ನವದೆಹಲಿ, ಫೆ. ೨ : ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಜಿಲ್ಲೆಯ ಮೂಲದ ವಕೀಲ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಅವರ ಹೆಸರನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಮತ್ತೊಮ್ಮೆ ಶಿಫಾರಸ್ಸು ಮಾಡಿದೆ. ಮಂಗಳವಾರದAದು ನವದೆಹಲಿಯಲ್ಲಿ ನಡೆದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಕೊಲಿಜಿಯಂ ಸಭೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಿ.ಎಂ. ಪೂಣಚ್ಚ ಅವರ ಹೆಸರನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ೨೦೨೧ರ ಅಕ್ಟೋಬರ್ನಲ್ಲಿಯೇ ಮೊದಲ ಬಾರಿಗೆ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿತ್ತು. ಆಗ ಶಿಫಾರಸ್ಸು ಪರಿಗಣಿಸದ ಕೇಂದ್ರ ಸರ್ಕಾರ, ಕಡತವನ್ನು ಕೊಲಿಜಿಯಂಗೆ ಹಿಂತಿರುಗಿಸಿತ್ತು.
ಇದೀಗ ಮತ್ತೊಮ್ಮೆ ಪೂಣಚ್ಚ ಅವರ ಹೆಸರನ್ನು ಪರಿಗಣಿಸುವಂತೆ ಕೊಲಿಜಿಯಂ ಶಿಫಾರಸ್ಸು ಮಾಡಿದ್ದು ಅವರು ನ್ಯಾಯಮೂರ್ತಿ ಹುದ್ದೆಗೆ ಏರಲಿದ್ದಾರೆ ಎನ್ನಲಾಗಿದೆ. ಪ್ರಸ್ತುತ ರಾಜ್ಯ ಹೈಕೋರ್ಟ್ನಲ್ಲಿ ಮಂಜೂರಾಗಿರುವ ೬೨ ನ್ಯಾಯಮೂರ್ತಿ ಹುದ್ದೆಗಳ ಪೈಕಿ ೪೫ ನ್ಯಾಯಮೂರ್ತಿ ಗಳಷ್ಟೇ ಕಾರ್ಯ ನಿರ್ವಹಿಸುತ್ತಿದ್ದು ಉಳಿದ ೧೭ ಹುದ್ದೆಗಳು ಕೆಲ ಸಮಯದಿಂದ ಖಾಲಿ ಇವೆ.
ಮೊಣ್ಣಪ್ಪ ಪೂಣಚ್ಚ ಅವರು ಸಿದ್ದಾಪುರ ಸಮೀಪದ ನೋಕ್ಯ ಗ್ರಾಮದವರಾಗಿದ್ದು ಇವರ ತಂದೆ ದಿವಂಗತ ಸಿ.ಎಂ. ಮೊಣ್ಣಪ್ಪ ಕೂಡ ಖ್ಯಾತ ವಕೀಲರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು.
೨೦೦೧ ರಲ್ಲಿ ಬೆಂಗಳೂರಿನಲ್ಲಿ ಖ್ಯಾತ ವಕೀಲ ಎಸ್ ಕೆ ವಿ ಚಲಪತಿ ಅವರ ಜೂನಿಯರ್ ಆಗಿ ವಕೀಲ ವೃತ್ತಿ ಆರಂಭಿಸಿದ ಪೂಣಚ್ಚ ಅವರು ನಂತರ ತಮ್ಮ ತಂದೆಯ ಕೈ ಕೆಳಗೆ ಕೆಲಸ ಮಾಡಿದ್ದರು. ಕುಟುಂಬದ ವಲಯದಲ್ಲಿ ನಯನ್ ಎಂದು ಕರೆಯಲ್ಪಡುವ ಪೂಣಚ್ಚ ೨೦೨೦ ರ ಆಗಸ್ಟ್ನಿಂದ ರಾಜ್ಯ ಹೈಕೋರ್ಟ್ನಲ್ಲಿ ಹೆಚ್ಚುವರಿ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಡಾ. ಕಂಜಿತAಡ ಚಿನ್ನಪ್ಪ ಅವರ ಪುತ್ರಿ ವಕೀಲೆ ಸವಿತಾ ಅವರನ್ನು ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದು ಓರ್ವ ಮಗ ಮತ್ತು ಓರ್ವ ಮಗಳನ್ನು ಹೊಂದಿದ್ದಾರೆ.
- ಕೋವರ್ಕೊಲ್ಲಿ ಇಂದ್ರೇಶ್