ಪರೀಕ್ಷೆ ಮುಂದೂಡಲು ಸುಪ್ರೀಂ ಕೋರ್ಟ್ ನಕಾರ
ನವದೆಹಲಿ, ಫೆ. ೩: ಇಂಜಿನಿಯರಿAಗ್ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೋವಿಡ್ ನಿರ್ಬಂಧನೆ ನಡುವೆ ತಾ. ೫ ರಂದು ಪರೀಕ್ಷೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಅದನ್ನೀಗ ಮುಂದೂಡದೆ ಅದೇ ದಿನ ನಡೆಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಮ್‌ನಾಥ್ ಅವರನ್ನೊಳಗೊಂಡ ನ್ಯಾಯಪೀಠ, ಗೇಟ್ ಪರೀಕ್ಷೆ ನಿಗದಿಯಾಗಿರುವ ಕೇವಲ ೪೮ ಗಂಟೆ ಮೊದಲು ಮುಂದೂಡುವುದು ವಿದ್ಯಾರ್ಥಿಗಳಲ್ಲಿ ಗೊಂದಲವನ್ನುAಟುಮಾಡುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಭವಿಷ್ಯದ ಮೇಲೆ ಚೆಲ್ಲಾಟವಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಯಾವಾಗ ಪರೀಕ್ಷೆ ನಡೆಸಬೇಕೆಂಬುದು ಶೈಕ್ಷಣಿಕ ನೀತಿಯಾಗಿದ್ದು ಅದರಂತೆ ಪರೀಕ್ಷೆ ನಡೆಸಬೇಕು. ಈ ವಿಷಯದಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಕೂಡ ನ್ಯಾಯಪೀಠ ಹೇಳಿದೆ. ಈ ಬಾರಿಯ ಗೇಟ್ ಪರೀಕ್ಷೆಯಲ್ಲಿ ೯ ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದು, ಸುಮಾರು ೨೦ ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವAತೆ ಆನ್‌ಲೈನ್‌ನಲ್ಲಿ ಸಹಿ ಹಾಕಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ದೇಶದ ಸುಮಾರು ೨೦೦ ಕೇಂದ್ರಗಳಲ್ಲಿ ೯ ಲಕ್ಷ ವಿದ್ಯಾರ್ಥಿಗಳು ಭೌತಿಕವಾಗಿ ಪರೀಕ್ಷೆಗೆ ಹಾಜರಾಗಬೇಕಿದ್ದು ಸಂಬAಧಪಟ್ಟ ಆಡಳಿತ ಅಧಿಕಾರಿ ವರ್ಗ ಸೂಕ್ತ ಕೋವಿಡ್ ನಿಬಂಧನೆಗಳು, ಮಾರ್ಗ ಸೂಚಿಗಳನ್ನು ಹೊರಡಿಸಿಲ್ಲ, ಈ ಸನ್ನಿವೇಶದೊಳಗೆ ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ ಎಂದು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಕೋರಿದ್ದರು.
ಮಾಜಿ ಐಪಿಎಸ್ ಅಧಿಕಾರಿ ಮನೆ ಮೇಲೆ ಐಟಿ ದಾಳಿ
ನೋಯ್ಡಾ, ಫೆ. ೩: ಮಾಜಿ ಐಪಿಎಸ್ ಅಧಿಕಾರಿ ರಾಮ್ ನಾರಾಯಣ್ ಸಿಂಗ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಲಾಕರ್‌ನಲ್ಲಿ ಕೋಟ್ಯಂತರ ರೂಪಾಯಿ ನಗದು ಮಾತ್ರವಲ್ಲದೆ ಚಿನ್ನ ಮತ್ತು ವಜ್ರದ ಆಭರಣಗಳು ಪತ್ತೆಯಾಗಿವೆ. ಇದಲ್ಲದೆ, ಲಾಕರ್‌ಗಳಲ್ಲಿದ್ದ ಚಿನ್ನದ ಇಟ್ಟಿಗೆಗಳು ಮತ್ತು ಬಿಸ್ಕತ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಆಭರಣಗಳ ಮೌಲ್ಯ ಕೋಟ್ಯಂತರ ರೂಪಾಯಿ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ವಜ್ರ, ಮುತ್ತು, ಬೆಳ್ಳಿ ಮತ್ತು ಚಿನ್ನದ ಆಭರಣಗಳು ಸೇರಿವೆ. ಆದಾಯ ತೆರಿಗೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ನೆಲಮಹಡಿಯಲ್ಲಿ ಪತ್ತೆಯಾಗಿರುವ ೬೫೦ ಲಾಕರ್‌ಗಳ ಪೈಕಿ ೬ ಲಾಕರ್‌ಗಳನ್ನು ಓಪನ್ ಮಾಡಲಾಗಿದೆ. ಈ ಪೈಕಿ ಒಂದು ಲಾಕರ್‌ನಲ್ಲಿ ಚಿನ್ನದ ಇಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ. ಆಶ್ಚರ್ಯವೆಂದರೆ ಈ ಆಭರಣಗಳು ಮತ್ತು ನಗದು ಹಣದ ಹಕ್ಕುದಾರರು ಇನ್ನೂ ಮುಂದೆ ಬಂದಿಲ್ಲ. ಚಿನ್ನದ ಇಟ್ಟಿಗೆಯ ಬೆಲೆ ಸುಮಾರು ೪೫ ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಉಳಿದ ಆಭರಣಗಳು ೨.೫ ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಈ ಮೊದಲು ಆದಾಯ ತೆರಿಗೆ ಇಲಾಖೆ ತಂಡ ದಾಳಿ ನಡೆಸಿದಾಗ ಲಾಕರ್‌ನಿಂದ ಸುಮಾರು ೬ ಕೋಟಿ ರೂಪಾಯಿ ಪತ್ತೆಯಾಗಿತ್ತು. ಆದರೆ, ಈ ಹಣಕ್ಕೆ ಸಂಬAಧಿಸಿದAತೆ ಯಾರು ಹಕ್ಕುದಾರರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ಬಂದಿಲ್ಲ. ಹಾಗಾಗಿ ಈ ಹಣವನ್ನು ಕಪ್ಪುಹಣ ಎಂದು ಪರಿಗಣಿಸಿ ಜಪ್ತಿ ಪ್ರಕ್ರಿಯೆ ಆರಂಭಿಸಲಾಗಿದೆ. ಅಲ್ಲದೆ, ಚಿನ್ನಾಭರಣದ ಹಕ್ಕುದಾರರೂ ಯಾರು ಎಂದು ಈರವರೆಗೂ ಮುಂದೆ ಬಂದಿಲ್ಲ. ಆದಾಯ ತೆರಿಗೆ ಇಲಾಖೆಯು ಚಿನ್ನದ ಆಭರಣಗಳು ಮತ್ತು ಚಿನ್ನದ ಬಿಸ್ಕೆಟ್‌ಗಳಂತಹ ಎಲ್ಲಾ ಆಭರಣಗಳನ್ನು ಸರ್ಕಾರದ ರಕ್ಷಣೆಯಲ್ಲಿ ಇರಿಸಿದೆ. ಮಾಜಿ ಐಪಿಎಸ್ ಅಧಿಕಾರಿ ಮನೆಯಲ್ಲಿ ೬೫೦ ಲಾಕರ್‌ಗಳಿದ್ದು, ಇದರಲ್ಲಿ ಸುಮಾರು ೨೦ ಮಂದಿಯ ಲಾಕರ್‌ಗಳ ಬಗ್ಗೆ ಅನುಮಾನ ಉಂಟಾಗಿದೆ. ಸದ್ಯ ೬ ಲಾಕರ್‌ಗಳನ್ನು ಒಡೆದು ತನಿಖೆ ಮುಂದುವರಿಸಲಾಗಿದೆ. ಮೂರು ದಿನಗಳ ಹಿಂದೆ ನೋಯ್ಡಾದ ಸೆಕ್ಟರ್ ೫೦ರ ಬಂಗಲೆ ಸಂಖ್ಯೆ-ಎ೬ರ ಮೇಲೆ ಆದಾಯ ತೆರಿಗೆ ಇಲಾಖೆ ತಂಡ ದಾಳಿ ನಡೆಸಿತ್ತು. ಈ ಬಂಗಲೆ ಯುಪಿ ಪೊಲೀಸ್‌ನ ಐಪಿಎಸ್ ಅಧಿಕಾರಿ, ೧೯೮೩ ರ ಬ್ಯಾಚ್‌ನ ನಿವೃತ್ತ ಐಪಿಎಸ್ ರಾಮ್ ನಾರಾಯಣ್ ಸಿಂಗ್ ಅವರಿಗೆ ಸೇರಿದೆ. ಈ ಬಂಗಲೆಯ ನೆಲಮಾಳಿಗೆಯಲ್ಲಿ ರಾಮ್ ನಾರಾಯಣ್ ಸಿಂಗ್ ಅವರ ಪತ್ನಿ ಮತ್ತು ಮಗ “ಮಾನ್ಸಮ್ ನೋಯ್ಡಾ ವಾಲ್ಟ್ಸ್ ಹೆಸರಿನಲ್ಲಿ ಪ್ರೈವೇಟ್ ಲಾಕರ್‌ಗಳನ್ನು ಗ್ರಾಹಕರಿಗೆ ಬಾಡಿಗೆಗೆ ನೀಡುತ್ತಿದ್ದರು. ಇಲ್ಲಿ ಲಾಕರ್ ಸೇವೆಯನ್ನು ತೆಗೆದುಕೊಂಡ ಗ್ರಾಹಕರ ಕೆವೈಸಿ ಪತ್ತೆಯಾಗಿಲ್ಲ, ನಗದು, ಚಿನ್ನದ ಮಾಲು ಪತ್ತೆಯಾದ ಬಳಿಕ ಲಾಕರ್‌ಗಳ ಮಾಲೀಕರಿಂದ ಮಾಹಿತಿ ಪಡೆಯಲಾಗುತ್ತಿದೆ.