* ವೀರಾಜಪೇಟೆ, ಜ. ೨೬: ಕೆದಮುಳ್ಳೂರು ಗ್ರಾಮದ ಬಾರಿಕಾಡು ನಿರಾಶ್ರಿತ ಕುಟುಂಬಗಳಿಗೆ ಸೇವಾಭಾರತಿ ವತಿಯಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಇಲ್ಲಿ ಒಟ್ಟು ೫೦ ಕುಟುಂಬದ ಸುಮಾರು ೨೦೦ಕ್ಕೂ ಹೆಚ್ಚು ಮಂದಿ ವಾಸ ಮಾಡುತ್ತಿದ್ದು, ಹೆಚ್ಚು ಕೂಲಿ ಕಾರ್ಮಿಕರೇ ಆಗಿದ್ದು ಇವರ ಆರೋಗ್ಯ ರಕ್ಷಣೆ ಮಾಡುವ ಉದ್ದೇಶದಿಂದ ಸೇವಾ ಭಾರತೀಯ ಕೊಡಗು ಜಿಲ್ಲೆ ಅಧ್ಯಕ್ಷ ಟಿ.ಸಿ. ಚಂದ್ರನ್ ಅವರ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ಸೇವಾ ಭಾರತೀಯ ನೂತನ ಆ್ಯಂಬ್ಯುಲೆನ್ಸ್ ವಾಹನ ಬಂದ ನಂತರ ಮೊದಲ ಆರೋಗ್ಯ ಶಿಬಿರ ಬಾರಿಕಾಡುವಿನಲ್ಲಿ ನಡೆಸಲಾಯಿತು. ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ. ರಮ್ಯಶ್ರೀ, ಡಾ. ಲಿಖಿತ್ ಕುಮಾರ್, ಸಿಬ್ಬಂದಿಗಳಾದ ಚಂದ್ರು, ರಾಜು, ನಿತಿನ್, ಆಶಾ ಕಾರ್ಯಕಾರ್ತೆಯರಾದ ಹೆಚ್.ಯು. ಬೋಜಮ್ಮ, ಕೆ.ಆರ್. ವಸಂತಿ, ಸೇವಾ ಭಾರತಿ ಸದಸ್ಯ ಟಿ.ಕೆ. ಪದ್ಮನಾಭ. ಜೀವನ್ ಜ್ಯೋತಿ ಟ್ರಸ್ಟ್ನ ಅಧ್ಯಕ್ಷ ಅಜಯ್ ರಾವ್, ಕಾರ್ಯದರ್ಶಿ ಶಶಿಕುಮಾರ್ ಮತ್ತು ಬಾರಿಕಾಡಿನ ಮುಖಂಡ ಮುತ್ತಾ ಹಾಜರಿದ್ದರು. ಸ್ಥಳೀಯ ನಿವಾಸಿಗಳು ಆರೋಗ್ಯ ಶಿಬಿರಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಬಿರದ ಸದುಪಯೋಗಪಡಿಸಿಕೊಂಡರು.