ಮಡಿಕೇರಿ, ಫೆ. ೪: ನೆಲ್ಲಿಹುದಿಕೇರಿ ಕಾವೇರಿ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಸೂರು ಕಲ್ಪಿಸಬೇಕು ಎಂದು ನಿವೇಶನ ರಹಿತ ನಿರಾಶ್ರಿತರ ಹೋರಾಟ ಸಮಿತಿ ಅಧ್ಯಕ್ಷ ಪಿ.ಆರ್. ಭರತ್ ಆಗ್ರಹಿಸಿದರು.

೨೦೧೯ರ ಮಳೆಗಾಲದಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ನೆಲ್ಲಿಹುದಿಕೇರಿ ವ್ಯಾಪ್ತಿಯ ಬೆಟ್ಟದಕಾಡು, ಬರಡಿ ಹಾಗೂ ಕುಂಬಾರಗುAಡಿ ವ್ಯಾಪ್ತಿಯ ೧೫೦ಕ್ಕೂ ಹೆಚ್ಚು ಮನೆಗಳು ನೆಲಸಮಗೊಂಡಿತ್ತು. ಆದರೆ ಇದೀಗ ಜಿಲ್ಲಾಡಳಿತ ಸಂತ್ರಸ್ತರಿಗೆ ನಿವೇಶನ ಹಾಗೂ ಮೂಲಭೂತ ಸೌಕರ್ಯ ಒದಗಿಸದೇ, ೧೫ ದಿನಗಳ ಒಳಗಾಗಿ ಮನೆ ನಿರ್ಮಾಣ ಕಾಮಗಾರಿ ಆರಂಭಿಸದಿದ್ದರೆ, ಫಲಾನುಭವಿ ಪಟ್ಟಿಯಿಂದ ಹೆಸರನ್ನು ಕೈಬಿಡುವುದಾಗಿ ನೋಟೀಸ್ ನೀಡಿರುವುದು ಖಂಡನೀಯ. ಮುಂದಿನ ೧೫ ದಿನದೊಳಗೆ ಸಂತ್ರಸ್ತ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸದೇ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ನಿವೇಶನ ಗುರುತಿಸಿದ ಜಾಗಕ್ಕೆ ತೆರಳುವ ರಸ್ತೆಯಲ್ಲಿ ತೋಡು ಹರಿಯುತ್ತಿದ್ದು, ಅದನ್ನು ದಾಟಲು ಕಿರು ಸೇತುವೆಯ ಅಗತ್ಯವಿದೆ. ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ, ಈವರೆಗೂ ಕಿರು ಸೇತುವೆ ನಿರ್ಮಿಸಿಲ್ಲ. ಸಂತ್ರಸ್ತರ ಹೆಸರಿಗೆ ಪಹಣಿ ನೀಡದೇ, ಜಾಗ ಹಸ್ತಾಂತರಿಸದೇ, ಮೂಲಭೂತ ಸೌಕರ್ಯ, ಸಂತ್ರಸ್ತರಿಗೆ ಗುರುತಿಸಿರುವ ಜಾಗಕ್ಕೆ ವಾಹನ ತೆರಳಲು ಕಿರು ಸೇತುವೆ ನಿರ್ಮಿಸದೇ ಏಕಾಏಕಿ ಮನೆ ನಿರ್ಮಿಸಬೇಕೆಂಬ ನೋಟೀಸ್ ನೀಡಿರುವುದು ಸರಿಯಲ್ಲ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಸಂತ್ರಸ್ತರ ಹೆಸರಿಗೆ ಪಹಣಿ ಮಾಡಿಕೊಡಬೇಕು. ಜಾಗದಲ್ಲಿ ಕಿರು ಸೇತುವೆ ನಿರ್ಮಿಸಿ, ಮನೆ ನಿರ್ಮಾಣಕ್ಕೆ ಬೇಕಾದ ನೀರಿನ ಸೌಕರ್ಯ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸಂತ್ರಸ್ತರ ಪಟ್ಟಿ ಪುನರ್ ಪರಿಶೀಲಿಸಿ: ಈ ಹಿಂದೆ ಸಂತ್ರಸ್ತರಿಗೆ ಟೋಕನ್ ನೀಡಿದ ಸಂದರ್ಭ ಹಲವು ಲೋಪದೋಷಗಳಿವೆ. ಮತ್ತೆ ಪಟ್ಟಿಯನ್ನು ಪುನರ್ ಪರಿಶೀಲನೆ ನಡೆಸಿ ನೈಜ್ಯರನ್ನು ಆಯ್ಕೆ ಮಾಡಬೇಕು. ಇನ್ನು ಕೆಲವೇ ತಿಂಗಳಲ್ಲಿ ಮತ್ತೆ ಮಳೆಗಾಲ ಆರಂಭವಾಗಲಿದ್ದು, ಶೀಘ್ರದಲ್ಲಿ ಜಿಲ್ಲಾಡಳಿತ ಸಂತ್ರಸ್ತರಿಗೆ ಜಾಗ ಹಸ್ತಾಂತರಿಸಿ ಸೂರು ನಿರ್ಮಿಸಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಮಣಿ ಮೊಹಮ್ಮದ್, ಸಂತ್ರಸ್ತರಾದ ಎಂ.ಎ. ಸಲ್ಮತ್, ಪಿ. ಶ್ರೀಜ, ಎಂ.ಎ. ರಶಾದ್, ಎನ್.ಟಿ. ಸೂರನ್ ಇದ್ದರು.