ಸೋಮವಾರಪೇಟೆ, ಜ.೩೦: ಪಟ್ಟಣದ ಎರಡು ದೇವಾಲಯಗಳಿಗೆ ಕನ್ನ ಹಾಕಿದ ಕಳ್ಳ, ಹುಂಡಿಯೊಳಗಿದ್ದ ಕಾಣಿಕೆ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

ಪಟ್ಟಣದ ಶ್ರೀ ಸೋಮೇಶ್ವರ ದೇವಾಲಯ ಹಾಗೂ ಚೌಡ್ಲು ಗ್ರಾಮದ ಶ್ರೀ ಅಂಜನೇಯ ದೇವಾಲಯದಲ್ಲಿ ಕಳ್ಳತನ ನಡೆದಿದೆ. ನಿನ್ನೆ ಮಧ್ಯರಾತ್ರಿ ೧ ರಿಂದ ೨ ಗಂಟೆಯ ಸಮಯದಲ್ಲಿ ಕಳ್ಳತನ ಮಾಡಲಾಗಿದೆ. ಸೋಮೇಶ್ವರ ದೇವಾಲಯದ ಹೆಂಚು ತೆಗೆದು ಒಳಗೆ ಪ್ರವೇಶಿಸಿರುವ ಕಳ್ಳ, ಹುಂಡಿಯನ್ನು ಒಡೆದು ಅದರೊಳಗಿದ್ದ ಹಣವನ್ನು ದೋಚಿದ್ದಾನೆ.

ಇದರೊಂದಿಗೆ ಶ್ರೀಆಂಜನೇಯ ಸ್ವಾಮಿ ದೇವಾಲಯದ ಬಾಗಿಲನ್ನೂ ಒಡೆದು ಒಳಪ್ರವೇಶಿಸಿರುವ ಇದೇ ಕಳ್ಳ, ಕಾಣಿಕೆ ಹುಂಡಿಯ ಬಾಗಿಲನ್ನು ಮುರಿದು ಹಣ ದೋಚಿ ಪರಾರಿಯಾಗಿದ್ದಾನೆ. ತನ್ನ ಗುರುತು ಪತ್ತೆಯಾಗದಂತೆ ಮಾಸ್ಕ್ ಹಾಗೂ ತಲೆಗೆ ಬಟ್ಟೆ ಕಟ್ಟಿಕೊಂಡಿದ್ದು, ಸಿ.ಸಿ. ಕ್ಯಾಮೆರಾದಲ್ಲಿ ಈತನ ಚಲನವಲನ ಸೆರೆಯಾಗಿದೆ.

ಒಂದು ತಿಂಗಳ ಹಿಂದೆ ಸೋಮೇಶ್ವರ ದೇವಾಲಯ ಹಾಗೂ ೧೫ ದಿನಗಳ ಹಿಂದೆ ಆಂಜನೇಯ ಸ್ವಾಮಿ ದೇವಾಲಯದ ಹುಂಡಿಯ ಹಣವನ್ನು ದೇವಾಲಯ ಸಮಿತಿ ಪಡೆದುಕೊಂಡಿದ್ದು, ಆ ನಂತರದ ದಿನಗಳಲ್ಲಿ ಭಕ್ತರು ಹಾಕಿದ್ದ ಕಾಣಿಕೆ ಹಣ ಹುಂಡಿಯಲ್ಲಿತ್ತು.

ಇAದು ಬೆಳಗ್ಗಿನ ಜಾವ ಅರ್ಚಕರು ದೇವಾಲಯದ ಬಾಗಿಲು ತೆರೆಯಲು ಆಗಮಿಸಿದ ಸಂದರ್ಭ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇದರೊಂದಿಗೆ ಮಡಿಕೇರಿಯಿಂದ ಆಗಮಿಸಿದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳನ ಪತ್ತೆಗಾಗಿ ೩ ತಂಡಗಳನ್ನು ರಚಿಸಲಾಗಿದೆ.