ಮಡಿಕೇರಿ, ಜ. ೩೦: ಕೊಡಗು ಜಿಲ್ಲಾ ಪೊಲೀಸ್ ಕಚೇರಿ ಸಂಕೀರ್ಣ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದು, ೨೦೨೩ರ ಮಾರ್ಚ್ನೊಳಗೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.

೨೦೨೧ರ ಮಾರ್ಚ್ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಯ ಪೊಲೀಸ್ ಕಚೇರಿ ಸಂಕೀರ್ಣದ ಯೋಜನೆಯನ್ನು ಘೋಷಿಸಿದ್ದರು. ಅದರಂತೆ ಆ ಅನುದಾನವನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಮೂಲಕ ಇದೀಗ ನೀಡಲಾಗಿದ್ದು, ರೂ. ೯ ಕೋಟಿ ೯೦ ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕಳೆದ ಡಿಸೆಂಬರ್ ಮೊದಲ ವಾರದಿಂದ ಕಾಮಗಾರಿ ಆರಂಭವಾಗಿದೆ. ಈಗಾಗಲೇ ಅಡಿಪಾಯ ಕೆಲಸ ಪ್ರಗತಿಯಲ್ಲಿದೆ. ಸುಮಾರು ೫೦ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರು ಮೂಲದ ಕಂಪನಿಯೊAದು ಟೆಂಡರ್ ಮೂಲಕ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ೫-೦೩-೨೦೨೩ ರೊಳಗೆ ಕಾಮಗಾರಿ ಮುಗಿಸುವ ಗುರಿಯನ್ನು ಹೊಂದಿದೆ. ನಗರದ ಟರ್ಫ್ ಮೈದಾನ ಎದುರಿನ ಡೈರಿ ಫಾರಂ ರಸ್ತೆಯಲ್ಲಿ ಶಿಥಿಲಗೊಂಡು ವಾಸಿಸಲು ಯೋಗ್ಯವಿಲ್ಲದ ಸ್ಥಿತಿಯಲ್ಲಿದ್ದ ಪೊಲೀಸ್ ವಸತಿ ನಿಲಯಗಳನ್ನು ಕೆಡವಿ ಸುಮಾರು ೨೦ ಸಾವಿರ ಚದರ ಅಡಿ ಪ್ರದೇಶದಲ್ಲಿ ನೂತನ ಪೊಲೀಸ್ ಸಂಕೀರ್ಣ ನಿರ್ಮಾಣ ತಲೆ ಎತ್ತಲಿದೆ.

(ಮೊದಲ ಪುಟದಿಂದ)

ಈ ಸಂಬAಧ ನೀಲಿನಕ್ಷೆ ತಯಾರಿಸಲಾಗಿದ್ದು, ಅದರಂತೆ ನೆಲ ಅಂತಸ್ತು ಸೇರಿ ೩ ಅಂತಸ್ತಿನ ಬೃಹತ್ ಕಟ್ಟಡ ನಿರ್ಮಾಣವಾಗಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಘಟಕಗಳು ಒಂದೆ ಕಟ್ಟಡದಲ್ಲಿರಲಿವೆ. ಪಾರ್ಕಿಂಗ್‌ಗೆ ವಿಶಾಲ ಜಾಗ ಮಾಡಲಾಗುತ್ತದೆ. ಕಟ್ಟಡದ ಸುತ್ತಲೂ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡುವ ಯೋಜನೆ ಇದೆ.

ಕಟ್ಟಡದಲ್ಲಿ ಏನಿರಲಿದೆ?

ನೂತನ ಪೊಲೀಸ್ ಸಂಕೀರ್ಣದಲ್ಲಿ ನೆಲಅಂತಸ್ತು ಸೇರಿ ೨ ಅಂತಸ್ತುಗಳಿರಲಿವೆ. ಸುಸಜ್ಜಿತವಾಗಿ ಕಟ್ಟಡ ತಲೆಎತ್ತುವ ನಿರೀಕ್ಷೆಯಲ್ಲಿದ್ದು, ಈಗಾಗಲೇ ಭೂಸಮತಟ್ಟು ಕಾರ್ಯ ಮುಗಿದು ಅಡಿಪಾಯ ಹಾಕುವ ಕೆಲಸ ಶುರುವಾಗಿದೆ.

ನೆಲಅಂತಸ್ತಿನಲ್ಲಿ ರೆಕಾರ್ಡ್ ರೂಂ, ತರಬೇತಿ ಕೊಠಡಿ, ಕಂಪ್ಯೂಟರ್ ಕೊಠಡಿ, ವಿವಿಧ ಘಟಕಗಳ ಉಪನಿರೀಕ್ಷಕರ ಕಚೇರಿಗಳು, ಎಲೆಕ್ಟಾçನಿಕ್ ಪ್ಯಾನಲ್ ರೂಂ ಇರಲಿದೆ. ಮೊದಲ ಅಂತಸ್ತಿನಲ್ಲಿ ಆಡಳಿತ ವಿಭಾಗ, ಸೆಕ್ಷನ್ ಸೂಪರ್‌ಡೆಂಟ್ ಕಚೇರಿ, ವಿಶಾಲವಾದ ಸಭಾಂಗಣ, ಸೀಮಿತ ಅಧಿಕಾರಿಗಳ ಸಭೆಗೆ ಮತ್ತೊಂದು ಕಚೇರಿ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಯೂ ಇಲ್ಲಿರಲಿದೆ. ೨ನೇ ಅಂತಸ್ತಿನಲ್ಲಿ ಕಂಟ್ರೋಲ್ ರೂಂ, ವಿವಿಧ ಕಚೇರಿಗಳು ಇರಲಿವೆ.

ಅದಲ್ಲದೆ ಒಳಚರಂಡಿ ವ್ಯವಸ್ಥೆ ಜೊತೆಗೆ ಮುಂಭಾಗ ಹಾಗೂ ಹಿಂಭಾಗದಲ್ಲಿ ರಸ್ತೆ ನಿರ್ಮಾಣವಾಗಲಿದೆ. ಒಂದು ಕಡೆಯಿಂದ ಪ್ರವೇಶ ಹಾಗೂ ಮತ್ತೊಂದು ಕಡೆಯಿಂದ ನಿರ್ಗಮನಕ್ಕೆ ವ್ಯವಸ್ಥೆ ಮಾಡುವ ಉದ್ದೇಶ ಹೊಂದಲಾಗಿದೆ. ಪೊಲೀಸ್ ಕಚೇರಿ ಸಂಕೀರ್ಣ ಕಾರ್ಯ ಭರದಿಂದ ಸಾಗುತ್ತಿದ್ದು, ೧೫ ತಿಂಗಳೊಳಗೆ ಮುಗಿಸುವ ವಿಶ್ವಾಸವನ್ನು ಗುತ್ತಿಗೆ ಪಡೆದ ಕಂಪನಿ ಹೊಂದಿದೆ. ಮಳೆಗಾಲ ಸೇರಿ ೧೫ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದು, ಹೆಚ್ಚಿನ ಕಾರ್ಮಿಕರುಗಳನ್ನು ಬಳಸಿಕೊಂಡು ಕೆಲಸ ಮಾಡಿಸಲಾಗುತ್ತಿದೆ ಎಂದು ಇಂಜಿನಿಯರ್ ಯೋಗೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಪ್ರಸ್ತುತ ಇರುವ ಜಿಲ್ಲಾ ಪೊಲೀಸ್ ಕಚೇರಿ ಕಟ್ಟಡವನ್ನು ಯಾವ ಉದ್ದೇಶಕ್ಕೆ ಬಳಸಬೇಕೆಂಬ ತೀರ್ಮಾನವವನ್ನು ಹೊಸ ಕಟ್ಟಡದ ಕಾಮಗಾರಿ ಮುಗಿದ ಬಳಿಕೆ ನಿರ್ಧರಿಸಲಾಗುವುದು. ಈ ಸಂಬAಧ ಸರಕಾರದ ಮಟ್ಟದಲ್ಲಿ ಚರ್ಚಿಸಿ ಮುಂದಿನ ಕಾರ್ಯಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.

- ಹೆಚ್.ಜೆ. ರಾಕೇಶ್