ಚೆಯ್ಯಂಡಾಣೆ, ಜ. ೩೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಕೋವಿಡ್ ನಿಯಂತ್ರಣ ಕಾರ್ಯಪಡೆಯ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಅವರ ಅಧ್ಯಕ್ಷತೆಯಲ್ಲಿ ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಚೇತನ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಅಧಿಕವಾಗುತ್ತಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕೂಡ ವೈರಸ್ ಅಧಿಕವಾಗುತ್ತಿದೆ. ಇದನ್ನು ತಡೆಗಟ್ಟಬೇಕು. ಕೋವಿಡ್ ನಿರೋಧಕ ಲಸಿಕೆಯನ್ನು ಪಡೆಯದವರನ್ನು ಕೂಡಲೇ ಲಸಿಕೆ ಪಡೆಯುವಂತೆ ಸಲಹೆ ನೀಡಬೇಕು. ೨ ಡೋಸ್ ಪಡೆದವರು ಬೂಸ್ಟರ್ ಡೋಸ್ ಪಡೆಯುವಂತೆ ಮಾಹಿತಿ ನೀಡಿದರು. ಮೂರನೇ ಅಲೆ ಮಕ್ಕಳಲ್ಲಿ ಹೆಚ್ಚು ಕಾಣುತ್ತಿದ್ದು ಮಕ್ಕಳು ಸುರಕ್ಷಿತವಾಗಿರಲು ಮನೆಯಲ್ಲಿರುವ ಹಿರಿಯರು ಕಡ್ಡಾಯವಾಗಿ ಲಸಿಕೆ ಪಡೆದರೆ ಮಾತ್ರ ಸಾಧ್ಯ ಎಂದರು. ಲಸಿಕೆಯನ್ನು ಪಡೆಯದ ಮನೆಗಳಿಗೆ ವೈದ್ಯಾಧಿಕಾರಿಗಳು ಖುದ್ದು ತೆರಳಿ ಮಾಹಿತಿ ಕಲೆಹಾಕಿ ಅಲ್ಲೇ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲು ತಿಳಿಸಿದರು. ಹಾಗೂ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾನಿಟೈಜರ್ ಅನ್ನು ಉಪಯೋಗಿಸಲು ಸಾರ್ವಜನಿಕರಿಗೆ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರು ಮಾತನಾಡಿ ಎಡಪಾಲ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ವೈರಸ್ ಕಾಣಿಸಿದ್ದು, ಅವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದ ಕುರಿತಾಗಿ ಕಾರಣ ಕೇಳಿದಾಗ ತಾಲೂಕು ಆರೋಗ್ಯಾಧಿಕಾರಿ ಅದಕ್ಕೆ ಸಮಜಾಯಿಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹೇಶ್, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ಆರೋಗ್ಯ ವೈದ್ಯಾಧಿಕಾರಿ ಡಾ. ಉತ್ತಪ್ಪ ಭರತ್, ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗೆ ಪೂಜಾ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ, ಗ್ರಾಮ ಪಂಚಾಯಿತಿ ಸದಸ್ಯರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆ ಯರು, ಅಂಗನವಾಡಿ ಕಾರ್ಯಕರ್ತೆ ಯರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ವಾಗತವನ್ನು ಬಿದ್ದಪ್ಪ ಹಾಗೂ ವಂದನೆಯನ್ನು ಅಭಿವೃದ್ಧಿ ಅಧಿಕಾರಿ ಆಶಾಕುಮಾರಿ ನಿರ್ವಹಿಸಿದರು.