ಮಡಿಕೇರಿ, ಫೆ. ೪: ಮಡಿಕೇರಿ ನಗರದಲ್ಲಿರುವ ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿ ಕೊಡಗು ರಕ್ಷಣಾ ವೇದಿಕೆ ವತಿಯಿಂದ ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಹಲವು ಅಂಗಡಿ, ಹೊಟೇಲ್‌ಗಳ ಮಾಲೀಕರು ನಗರಸಭೆಯಿಂದ ಪರವಾನಗಿ ಪಡೆದುಕೊಂಡಿಲ್ಲ. ಇದರಿಂದ ನಗರಸಭೆಗೆ ದೊಡ್ಡ ಮಟ್ಟದಲ್ಲಿ ತೆರಿಗೆ ವಂಚನೆಯಾಗುತ್ತಿದೆ. ಕಾನೂನು ಬಾಹಿರವಾಗಿ ನಡೆಯುತ್ತಿರುವ ಅಂಗಡಿ, ಹೊಟೇಲ್‌ಗಳನ್ನು ೧೫ ದಿನಗಳ ಒಳಗಾಗಿ ಬಂದ್ ಮಾಡಿ, ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವೇದಿಕೆಯ ಪ್ರಮುಖರು ಒತ್ತಾಯಿಸಿದರು.

ಇತ್ತೀಚೆಗೆ ರಾಜಾಸೀಟ್‌ನಲ್ಲಿ ಬಡ ವ್ಯಾಪಾರಿಯ ಮೇಲೆ ನಗರಸಭೆಯಿಂದ ದಬ್ಬಾಳಿಕೆ ನಡೆದಿರುವುದು ಖಂಡನೀಯ. ವೈಯಕ್ತಿಕ ವಿಚಾರಗಳಿಗೆ ನಗರಸಭೆಯನ್ನು ಬಳಸಿಕೊಳ್ಳದಂತೆ ಪೌರಾಯುಕ್ತರು ನಗರಸಭೆ ಸದಸ್ಯರಿಗೆ ತಿಳಿ ಹೇಳಬೇಕು. ಪೌರಾಯುಕ್ತರು ಹಾಗೂ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದವರು ತಮ್ಮ ಅಧಿಕಾರ ಮಿತಿಯನ್ನು ಅರಿತುಕೊಳ್ಳುವಂತೆ ಮನದಟ್ಟು ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಪೌರಾಯುಕ್ತ ರಾಮ್‌ದಾಸ್, ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿರುವ ಅನಧಿಕೃತ ಅಂಗಡಿ ಮಳಿಗೆಗಳ ಬಗ್ಗೆ ಸರ್ವೆ ನಡೆಸಿ ನೋಟೀಸ್ ನೀಡಲಾಗಿದೆ. ಹಲವರು ಪರವಾನಗಿ ಪಡೆದುಕೊಂಡಿದ್ದಾರೆ. ಉಳಿದವರಿಗೆ ೧೫ ದಿನಗಳ ಗಡುವು ನೀಡಲಾಗುವುದು. ಸ್ಪಂದಿಸದ ಅಂಗಡಿಗಳಿಗೆ ಖುದ್ದು ಭೇಟಿ ನೀಡಿ ಅಂಗಡಿ ಮುಚ್ಚಿಸಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ನಗರಸಭೆ ಎದುರು ನಿರಂತರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭ ವೇದಿಕೆಯ ನಿರ್ದೇಶಕ ರವಿ, ನಗರಾಧ್ಯಕ್ಷ ಚೊಟ್ಟೆಯಂಡ ಶರತ್, ನಗರ ಉಸ್ತುವಾರಿ ಸುಲೈಮಾನ್, ನಗರ ಕಾರ್ಯಾಧ್ಯಕ್ಷ ಆರ್.ಮಹೇಶ್ ಹಾಜರಿದ್ದರು.