ಗೋಣಿಕೊಪ್ಪಲು, ಜ. ೨೭: ಕಳೆದ ೧೫ ದಿನಗಳ ಹಿಂದೆ ಆರಂಭ ಗೊಂಡ ಹುಲಿ ಕಾರ್ಯಾಚರಣೆ ಇದೀಗ ಮುಕ್ತಾಯಗೊಂಡಿದೆ. ಹುಲಿಯು ಈ ಭಾಗದಿಂದ ತೆರಳಿರು ವುದನ್ನು ಖಾತರಿ ಪಡಿಸಿಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.
ದ.ಕೊಡಗಿನ ತೂಚಮಕೇರಿ ಶಾಲಾ ಆವರಣದಲ್ಲಿ ಹುಲಿ ಕಾರ್ಯಾಚರಣೆ ತಂಡ ಕೆಲಸ ನಿರ್ವಹಿಸುತ್ತಿತ್ತು. ಪ್ರತಿನಿತ್ಯ ೫೦ಕ್ಕೂ ಅಧಿಕ ಸಿಬ್ಬಂದಿಗಳು ಹಗಲು, ರಾತ್ರಿ ಹುಲಿಯ ಸೆರೆಗೆ ಪ್ರಯತ್ನ ನಡೆಸಿದ್ದರು.
ಪ್ರತಿನಿತ್ಯ ಡಿಎಫ್‌ಓ ಚಕ್ರಪಾಣಿ, ಎಸಿಎಫ್ ಉತ್ತಪ್ಪ, ಗೋಪಾಲ್ ಹಾಗೂ ಆರ್.ಎಫ್.ಓ. ರಾಜಪ್ಪ, ಅಶೋಕ್ ಹುನಗುಂದ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆ ನಡೆಸಿ ಕಾರ್ಯಾಚರಣೆ ಬಗ್ಗೆ ವಿಚಾರ ವಿನಿಮಯ ಮಾಡುತ್ತಿದ್ದರು.
ಈ ಭಾಗದಲ್ಲಿ ಕಂಡುಬAದ ಹುಲಿಯು ಜಾನುವಾರುಗಳ ಮೇಲೆ ದಾಳಿ ನಡೆಸಿ, ನಂತರ ದೇವಮಚ್ಚಿ ಅರಣ್ಯ ಪ್ರದೇಶದತ್ತ ಹೆಜ್ಜೆ ಹಾಕಿದ ನಂತರ ಕಾಡು ಹಂದಿಗಳ ಬೇಟೆಯತ್ತ ಹೆಚ್ಚಿನ ಗಮನ ಹರಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಲ್ಲಲ್ಲಿ ಕಾಡಂದಿಗಳ ಕಳೆಬರಹಗಳು ಇಲಾಖೆಯ ಸಿಬ್ಬಂದಿಗಳಿಗೆ ಗೋಚರಿಸಿವೆ.
ಈ ಭಾಗದಲ್ಲಿ ಹೆಚ್ಚಾಗಿ ಕಾಡು ಹಂದಿಗಳು ಕಾಫಿ ತೋಟ ಹಾಗೂ ಅರಣ್ಯ ಪ್ರದೇಶದಲ್ಲಿ ಕಂಡು ಬರುತ್ತಿದ್ದು ಇದನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತ, ಹುಲಿಯು ತನ್ನ ಸ್ಥಳವನ್ನು ಬದಲಾವಣೆ ಮಾಡುತ್ತಾ ಸಾಗುತ್ತಿದೆ.
ಇದೀಗ ಅರಣ್ಯ ಇಲಾಖೆಯ ಕ್ಯಾಮರಾದಲ್ಲಿ ಸೆರೆಸಿಕ್ಕ ಹುಲಿಯ ಚಿತ್ರ ಮಾರ್ಗೊಲ್ಲಿ ಕಾಫಿ ತೋಟದಲ್ಲಿ ಸಿಕ್ಕಿರುವ ಚಿತ್ರ ಹೋಲಿಕೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ದ. ಕೊಡಗಿನ ಬೆಳ್ಳೂರು, ತೂಚಮಕೇರಿ ಹಾಗೂ ಕೋಣಗೇರಿ ಭಾಗದ ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೂಚಮಕೇರಿ ಬಳಿ ಹುಲಿ ಕಾರ್ಯಾಚರಣೆ ಕಾರ್ಯ ಆರಂಭಿಸಿದ್ದರು.
ಇದರಿAದಾಗಿ ಹುಲಿಯು ತನ್ನ ಸ್ಥಳ ವನ್ನು ಬದಲಾವಣೆ ಮಾಡಿ ಗೋಣಿಕೊಪ್ಪ ನಗರದತ್ತ ತೆರಳಿ ಎರಡು ಗೂಳಿಗಳ ಮೇಲೆ ದಾಳಿ ನಡೆಸಿ ಗಂಭೀರ ಸ್ವರೂಪದ ಗಾಯಗೊಳಿಸಿ ನಂತರ ದೇವಮಚ್ಚಿ ಅರಣ್ಯ ಪ್ರದೇಶದತ್ತ ತೆರಳಿತ್ತು.
ಇದೀಗ ಹುಲಿಗೆ ಹಂದಿಗಳು ಸುಲಭವಾಗಿ ಸಿಗುತ್ತಿರುವುದರಿಂದ ಇದನ್ನೇ ತನ್ನ ಆಹಾರವಾಗಿ ಹೊಟ್ಟೆ ತುಂಬಿಸಿಕೊAಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಈ ಭಾಗದಲ್ಲಿ ಯಾವುದೇ ಜಾನುವಾರು ಮೇಲೆ ಈ ಹುಲಿ ದಾಳಿ ನಡೆಸಿದ ಬಗ್ಗೆ ವರದಿಯಾಗಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಹುಲಿಯ ಹೆಜ್ಜೆ ಅರಸಿ ಪ್ರತಿದಿನ ಯಾವ ಪ್ರದೇಶ ದತ್ತ ಹುಲಿಯು ತೆರಳುತ್ತಿದೆ ಎಂದು ಸೂಕ್ಷö್ಮವಾಗಿ ಗಮನಿಸುತ್ತಿದ್ದಾರೆ.
ಕಾಫಿ ತೋಟದಲ್ಲಿ ಹುಲಿಯು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಹಜವಾಗಿಯೇ ಈ ಭಾಗದ ತೋಟ ಕಾರ್ಮಿಕರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.
ಪ್ರತಿದಿನ ಕಾಫಿ ತೋಟಕ್ಕೆ ಆಗಮಿಸುವ ಕಾರ್ಮಿಕರು ಭಯ ದಿಂದಲೇ ಕಾಫಿಯನ್ನು ಕೊಯ್ಲು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲವು ದಿನಗಳ ಕಾಲ ಹುಲಿಯ ಹಾವಳಿಯಿಂದ ಬಸವಳಿದಿದ್ದ ದಕ್ಷಿಣ ಕೊಡಗಿನ ರೈತರು ಇದೀಗ ಕೊಂಚ ನೆಮ್ಮದಿ ಕಂಡಿದ್ದಾರೆ.
-ಹೆಚ್.ಕೆ. ಜಗದೀಶ್