ಮಡಿಕೇರಿ, ಫೆ. 5: ಟಿ.ಶೆಟ್ಟಿಗೇರಿ ಸನಿಹ ಇಂದು ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ವ್ಯಕ್ತಿಯೋರ್ವರು ದುರ್ಮರಣಗೊಂಡಿರುವ ಘಟನೆ ಸಂಭವಿಸಿದೆ. ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಟಿ.ಶೆಟ್ಟಿಗೇರಿ ಗ್ರಾಮದ ವಗರೆ ಜಂಕ್ಷನ್ ಬಳಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವಘಡ ನಡೆದಿದೆ. ಟಿ.ಶೆಟ್ಟಿಗೇರಿಯ ನಿವಾಸಿ ಮಚ್ಚಾಮಾಡ ಪಿ. ಕುಟ್ಟಪ್ಪ (ರಾಜು-87) ಎಂಬವರು ಚಾಲಿಸುತ್ತಿದ್ದ ವ್ಯಾಗನಾರ್ ಕಾರಿಗೆ (ಕೆಎ12 ಎಂಎ4821) ಬಿರುನಾಣಿ ರಸ್ತೆ ಕಡೆಯಿಂದ ಬರುತ್ತಿದ್ದ ಸುಂಟಿಕೊಪ್ಪದ ಸಂಜಯ್ ಎಂಬವರು ಚಾಲಿಸುತ್ತಿದ್ದ ಬಾಡಿಗೆ ಕಾರು ಡಿಕ್ಕಿಯಾಗಿದೆ. ಘಟನೆಯಿಂದ ಕುಟ್ಟಪ್ಪ (ರಾಜು) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಕಾರಿನಲ್ಲಿ ಚಾಲಕ ಸಂಜಯ್ ಸೇರಿದಂತೆ ಇನ್ನಿಬ್ಬರು ಇದ್ದು ಇವರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕುಟ್ಟಪ್ಪ ಅವರು ಮೂಲತಃ ಮಂಚಳ್ಳಿ ಗ್ರಾಮದವರಾಗಿದ್ದು ಟಿ.ಶೆಟ್ಟಿಗೇರಿಯಲ್ಲಿ ಕೋವಿ ಮಳಿಗೆ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದು, ಅಂತ್ಯಕ್ರಿಯೆ ಸಂಜೆ ಟಿ.ಶೆಟ್ಟಿಗೇರಿಯಲ್ಲಿ ನಡೆಯಿತು. ಘಟನೆ ಸ್ಥಳಕ್ಕೆ ಶ್ರೀಮಂಗಲ ಠಾಣಾಧಿಕಾರಿ ರವಿಕಿರಣ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿದರು. ಘಟನೆ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಚ್ಚಾಮಾಡ ಕುಟ್ಟಪ್ಪ (ರಾಜು) ಅವರ ಎರಡು ಕಣ್ಣುಗಳನ್ನು ಅವರ ಕುಟುಂಬಸ್ಥರು ಆಸ್ಪತ್ರೆಗೆ ದಾನ ಮಾಡಿದ್ದಾರೆ.