ಸಿದ್ದಾಪುರ, ಜ. ೩೦: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿಐಟಿಯು ಸಂಯೋಜಿತ ಕೊಡಗು ಜಿಲ್ಲಾ ನಾಲ್ಕನೇ ಜಿಲ್ಲಾ ಸಮಾವೇಶ ಸಿದ್ದಾಪುರ ಎಸ್.ಎನ್.ಡಿ.ಪಿ. ಸಭಾಂಗಣದಲ್ಲಿ ನಡೆಯಿತು.
ಧ್ವಜಾರೋಹಣವನ್ನು ಮಡಿಕೇರಿಯ ಹಿರಿಯರಾದ ಜತ್ತಪ್ಪ ನೆರವೇರಿಸಿದರು. ಕಾರ್ಮಿಕರ ಏಳಿಗೆಗಾಗಿ ದುಡಿದು ಪ್ರಾಣತೆತ್ತ ಕಾರ್ಮಿಕ ಮುಖಂಡರುಗಳು, ರೈತ ಹೋರಾಟದಲ್ಲಿ ಮಡಿದವರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿದು ಅಗಲಿದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಗಿಡಕ್ಕೆ ನೀರು ಹಾಕುವ ಮೂಲಕ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ರಾಮಕೃಷ್ಣ ಮಾತನಾಡಿ, ಫೆಬ್ರವರಿ ೨೩ ಮತ್ತು ೨೪ ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗೀಸ್, ಸಿಐಟಿಯು ಜಿಲ್ಲಾ ಖಜಾಂಚಿ ಸ್ವಾಗತ ಸಮಿತಿಯ ಅಧ್ಯಕ್ಷ ಹೆಚ್.ಪಿ. ರಮೇಶ್, ಸಿಐಟಿಯು ಜಿಲ್ಲಾ ಉಪಕಾರ್ಯದರ್ಶಿ ಎಂ.ಡಿ. ಕುಟ್ಟಪ್ಪ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಪಿ.ಆರ್. ಭರತ್ ವಹಿಸಿದ್ದರು.
ವೇದಿಕೆಯಲ್ಲಿ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಎಂ.ಬಿ. ಹರೀಶ್, ಕಾರ್ಯದರ್ಶಿಗಳಾದ ಮಧುಕುಮಾರ್, ಕುಶಾಲನಗರ ತಾಲೂಕು ಅಧ್ಯಕ್ಷ ಅಣ್ಣಪ್ಪ, ಕಾರ್ಯದರ್ಶಿಗಳಾದ ವಿಜಯ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಉಪಸ್ಥಿತರಿದ್ದರು. ಪೊನ್ನಂಪೇಟೆ ತಾಲೂಕು ಖಜಾಂಚಿ ಸಜಿತ ಸ್ವಾಗತಿಸಿ, ನವೀನ್ ಕುಮಾರ್ ವಂದಿಸಿದರು.
ಮಧ್ಯಾಹ್ನನದ ನಂತರ ನಡೆದ ಪ್ರತಿನಿಧಿ ಸಮಾವೇಶವನ್ನು ರಾಮಕೃಷ್ಣ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ದಿನೇಶ್ ರವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಎಂ.ಬಿ. ಹರೀಶ್ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಖಜಾಂಚಿ ಸಜಿತ ಅಣ್ಣಪ್ಪ, ನವೀನ್ ಕುಮಾರ್, ವಿಜಯ್, ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತರಾದ ಕಾರ್ಮಿಕರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪಿ.ಆರ್. ಭರತ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್, ಖಜಾಂಚಿಯಾಗಿ ವಸಂತಕುಮಾರ್, ಉಪಾಧ್ಯಕ್ಷರಾಗಿ ಅಣ್ಣಪ್ಪ, ಉಪಾಧ್ಯಕ್ಷರಾಗಿ ಮಹದೇವ್, ಎಂ.ಬಿ. ಹರೀಶ್, ಕಾರ್ಯದರ್ಶಿಯಾಗಿ ವಿಂದ್ಯಾ, ಉಪ ಕಾರ್ಯದರ್ಶಿಯಾಗಿ ಸಜಿತ ಸೇರಿದಂತೆ ಮತ್ತೊಂದು ಉಪಕಾರ್ಯದರ್ಶಿ ಸ್ಥಾನವನ್ನು ಖಾಲಿ ಬಿಟ್ಟು ಒಟ್ಟು ೨೧ ಜನರ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.