ ಹಿಂದೆ ಜನಿಸಿದವರು. ಹೀಗಾಗಿ ಇವರು ತನ್ನನ್ನು ಇಂಡಿಯನ್ ಟಿಬೇಟಿಯನ್ ಎಂದೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬೈಲುಕುಪ್ಪೆಯ ಸುತ್ತ ಹರಿದು ಸಾಗುವ ಕಾವೇರಿ ನದಿ ತ್ಯಾಜ್ಯ ವಸ್ತುಗಳಿಂದ ಮಲೀನವಾಗುವುದನ್ನು ತಾರುಣ್ಯದಲ್ಲಿ ಗಮನಿಸಿ ಬೇಸರ ತಳೆದ ಕರ್ಮಾ ತನ್ನ ಸಹಪಾಠಿಗಳೊಂದಿಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಲ್ಲಿಂದಲೇ ಪ್ರಕೃತ್ತಿ ಸಂರಕ್ಷಣೆಯ ಒಲವು ಕರ್ಮಾ ಅವರಲ್ಲಿ ಮೂಡಿತ್ತು.
ಈ ಭೂಮಿ ನಮ್ಮೆಲ್ಲರ ಕರ್ಮಭೂಮಿ.. ಇದನ್ನು ಸುರಕ್ಷಿತವಾಗಿ, ಸುಂದರವಾಗಿ ಇಟ್ಟುಕೊಂಡಷ್ಟು ಅದು ನಮಗೇ ಒಳ್ಳೆಯದು.. ಪ್ರಕೃತ್ತಿ ಸುಂದರವಾಗಿದ್ದಷ್ಟು ನಾವೂ ಕೂಡ ಸಾಕಷ್ಟು ವರ್ಷ ಜೀವಿಸಬಲ್ಲೆವು. ಮಲೀನ ಪ್ರಕೃತ್ತಿಯಲ್ಲಿ ಮನುಷ್ಯ ಕುಲ ಹೆಚ್ಚು ವರ್ಷ ಜೀವಿಸಲು ಅಸಾಧ್ಯ. ಶುದ್ಧ ಗಾಳಿ, ಸ್ವಚ್ಛ ನೀರು ನಮಗೆ ಪರಿಶುದ್ಧವಾದ ಆಹಾರ, ಹಣ್ಣು ಹಂಪಲು ನೀಡುವ ಶಕ್ತಿ ಹೊಂದಿದೆ. ಪ್ರಕೃತ್ತಿಗೆ ಯಾವುದೇ ಜಾತಿ, ಧರ್ಮ ಇಲ್ಲ. ಹೀಗಾಗಿ ಧರ್ಮ, ಜಾತಿ ಯಾವುದೇ ಇರಲಿ ಮಾನವ ಕುಲಕ್ಕೆ ಸೇರಿದ ನಾವೆಲ್ಲರೂ ನಿಸರ್ಗವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಣ ತೊಡಲೇಬೇಕಾದ ಅನಿವಾರ್ಯತೆಯ ದಿನಗಳು ಈಗಿದೆ ಎಂಬ ಪ್ರಬಲ ಪ್ರತಿಪಾದನೆ ಕರ್ಮಾ ಗುರೂಜಿ ಅವರದ್ದು.
ಪ್ರಾರಂಭದಲ್ಲಿ ಕರ್ಮಾ ಗುರೂಜಿ ದೇವಾಲಯದಲ್ಲಿ ಪ್ರವಚನ ಮುಗಿಸಿ ಕೂಡಲೇ ಕಾಡು ಬೆಳೆಯುತ್ತಿದ್ದ ಸ್ಥಳಕ್ಕೆ ತೆರಳಿ ಸಸಿಗಳಿಗೆ ನೀರು ಸಿಂಪಡಿಸುತ್ತಿದ್ದಾಗ ಅನೇಕರು ವ್ಯಂಗ್ಯವಾಡಿದ್ದರAತೆ. ಈ ಗುರುವಿಗೆ ಇದೇನಿದು ಹುಚ್ಚು. ಪಾಠ ಹೇಳುತ್ತಾ, ಉಪನ್ಯಾಸ ನುಡಿಯುತ್ತಾ ಕೂರುವುದು ಬಿಟ್ಟು ಬಿಸಿಲಿನಲ್ಲಿ ಬೆವರು ಸುರಿಸುತ್ತಾ ಕಾಡು ಬೆಳೆಸುವ ಹುಚ್ಚು ಪ್ರಯತ್ನ ಎಂದು ಹೇಳುತ್ತಿದ್ದರಂತೆ. ಸನ್ಯಾಸಿಯಾದವನಿಗೆ ಇದೆಲ್ಲಾ ಬೇಕಾ ಎಂಬ ಟೀಕೆಗಳು ಕೇಳಿಬಂದಿದ್ದವAತೆ. ಆದರೆ ಇದಕ್ಕೆಲ್ಲಾ ಕಿವಿಗೊಡದೇ ಸಸಿ ಸಂರಕ್ಷಣೆಯಲ್ಲಿ ಸಕ್ರಿಯರಾದ ಕರ್ಮಾ ಪ್ರಯತ್ನ ಮುಂದುವರೆದAತೆ ಅವರ ಶಿಷ್ಯಂದಿರು ಕೂಡ ತಮ್ಮ ಗುರುಗಳ ಜತೆ ಕೈಜೋಡಿಸತೊಡಗಿದರು. ಕರ್ಮಾ ಗುರೂಜಿ ಟ್ರಾಕ್ಟರ್ ಚಾಲಿಸುತ್ತಾ ಭೂಮಿ ಹಸನುಗೊಳಿಸಿ, ಗುಂಡಿ ತೋಡಿ ಗಿಡ ನೆಟ್ಟು, ದಿನಾ ನೀರೆರೆಯುತ್ತಾ ಪಟ್ಟ ಪರಿಶ್ರಮದ ಫಲವೇ ಈಗ ಕಂಗೊಳಿಸುತ್ತಿರುವ ಹಸಿರು ಪರಿಸರ ಎಂಬುದು ಎಲ್ಲರಿಗೂ ಅರಿವಾಯಿತು.
ಹೀಗಾಗಿ ಈಗ ಕಗ್ಯು ಧಾರ್ಮಿಕ ಮಂದಿರದ ಕಾಡು ಎಲ್ಲರ ಅಚ್ಚುಮೆಚ್ಚಿನ ಪರಿಸರ ತಾಣವಾಗಿ ಪರಿವರ್ತಿತವಾಗಿದೆ. ಜೀವವೈವಿಧ್ಯತೆಯ ಅಪೂರ್ವ ಸೆಲೆಯಾಗಿ ಈ ತಾಣ ಸೃಷ್ಟಿಯಾಗಿದೆ. ಧರ್ಮ ರಕ್ಷಣೆ ಮತ್ತು ನಿಸರ್ಗ ಸೊಬಗಿನ ವಿಶಿಷ್ಟ ಪ್ರದೇಶವಾಗಿ ಈ ಕಾಡು ಮಾದರಿಯಾಗಿದೆ.
ಕಾಡಿನ ಮಧ್ಯೆ ನಿರ್ಮಿಸಿರುವ ಸರೋವರ ಕೂಡ ಅರಣ್ಯದ ಸೊಬಗು ಹೆಚ್ಚಿಸಿದೆ. ಇಲ್ಲಿ ನೀರು ಕುಡಿಯಲು ಪಕ್ಷಿಗಳು, ಪ್ರಾಣಿಗಳು ಬರುತ್ತಿದೆ. ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಅರಣ್ಯ ಇಲಾಖೆ ಸಲಹೆಗಾರ ಯಲ್ಲಪ್ಪರೆಡ್ಡಿ ಮತ್ತು ಮೈಸೂರಿನ ಪ್ರೊ. ರವಿಕುಮಾರ್, ಡಾ. ಚಂದ್ರಶೇಖರ್ ಮಾರ್ಗದರ್ಶನ ಈ ಕಾಡು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸ್ಮರಿಸಲು ಕರ್ಮಾ ಮರೆಯಲಿಲ್ಲ.
೧೯೫೯ ರಲ್ಲಿ ಚೀನಾದ ಅತಿಕ್ರಮಣ, ದೌರ್ಜನ್ಯದಿಂದಾಗಿ ನೂರಾರು ಟಿಬೇಟಿಯನ್ನರು ತವರು ದೇಶವಾದ ಚೀನಾದಿಂದ ಹಿಮಾಲಯದ ಕಠಿಣ ಮಾರ್ಗವಾಗಿ ಭಾರತಕ್ಕೆ ಆಶ್ರಯ ಕೋರಿ ಬಂದರು. ಅಂದಿನ ನೆಹರು ಸರ್ಕಾರ ಈ ಟಿಬೇಟಿಯನ್ನರಿಗೆ ದೇಶದ ಬೇರೆ ಬೇರೆ ಕಡೆ ನೆಲೆ ನೀಡಿತು. ಅಂಥ ಸ್ಥಳಗಳಲ್ಲಿ ಒಂದಾಗಿರುವ ಕೊಡಗು - ಮೈಸೂರು ಜಿಲ್ಲೆಗಳ ಗಡಿಯಾದ ಬೈಲುಕುಪ್ಪೆಯಲ್ಲಿ ಹರವೇ ಎಂಬ ಅರಣ್ಯ ಪ್ರದೇಶ ಇತ್ತು. ಸರ್ಕಾರದಿಂದ ತಲಾ ೨ ಎಕರೆಗಳಷ್ಟು ಕಾಡು ಜಮೀನು ಪಡೆದ ಟಿಬೇಟಿಯನ್ನರು ಈ ಹರವೆ ಕಾಡನ್ನು ಕಡಿದು ಅಲ್ಲಿ ಮನೆ ನಿರ್ಮಿಸಿ, ಕೃಷಿ ಜಮೀನು ರೂಪಿಸಿಕೊಂಡರು. ಕಾಡು ಬೋಳಾಯಿತು, ನಿರಾಶ್ರಿತರ ತಾಣ ಮೇಲೆದ್ದಿತು. ಕಾಡು ಕಡಿದು ಕೃಷಿ ಜಮೀನು ಮಾಡಿಕೊಂಡ ನೀವು ಅನ್ಯಾಯ ಮಾಡಿದ್ದೀರಿ ಎಂದು ಅನೇಕ ಬಾರಿ ಟೀಕಿಸುತ್ತಿದ್ದೆ. ಇದು ಕರ್ಮಾ ಗುರೂಜಿ ಮನದಲ್ಲಿ ಪರಿಣಾಮ ಬೀರಿತು. ನೋಡ್ತಾ ಇರಿ ನಾವೂ ಕಾಡು ಬೆಳೆದು ತೋರಿಸುತ್ತೀವಿ ಎಂದು ಛಲ, ಹಠದಿಂದ ೧೮ ವರ್ಷಗಳ ಹಿಂದೆ ಸಸಿ ನೆಟ್ಟು ಕಾಡು ಬೆಳೆಸುವ ಪ್ರಯತ್ನಕ್ಕೆ ಮುಂದಾದರು ಎಂದು ಹೇಳುತ್ತಾರೆ ಕಾಡು ಸಂರಕ್ಷಣೆಯ ಹೊಣೆ ಹೊತ್ತಿರುವ ಬೋಧಿಸತ್ವ ಟ್ರಸ್ಟ್ನ ಟ್ರಸ್ಟಿ ಬಸವೇಗೌಡ.
ಇಲ್ಲೀಗ ೨೫೫ ಜಾತಿಯ ಗಿಡಗಳು ಮರವಾಗಿವೆ. ರಾಜ್ಯ ಮಾತ್ರವಲ್ಲ, ದೇಶದ ವಿವಿಧ ಭಾಗಗಳಿಂದ ಈ ಕಾಡಿಗೆ ಅಪರೂಪದ ಸಸಿಗಳನ್ನು ತಂದು ನೆಡಲಾಗಿದೆ. ಬ್ರಹ್ಮಗಿರಿ ಅಭಯಾರಣ್ಯದಿಂದಲೂ ಸಸಿ ತರಲಾಗಿದೆ. ಕಾಫಿ ಬೆಳೆಗಾರ ಮಿಟ್ಟು ಚಂಗಪ್ಪ ಕೂಡ ಕಾಫಿ ಸಸಿ ನೀಡಿದ್ದಾರೆ. ೨೫೫ ಕ್ಕೂ ಅಧಿಕ ಜಾತಿಯ ೯೫೦ಕ್ಕೂ ಹೆಚ್ಚಿನ ಸಸಿಗಳು ಈ ಕಾಡಿನಲ್ಲಿ ಕಾಣಬಹುದಾಗಿದೆ. ಡಾ.ಯಲ್ಲಪ್ಪರೆಡ್ಡಿ ಚಿಂತನೆಯ ಫಲವಾಗಿ ಇದೀಗ ಕಾಡಿನಲ್ಲಿರುವ ಪ್ರತಿಯೊಂದು ಸಸಿಯ ಮಾಹಿತಿ ಸಂಗ್ರಹಿಸಲಾಗಿದೆ. ಕಾಡಿನಲ್ಲಿ ಎಲ್ಲಿ ಯಾವ ಮರ, ಸಸಿ ಇದೆ ಎಂದು ಸುಲಭವಾಗಿ ಪತ್ತೆ ಹಚ್ಚಲು ಈ ಸಸ್ಯ ಸಮೀಕ್ಷೆ ಪ್ರಯೋಜನಕಾರಿಯಾಗಿದೆ.
ಸತ್ಯಂ.. ಶಿವಂ.. ಸುಂದರA.. ಹೆಸರಿನ ಸ್ವಾರಸ್ಯ
ಸತ್ಯಂ, ಶಿವಂ ಸುಂದರA ಎಂದು ಈ ವಿಶಿಷ್ಟ ಕಾಡಿಗೆ ಹೆಸರಿಟ್ಟ ಹಿನ್ನಲೆಯೂ ಸ್ವಾರಸ್ಯವಾಗಿದೆ. ಕರ್ಮಾ ಗುರೂಜಿ ತಮ್ಮ ಅರಣ್ಯಕ್ಕೆ ಹೆಚ್ಚಿನ ಗಿಡಗಳಿಗಾಗಿ ಹೆಸರಾಂತ ಪರಿಸರ ತಜ್ಞ ಡಾ.ಯಲ್ಲಪ್ಪರೆಡ್ಡಿ ಅವರನ್ನು ಸಂಸದ ಕುಪೇಂದ್ರ ರೆಡ್ಡಿ ಮೂಲಕ ಸಂಪರ್ಕಿಸಿದ್ದರು. ಟಿಬೇಟಿಯನ್ ಸಂತನ ಹೊಸ ಪ್ರಯೋಗದ ಬಗ್ಗೆ ಆಸಕ್ತಿ ತಳೆದ ಯಲ್ಲಪ್ಪ ರೆಡ್ಡಿ ಬೈಲುಕುಪ್ಪೆಗೆ ಭೇಟಿ ನೀಡಿ ಕಾಡು ಬೆಳೆದ ರೀತಿ ಕಂಡು ಸಂತೋಷಗೊAಡರು. ಇಲ್ಲಿ ದೈವನೆಲೆಯಿದೆ. ನಿಸರ್ಗ ಮಾತೆ ನೆಲೆಯಿದೆ. ಕಣ್ಣಿಗೆ ಸೊಬಗು ಉಂಟಾಗುತ್ತಿದೆ. ಸತ್ಯಂ, ಶಿವಂ, ಸುಂದರA ಎಂಬುದು ಈ ಪರಿಸರದಲ್ಲಿ ನಿತ್ಯ ಸತ್ಯವಾಗಿದೆ ಎಂದು ಯಲ್ಲಪ್ಪರೆಡ್ಡಿ ಇದೇ ಹೆಸರನ್ನು ಕಾಡಿಗೆ ಇಟ್ಟರಂತೆ.
ಸತ್ಯA ಎಂದರೆ ಆಹಾರದ ಗಿಡಗಳು. ಅತ್ತಿ, ಆಲ, ಗೋಣಿ, ಬಸರಿ, ದೂಪ, ಹಲಸು ಇತ್ಯಾದಿ, ಶಿವಂ ಎಂದರೆ ಔಷಧೀಯ ಸಸ್ಯಗಳಾದ ಬೇವು, ಬಿಲ್ವಪತ್ರೆ, ಮಾವು ಇತ್ಯಾದಿ, ಸುಂದರA ಎಂದರೆ ವಸಂತ ಋತುವಿನಲ್ಲಿ ಹೂಬಿಟ್ಟು ಸುಂದರತೆ ಸೃಷ್ಟಿಸುವ ಸಸಿಗಳು. ಇವೆಲ್ಲದರ ಸಂಗಮ ತಾಣವೇ ನಮ್ಮ ಸತ್ಯಂ, ಶಿವಂ, ಸುಂದರA ಎಂಬ ಅರಣ್ಯ ಎಂದು ಬಸವೇಗೌಡ ಹೆಮ್ಮೆಯಿಂದ ಹೇಳಿದರು.
ಟಿಬೇಟಿಯನ್ನರು ನೆಲಸಿರುವ ಬೈಲುಕುಪ್ಪೆಯ ಮಣ್ಣು ನಿಜಕ್ಕೂ ಸಸ್ಯರಾಶಿ ಬೆಳವಣಿಗೆಗೆ ಅತ್ಯಂತ ಸೂಕ್ತವಾಗಿದೆ. ೪-೫ ವರ್ಷಗಳಲ್ಲಿ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಇಲ್ಲಿ ಸಸಿಗಳು ಮರಗಳಾಗಿ ಬೆಳೆಯುತ್ತಿದೆ. ಸತ್ಯಂಶಿವAಸುAದರA ಎಂಬ ಖಾಸಗಿ ಕಾಡಿನ ಪರಿಕಲ್ಪನೆಯೇ ಅದ್ಬುತ, ಧಾರ್ಮಿಕ ಗುರು ಇಂಥ ಕಲ್ಪನೆಯನ್ನು ಅಪೂರ್ವ ರೀತಿಯಲ್ಲಿ ಜಾರಿಗೆ ತರುತ್ತಾರೆ ಎಂಬುದು ವಿಸ್ಮಯ ಎಂದು ಹರ್ಷ ವ್ಯಕ್ತಪಡಿಸಿದರು ಖ್ಯಾತ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ,
ಕಾಡಾನೆಗಳು ಇಷ್ಟೂ ವರ್ಷಗಳಿಂದ ಕಾಡಿಗೆ ಬಂದು ಸುತ್ತಾಡುತ್ತಿದ್ದರೂ ಒಂದೇ ಒಂದು ಸಸಿಗೂ ಹಾನಿ ಮಾಡಿಲ್ಲ. ನನಗೆ ಇದು ನಿಜಕ್ಕೂ ಅಚ್ಚರಿಯ ಸಂಗತಿ. ನೀವು ಈ ಅರಣ್ಯ ಬೆಳೆಸಿದ್ದು ನಮಗಾಗಿಯೇ ಎಂದು ಸಂದೇಶ ನೀಡಿದಂತಿದೆ ಎಂದೂ ಯಲ್ಲಪ್ಪರೆಡ್ಡಿ ಹೇಳಿದರು.
ಕೆಲವೇ ವರ್ಷಗಳ ಹಿಂದೆ ಬೆಂಗಾಡಾಗಿದ್ದ ಪ್ರದೇಶ ಈಗ ಸಸ್ಯಕಾಶಿಯಾಗಿದೆ. ..ನಂದನವನದ ಸೃಷ್ಟಿಯಾಗಿದೆ. ಆಹಾರ, ಔಷಧಿ, ಸೌಂದರ್ಯ ಸೂಸುವ ಪುಪ್ಪರಾಶಿಯ ನೆಲೆವೀಡಾಗಿದೆ. ವನ್ಯಜೀವಿಗಳ ಸುರಕ್ಷಿತ ಸಂಚಾರ ತಾಣವಾಗಿದೆ. ಓರ್ವ ಸಂತ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಸತ್ಯಂ ಶಿವಂ ಸುಂದರA ಉದಾಹರಣೆಯಾಗಿದೆ. ಕಗ್ಯು ನಳಂದ ಗುರುಕುಲ ತನ್ನ ೩೦೦ ಅನುಯಾಯಿಗಳಲ್ಲಿ ಶಾಂತಿ ಸಂದೇಶದೊAದಿಗೆ, ನಿಸರ್ಗ ಸಂರಕ್ಷಣೆಯ ಜಾಗೃತಿ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರಿದೆ. - ಅನಿಲ್ ಎಚ್.ಟಿ