ಕೂಡಿಗೆ, ಜ. ೩೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಪಂಚಾಯಿತಿ ಮಾಸಿಕ ಸಭೆಯಲ್ಲಿ ಕೆಲವು ಸದಸ್ಯರು ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಈ ಹಿನ್ನೆಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಗಣಿಗಾರಿಕೆಯ ಪರವಾನಗಿ ಪರಿಶೀಲನೆ ನಡೆಸಿದರು.

ಟಿ. ನಾಗರಾಜು ಅವರು ಬಿಲ್ಡಿಂಗ್ ಸ್ಟೋನ್‌ಗಾಗಿ ೨೦ ವರ್ಷದವರೆಗೆ ಸಂಬAಧಿಸಿದ ಇಲಾಖೆ ವತಿಯಿಂದ ಪರವಾನಗಿ ಪಡೆದಿರುವುದು ದಾಖಲೆಗಳಿಂದ ಖಾತ್ರಿಯಾಗಿದೆ. ಇದು ಅಕ್ರಮ ಗಣಿಗಾರಿಕೆಯಲ್ಲ. ಇಲಾಖೆಯಿಂದ ಮಾಹಿತಿ ಪಡೆಯಲಾಗಿದೆ. ಆದ್ದರಿಂದ ಯಾವುದೇ ರೀತಿಯ ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸದೆ ಇಲಾಖೆಯ ನಿಯಮಾನುಸಾರವಾಗಿ ಗಣಿಗಾರಿಕೆ ನಡೆಸುವಂತೆ ಸೂಚನೆ ನೀಡಿದ್ದೇವೆ ಎಂದು ಅಧ್ಯಕ್ಷೆ ಇಂದಿರಾರಮೇಶ್ ಹೇಳಿದರು.

ಈ ಸಂದರ್ಭ ಕಂದಾಯ ಇಲಾಖೆ ಕಂದಾಯ ನಿರೀಕ್ಷಕ ಅಧಿಕಾರಿ ಸಂತೋಷ್, ಲೆಕ್ಕಾಧಿಕಾರಿ ಗೌತಮ್, ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳಾದ ರೋಜಾ, ಉಷಾ ಹಾಗೂ ಇಂಜಿನಿಯರ್ ರಾಹುಲ್, ಗ್ರಾ.ಪಂ. ಸದಸ್ಯರಾದ ಷಂಶುದ್ದೀನ್, ಆಶಾ ಹಾಗೂ ಸಿಬ್ಬಂದಿಗಳು ಇದ್ದರು.