ಗೋಣಿಕೊಪ್ಪಲು, ಜ. ೩೦: ಸತತ ಪರಿಶ್ರಮವಿದ್ದಲ್ಲಿ ತನ್ನ ಭೂಮಿಯನ್ನು ನಂಬಿ ಕೃಷಿ ಮಾಡಿದ ರೈತನಿಗೆ ಭೂಮಿತಾಯಿ ಕೈ ಹಿಡಿಯಲಿದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ. ಕೊಡಗಿನಲ್ಲಿ ಸಹಜವಾಗಿ ಭತ್ತವನ್ನು ವಾರ್ಷಿಕ ಬೆಳೆಯಾಗಿ ಇಲ್ಲಿನ ರೈತರು ಬೆಳೆಯುತ್ತಾರೆ. ನಂತರ ಆರು ತಿಂಗಳು ಬಿಡುವು ನೀಡಿ ಮಳೆಗಾಲ ಆರಂಭವಾಗುತ್ತಿದ್ದAತೆ ಮತ್ತೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಆದರೆ ದ.ಕೊಡಗಿನ ಶ್ರೀಮಂಗಲ ಹೋಬಳಿಯ ಹುಟ್ಟು ರೈತ ಕುಟುಂಬಕ್ಕೆ ಸೇರಿದ ಕುರ್ಚಿ ಗ್ರಾಮದ ಅಜ್ಜಮಾಡ ಬಿ. ತಿಮ್ಮಯ್ಯ (ಡಾಲಿ) ತನ್ನ ಗದ್ದೆಯಲ್ಲಿ ಇದೀಗ ಭತ್ತವನ್ನು ಬೇಸಿಗೆಯಲ್ಲಿಯೂ ಎರಡನೇ ಬೆಳೆಯಾಗಿ ಬೆಳೆಯುತ್ತಿದ್ದು, ಇನ್ನುಳಿದ ರೈತರಿಗೆ ಮಾದರಿಯಾಗಿದ್ದಾರೆ. ಭತ್ತದ ಗದ್ದೆಯ ಸಮೀಪವಿರುವ ಕೆರೆಯ ನೀರನ್ನು ಪಂಪ್‌ಸೆಟ್ ಮೂಲಕ ಬಳಸಿಕೊಂಡು ಈ ನೀರನ್ನು ಗದ್ದೆಗೆ ಹಾಯಿಸಿ, ಇದರಿಂದ ಭೂಮಿಯನ್ನು ಹದಗೊಳಿಸಿ, ಬೀಜವನ್ನು ಬಿತ್ತಿ ಇದೀಗ ಭತ್ತದ ಪೈರನ್ನು ನಾಟಿ ಮಾಡುತ್ತಿದ್ದಾರೆ.
ನೂರರಿಂದ ನೂರಹತ್ತು ದಿನಗಳಲ್ಲಿ ಕಟಾವಿಗೆ ಬರುವ ಆರ್.ಎನ್.ಆರ್ ಭತ್ತವು ಎರಡುವರೆ ಅಡಿ ಎತ್ತರ ಬೆಳೆಯುತ್ತಿದ್ದು ಕೃಷಿಯನ್ನು ನಂಬಿ ಕೆಟ್ಟವರಿಲ್ಲ ಎಂಬ ಮಾತಿಗೆ ಪುಷ್ಟಿ ನೀಡಿದಂತಾಗಿದೆ. ಭೂಮಿ ತಾಯಿಯನ್ನು ನಂಬಿದ್ದೇನೆ, ಕಳೆದ ೪೦ ವರ್ಷಗಳಿಂದ ಕೃಷಿಯಲ್ಲಿ ತೊಡಗಿದ್ದೇನೆ ವಾರ್ಷಿಕವಾಗಿ ಉತ್ತಮ ಆದಾಯ ಬರುತ್ತಿದೆ ಎಂದು ಅವರು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಇವರು ಕೇವಲ ಭತ್ತದ ಕೃಷಿಗೆ ಸೀಮಿತಗೊಂಡಿಲ್ಲ. ಸಮಯಕ್ಕೆ ಸರಿಯಾಗಿ ಆದಾಯ ಬರುವ ರೀತಿಯಲ್ಲಿ ತಮ್ಮ ದೊಡ್ಡದಾದ ಕೆರೆಯಲ್ಲಿ ಸಾವಿರಾರು ಮೀನುಗಳನ್ನು ಸಾಕಿದ್ದಾರೆ. ಇದರಿಂದಾಗಿ ವಾರ್ಷಿಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಆಡು ಸಾಕಾಣೆ ಹಾಗೂ ಕೋಳಿ ಸಾಕಾಣಿಕೆ ಇವರ ಕೈ ಹಿಡಿದಿದ್ದು ಇದರಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಪ್ರತಿನಿತ್ಯ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ತೋಟ ಹಾಗೂ ಭತ್ತದ ಗದ್ದೆಗಳ ಬಳಿ ಕಾಡಾನೆಗಳು ಇತರೆ ವನ್ಯಪ್ರಾಣಿಗಳ ಹಾವಳಿ ತಡೆಯಲು ಲಕ್ಷಾಂತರ ವೆಚ್ಚ ಮಾಡಿ ಸೋಲಾರ್ ಬೇಲಿಯನ್ನು ನಿರ್ಮಿಸಿಕೊಂಡಿದ್ದಾರೆ.
ಏನೆಲ್ಲಾ ಬೆಳೆಸಿದ್ದಾರೆ
ತನ್ನ ಕಾಫಿ ತೋಟದಲ್ಲಿ ಕೇವಲ ಕಾಫಿ ಹಾಗೂ ಕರಿಮೆಣಸಿಗೆ ಸೀಮಿತವಾಗದೇ ಉಪ ಬೆಳೆಗಳಾಗಿ ಲವಂಗ, ಬಟರ್ ಫ್ರೂಟ್, ಸಪೋಟ, ತೆಂಗು, ರಾಜಸ್ಥಾನ ಮೂಲದ ಸುಗಂಧ ದ್ರವ್ಯದ ಅಗರ್ ವುಡ್ ಮರಗಳು, ಅಡಿಕೆ, ತೆಂಗು, ಏಲಕ್ಕಿ, ಮೂಸಂಬಿ, ಕೈಹುಳಿ ಇತ್ಯಾದಿ ಲಾಭದಾಯಕ ಬೆಳೆಗಳನ್ನು ಬೆಳೆದಿದ್ದಾರೆ. ಲವಂಗ ಒಂದರಿAದಲೇ ವಾರ್ಷಿಕ ಲಕ್ಷಾಂತರ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.
ಕಾಫಿ ಒಣಗಿಸುವ ಯಂತ್ರ..!
ಪ್ರಮುಖ ಬೆಳೆಯಾದ ಕಾಫಿಯನ್ನು ಆಧುನಿಕ ಶೈಲಿಯಲ್ಲಿ ಒಣಗಿಸಲು ಇವರಲ್ಲಿ ಕಾಫಿ ಒಣಗಿಸುವ ಯಂತ್ರ ಕೆಲಸ ನಿರ್ವಹಣೆ ಮಾಡುತ್ತಿದೆ. ಕಾಫಿ ಕೊಯ್ಲು ಸಂದರ್ಭ ದಿಢೀರನೆ ಮಳೆ ಸುರಿದರೆ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಸಾಧ್ಯವಿಲ್ಲದೆ ಇರುವುದನ್ನು ಮನಗಂಡ ಇವರು ಇಂತಹ ಆಧುನಿಕ ಶೈಲಿಯ ಯಂತ್ರವನ್ನು ಅಳವಡಿಸಿಕೊಂಡಿದ್ದಾರೆ.
- ಹೆಚ್.ಕೆ. ಜಗದೀಶ್