ಕುಶಾಲನಗರ, ಫೆ. ೩: ಜನವರಿ ೨೨ರಂದು ನಾಪತ್ತೆಯಾಗಿದ್ದ ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿಯ ಮೃತದೇಹ ಕೊಡಗು ಜಿಲ್ಲೆಯ ಗಡಿಭಾಗ ಹಾಸನ ಜಿಲ್ಲೆಯ ಕೊಣನೂರು ವ್ಯಾಪ್ತಿಯ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಸುರೇಶ್ (೫೨) ಎಂಬವರು ಕಳೆದ ೧೩ ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾದ ಪ್ರಕರಣ ವರದಿಯಾಗಿತ್ತು. ಈ ಸಂಬAಧ ಸುರೇಶ್ ಅವರ ಪತ್ನಿ ಕುಶಾಲನಗರ ಪಟ್ಟಣ ಠಾಣೆಯಲ್ಲಿ ತನ್ನ ಪತಿ ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬAಧಿಸಿ ದಂತೆ ಕುಶಾಲನಗರ ಪೊಲೀಸರು ನಾಪತ್ತೆಯಾದ ಸುರೇಶ್ ಅವರ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.

ಗುರುವಾರ ಸಂಜೆ ವೇಳೆಗೆ ಕೊಣನೂರು ಸಮೀಪದ ಕೂಡ್ಲೂರು ಎಂಬಲ್ಲಿ ಕೆರೆಯಲ್ಲಿ ಕೊಳೆತ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಅಪರಿಚಿತ ಮೃತ ದೇಹದ ಬಗ್ಗೆ ಮಾಹಿತಿ ಕಲೆಹಾಕಿ ನಂತರ ಕುಶಾಲನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ನಾಪತ್ತೆಯಾಗಿದ್ದ ಎಎಸ್‌ಐ ಸುರೇಶ್ ಕುಟುಂಬ ಸದಸ್ಯರು ತೆರಳಿ ಪರಿಶೀಲನೆ ನಡೆಸಿದ ಸಂದರ್ಭ ಆ ಮೃತದೇಹ ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿ ಸುರೇಶ್ ಅವರದ್ದು ಎಂದು ಖಚಿತಗೊಂಡಿದೆ. ಕೊಣನೂರು ಪೊಲೀಸರು ಮೃತದೇಹದ ಮಹಜರು ನಡೆಸಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಾಗಿದೆ.

ನಿಗೂಢವಾಗಿ ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿ ಸುರೇಶ್ ಮೂಲತಃ ಕೊಣನೂರು ನಿವಾಸಿಯಾಗಿದ್ದರು.