ಸೋಮವಾರಪೇಟೆ, ಜ. ೩೦: ಕಳೆದ ೨೦೧೩ರಲ್ಲಿ ಭೂಮಿಪೂಜೆ ನೆರವೇರಿ ನಂತರದ ದಿನಗಳಲ್ಲಿ ಹಲವಷ್ಟು ಅಡೆತಡೆಗಳನ್ನು ಕಂಡ ಸೋಮವಾರಪೇಟೆ ಜೂನಿಯರ್ ಕಾಲೇಜು ಮೈದಾನದ ಸಿಂಥೆಟಿಕ್ ಹಾಕಿ ಟರ್ಫ್ ಕಾಮಗಾರಿ, ಆಮೆಗತಿಯನ್ನೂ ನಾಚಿಸುತ್ತಿದೆ!

ಭೂಮಿಪೂಜೆ ನೆರವೇರಿ ಬರೋಬ್ಬರಿ ೯ ವರ್ಷಗಳಾದರೂ ಇಂದಿಗೂ ಟರ್ಫ್ ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಈ ನಡುವೆ ಕಾಮಗಾರಿಯನ್ನು ಟೆಂಡರ್ ಪಡೆದಿರುವ ಕಂಪೆನಿಯ ಇಂಜಿನಿಯರ್, ಗುತ್ತಿಗೆದಾರರು ಕಳೆದ ೪ ತಿಂಗಳಿನಿAದ ನಾಪತ್ತೆಯಾಗಿದ್ದಾರೆ.

ಭೂಮಿಪೂಜೆ ನೆರವೇರಿ ೯ ವರ್ಷಗಳು ಕಳೆದಿದ್ದರೂ, ಕಳೆದ ೨ ವರ್ಷಗಳ ಹಿಂದಷ್ಟೇ ಕಾಮಗಾರಿಗೆ ಮರುಜೀವ ನೀಡಲಾಗಿದೆ. ಗ್ರೇಟ್ ಸ್ಪೋರ್ಟ್ಸ್ ಇನ್‌ಫ್ರಾ ಪ್ರೆöÊವೇಟ್ ಲಿಮಿಟೆಡ್

(ಮೊದಲ ಪುಟದಿಂದ) ಸಂಸ್ಥೆಯು ಕಾಮಗಾರಿಗೆ ಮರುಜೀವ ನೀಡಿ ತರಾತುರಿಯಲ್ಲಿ ಟರ್ಫ್ ಅಳವಡಿಸಿದ್ದು, ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ರೂ. ೩ ಕೋಟಿಯಷ್ಟು ಹಣ ಡ್ರಾ ಮಾಡಿಕೊಂಡಿದೆ ಎಂಬ ಆರೋಪ ಕ್ರೀಡಾಪ್ರೇಮಿಗಳಿಂದ ಕೇಳಿಬಂದಿದೆ.

ಇನ್ನೂ ನಿರ್ಮಾಣದ ಹಂತದಲ್ಲಿಯೇ ಇರುವ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಕಾಮಗಾರಿಗೆ ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಹಾಕಿ ಸಂಸ್ಥೆಯಿAದ ಗುಣಮಟ್ಟ ಖಾತ್ರಿ ಹಾಗೂ ಉತ್ತಮ ಗುಣಮಟ್ಟದ ಯೋಗ್ಯತಾ ಪತ್ರವನ್ನೂ ನೀಡಲಾಗಿದ್ದು, ಅಪೂರ್ಣ ಕಾಮಗಾರಿಗೆ ಯೋಗ್ಯತಾ ಪತ್ರ ನೀಡಿರುವುದರ ಹಿಂದೆ ಬಿಲ್ ಮಾಡಿಸಿಕೊಳ್ಳುವ ಹುನ್ನಾರ ಅಡಗಿತ್ತೇ? ಎಂಬ ಸಂಶಯ ಮೂಡುವಂತಾಗಿದೆ.

ದೇಶದ ಹಾಕಿ ಕ್ಷೇತ್ರಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಸೋಮವಾರಪೇಟೆಯಲ್ಲಿ ಸುಸಜ್ಜಿತ ಟರ್ಫ್ ಮೈದಾನ ನಿರ್ಮಾಣವಾಗಬೇಕೆಂಬ ಹಾಕಿ ಪ್ರೇಮಿಗಳ ಕನಸು ಸದ್ಯಕ್ಕೆ ನನಸಾಗುವಂತೆ ಕಾಣುತ್ತಿಲ್ಲ. ಅರ್ಧಂಬರ್ಧ ಕಾಮಗಾರಿ ನಡೆಸಿದ ಗುತ್ತಿಗೆದಾರರು ಕಳೆದ ೪ ತಿಂಗಳಿನಿAದ ನಾಪತ್ತೆಯಾಗಿದ್ದು, ಟೆಂಡರ್ ಪಡೆದ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು ಎಂಬ ಪ್ರಶ್ನೆ ಇದೀಗ ಮೂಡಿದೆ.

ಅಪೂರ್ಣ ಕಾಮಗಾರಿ: ಬಿಲ್ ಮಾಡಿಸುವ ಸಲುವಾಗಿ ಮೈದಾನಕ್ಕೆ ಟರ್ಫ್ ಮ್ಯಾಟ್ ಅಳವಡಿಸಿರುವುದನ್ನು ಬಿಟ್ಟರೆ ಇತರ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿಲ್ಲ. ವಾಟರ್ ಟ್ಯಾಂಕ್ ಮತ್ತು ಮೋಟಾರ್ ಕೊಠಡಿ, ಟರ್ಫ್ ಸುತ್ತಲೂ ಫೆನ್ಸಿಂಗ್, ವಾಕಿಂಗ್ ಪಾತ್, ಇಂಟರ್‌ಲಾಕ್, ಔಟ್‌ಲೆಟ್ ಕಾಮಗಾರಿಗಳು ಇಂದಿಗೂ ಅಪೂರ್ಣವಾಗಿವೆ.

ಇದರೊಂದಿಗೆ ವಿದ್ಯುತ್ ಮಾರ್ಗ, ಟ್ರಾನ್ಸ್ಫಾರ್ಮರ್ ಅಳವಡಿಕೆ, ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ, ಮೋಟಾರ್ ಅಳವಡಿಕೆ, ವಾಟರ್ ಟ್ಯಾಂಕ್‌ಗೆ ಪೈಪ್‌ಲೈನ್, ವಿದ್ಯುತ್ ಕಂಬಗಳ ಅಳವಡಿಕೆಯಾಗಿಲ್ಲ. ಟರ್ಫ್ ಮ್ಯಾಟ್‌ಗೆ ನೀರು ಸಿಂಪಡಿಸಲು ಸಣ್ಣ ಜೆಟ್‌ಗಳನ್ನು ಅಳವಡಿಸಿದ್ದು, ಇದು ಪ್ರಯೋಜನಕ್ಕೆ ಬರುತ್ತಿಲ್ಲ. ಮೈದಾನದ ಸುತ್ತಲೂ ಇರುವ ಚರಂಡಿಗೆ ಸ್ಲಾö್ಯಬ್ ಅಳವಡಿಕೆಯಾಗಿಲ್ಲ. ಗೋಲ್‌ಪೋಸ್ಟ್, ಕಾಮಗಾರಿಯ ವಿವರ ಇರುವ ಮಾಹಿತಿ ಫಲಕವನ್ನೂ ಅಳವಡಿಸಿಲ್ಲ.

ಶೇ.೪೦ರಷ್ಟು ಕಾಮಗಾರಿಗಳು ಇನ್ನೂ ಬಾಕಿ ಉಳಿದಿದ್ದರೂ ಎಫ್‌ಐಹೆಚ್‌ನಿಂದ ದೃಢೀಕರಣ ಪತ್ರ ನೀಡಿರುವುದು ಆಡಳಿತ ವರ್ಗದ ಪಾರದರ್ಶಕತೆಯನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.

೨೦೧೩ರಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕ್ರೀಡಾ ಸಚಿವರಾಗಿದ್ದ ಸಂದರ್ಭ ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರೂ. ೩.೪೦ ಕೋಟಿ ಅನುದಾನದಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು.

ಕಳೆದ ತಾ. ೧೪.೦೩.೨೦೧೩ರಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಂದಿನ ನಿರ್ದೇಶಕ ಬಲದೇವಕೃಷ್ಣ ಅವರ ಉಪಸ್ಥಿತಿಯಲ್ಲಿ ಟರ್ಫ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಉದ್ದೇಶಿತ ಕಾಮಗಾರಿಗೆ ಅನುದಾನ ಸಾಲದು ಎಂಬ ಅಭಿಪ್ರಾಯ ಕೇಳಿಬಂದ ಹಿನ್ನೆಲೆ, ಸ್ಥಳೀಯ ಹಾಕಿ ಪ್ರೇಮಿಗಳು ಶಾಸಕ ಅಪ್ಪಚ್ಚುರಂಜನ್ ಅವರ ಮೇಲೆ ನಿರಂತರ ಒತ್ತಡ ಹೇರಿದ ಪರಿಣಾಮ ಈ ಹಿಂದಿನ ಎಸ್ಟಿಮೇಟ್‌ಗಿಂತಲೂ ೭೫ ಲಕ್ಷ ಹೆಚ್ಚು ಅನುದಾನ ಒದಗಿಸಿ ಒಟ್ಟು ೪.೧೫ ಕೋಟಿ ವೆಚ್ಚದಲ್ಲಿ ಟರ್ಫ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಮೈದಾನದ ಮೇಲುಸ್ತುವಾರಿಗೆ ಶಾಸಕರ ಸಲಹೆಯಂತೆ ಸಮಿತಿ ರಚಿಸಲಾಗಿದ್ದು, ಸಮಿತಿಯ ಪ್ರಮುಖರು ಕಾಮಗಾರಿಯ ಬಗ್ಗೆ ಆಗಾಗ್ಗೆ ಗಮನ ಹರಿಸುತ್ತಿದ್ದರು. ಮೈದಾನಕ್ಕೆ ಡಾಂಬರು ಹಾಕುವ ಸಂದರ್ಭ ಕಳಪೆ ಕಂಡುಬAದ ಹಿನ್ನೆಲೆ ಸಮಿತಿಯ ಪದಾಧಿಕಾರಿಗಳೇ ತಡೆದು ಮರು ಡಾಂಬರೀಕರಣವನ್ನೂ ಮಾಡಿಸಿದ್ದರು. ಅದಾದ ನಂತರ ಸಿಂಥೆಟಿಕ್ ಮ್ಯಾಟ್ ಅಳವಡಿಸಲಾಯಿತು. ಇದೀಗ ನೀರಿನ ಟ್ಯಾಂಕ್, ಮೈದಾನದ ಸುತ್ತಲೂ ಫೆನ್ಸಿಂಗ್, ಇಂಟರ್‌ಲಾಕ್, ತಡೆಗೋಡೆ ನಿರ್ಮಾಣ, ವಿದ್ಯುತ್ ಸಂಪರ್ಕ, ಪೈಪ್‌ಲೈನ್ ಸೇರಿದಂತೆ ಇತರ ಕಾಮಗಾರಿ ಬಾಕಿ ಇರುವಂತೆಯೇ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ.

ತಕ್ಷಣ ಕ್ಷೇತ್ರದ ಶಾಸಕರು, ಸಂಬAಧಿಸಿದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರೂ. ೪.೧೫ ಕೋಟಿ ವೆಚ್ಚದ ಕಾಮಗಾರಿ ನೀರಿನಲ್ಲಿ ಹೋಮವಾಗುವುದನ್ನು ತಡೆಯಬೇಕಿದೆ. ಟೆಂಡರ್ ಪಡೆದ ಗುತ್ತಿಗೆದಾರ ಕಂಪೆನಿಯ ವಿರುದ್ಧವೂ ಕ್ರಮಕೈಗೊಳ್ಳಬೇಕಿದೆ ಎಂದು ಕ್ರೀಡಾಪ್ರೇಮಿಗಳು ಆಗ್ರಹಿಸಿದ್ದಾರೆ. -ವಿಜಯ್ ಹಾನಗಲ್