ಮಡಿಕೇರಿ, ಜ. ೨೭: ಕಾಫಿ ಮಾರಾಟ ಮಾಡಲೆಂದು ತೆರಳಿದ್ದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಂಡನಕೊಲ್ಲಿಯ ನಿವಾಸಿ ಸೋಮಣ್ಣ (೪೮) ಎಂಬವರು ತಾ.೨೧ರಂದು ಕಾಫಿ ಮಾರಲೆಂದು ಮನೆಯಿಂದ ಮಕ್ಕಂದೂರಿಗೆ ತೆರಳಿದ್ದಾರೆ. ರಾತ್ರಿಯಾದರೂ ಇವರು ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಪತ್ನಿ ಅಕ್ಕಪಕ್ಕದವರಲ್ಲಿ ವಿಚಾರಿಸಿದ್ದಾರೆ. ಈ ಸಂದರ್ಭ ಪಕ್ಕದ ಮನೆಯ ನಿವಾಸಿ ಪುಷ್ಪ ಎಂಬವರು ಇವರನ್ನು ಸಂಜೆ ೬ ಗಂಟೆ ಸಮಯದಲ್ಲಿ ಟೋಲ್ಗೇಟ್ ಬಳಿ ನಿಂತಿದ್ದನ್ನು ಗಮನಿಸಿರುವುದಾಗಿ ತಿಳಿಸಿದ್ದಾರೆ.
ಆದರೆ, ಸೋಮಣ್ಣ ಈ ತನಕವೂ ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಅವರ ಪತ್ನಿ ಸುಮಿತ್ರ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ವ್ಯಕ್ತಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ನಗರ ಠಾಣೆ ೨೨೯೩೩೩ ಅಥವಾ ಮೊ. ೯೪೮೦೮೦೪೯೪೫ಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.