ಶನಿವಾರಸಂತೆ, ಫೆ. ೪: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗನಹಳ್ಳಿ ಗ್ರಾಮಸ್ಥರು ಶೆಟ್ಟಿಗನಹಳ್ಳಿಯ ಗ್ರಾಮದ ಸರ್ವೆ ನಂ. ೧/೬ ರ ೨ ಎಕರೆ ವಿಸ್ತಿçÃರ್ಣ ಗೋಮಾಳ ಜಾಗವನ್ನು ಬೇಲಿಹಾಕಿ ಸಂರಕ್ಷಣೆ ಮಾಡಿದ್ದಾರೆ. ಬೇಲಿ ಇಲ್ಲದೆ ಅನೈತಿಕ ಚಟುವಟಿಕೆ ಕೇಂದ್ರವಾಗಿದ್ದರಿAದ ಗ್ರಾಮಸ್ಥರು ಸೇರಿ ಆಸ್ತಿಯ ಸಂರಕ್ಷಣೆಗೆ ತಂತಿ ಬೇಲಿ ಮಾಡಿ ಸಂರಕ್ಷಣೆ ಮಾಡಲಾಗಿದೆ ಮತ್ತು ಗೋವುಗಳ ಆಹಾರಕ್ಕಾಗಿ ಉಪಯೋಗಿಸಲಾಗಿದೆ. ಸದರಿ ಆಸ್ತಿಯನ್ನು ಅಕ್ರಮ ಒತ್ತುವರಿ ಮಾಡಲು ಅಪ್ಪಶೆಟ್ಟಳ್ಳಿ ಗ್ರಾಮದವರು ಪ್ರಯತ್ನ ಮಾಡಿರುವುದರಿಂದ ಈ ತಂತಿ ಬೇಲಿ ಕೆಲಸವನ್ನು ಗ್ರಾಮಸ್ಥರು ನಿರ್ವಹಿಸಿದ್ದಾರೆ. ಸಂರಕ್ಷಿತ ಆಸ್ತಿಗೆ ಸರಕಾರದ ನಿಯಮಾನುಸಾರ ರಕ್ಷಣೆ ಒದಗಿಸುವಂತೆ ದುಂಡಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಅರ್ಪಿಸಲಾಗಿದೆ.

ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಗನಹಳ್ಳಿ ಗ್ರಾಮದ ಸರಕಾರಿ ಸರ್ವೆ ನಂ. ೧/೬ ಮತ್ತು ೧/೭ ರಲ್ಲಿ ಸರಕಾರಿ ಜಾಗಕ್ಕೆ ಬೇಲಿ ಹಾಕಿರುವುದನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಸೋಮವಾರಪೇಟೆ ತಹಶೀಲ್ದಾರರವರು ಸೂಚಿಸಿದ್ದು, ಗ್ರಾಮಸ್ಥರುಗಳಿಂದ ವಿರೋಧ ವ್ಯಕ್ತಪಡಿಸುವ ಸಂಭವವಿದ್ದು, ಒತ್ತುವರಿ ತೆರವುಗೊಳಿಸುವ ಸಮಯದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಾ. ೧ ರ ಮಧ್ಯಾಹ್ನ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಹಾಗೂ ಸಿಬ್ಬಂದಿಗಳು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬಂದಾಗ ಶೆಟ್ಟಿಗನಹಳ್ಳಿಯ ಮಹಿಳೆಯರು ಹಾಗೂ ಪುರುಷರು ತಂತಿ ಬೇಲಿ ತೆರವುಗೊಳಿಸದಂತೆ ತಂತಿ ಬೇಲಿಗೆ ಅಡ್ಡವಾಗಿ ನಿಂತರು. ಸಂಜೆಯವರೆಗೆ ಕಾದ ಅಧಿಕಾರಿಗಳು ಸ್ಥಳದಿಂದ ಜಾಗ ಖಾಲಿ ಮಾಡಿದ ಘಟನೆ ನಡೆದಿದೆ.