ವೀರಾಜಪೇಟೆ, ಜ. ೨೬: ವೀರಾಜಪೇಟೆ ಬಾಳುಗೋಡು ಗ್ರಾಮದ ರೈತ ಬಿ.ಎನ್. ಜಯಂತ್ ಅವರ ಮೂರು ಹಸುಗಳನ್ನು ಹುಲಿ ಕೊಂದು ಹಾಕಿದ್ದು ಸೂಕ್ತ ಪರಿಹಾರ ನೀಡುವಂತೆ ಶಾಸಕ ಬೋಪಯ್ಯ ಹಾಗೂ ಅರಣ್ಯ ಇಲಾಖೆಗೆ ಅವರು ದೂರು ನೀಡಿದ್ದಾರೆ. ದಕ್ಷಿಣ ಕೊಡಗಿನ ಹುದಿಕೇರಿ ಶ್ರೀಮಂಗಲ ಕಾನೂರು ಭಾಗದಲ್ಲಿ ಉಪಟಳ ನೀಡುತ್ತಿದ್ದ ಹುಲಿ ವೀರಾಜಪೇಟೆ ಭಾಗದಲ್ಲೂ ಸಂಚರಿಸುತ್ತಿದೆ. ಬ್ರಹ್ಮಗಿರಿ ವನ್ಯ ಜೀವಿ ಸಂರಕ್ಷಣಾ ಅರಣ್ಯ ಪ್ರದೇಶ, ಗ್ರಾಮಕ್ಕೆ ಹೊಂದಿಕೊAಡಿದ್ದು ಅರಣ್ಯದಿಂದಲೆ ಬಂದಿರಬಹುದು ಎಂದು ಶಂಕಿಸಲಾಗಿದೆ.

ರೈತ ಜಯಂತ್ ಹೇಳುವ ಪ್ರಕಾರ ತಾ. ೧೬ರ ಸಂಜೆ ಮಾಕುಟ್ಟ ಅಂತರಾಜ್ಯ ಹೆದ್ದಾರಿಯಲ್ಲಿ ಬರುವ ಚೆನ್ನಿರ ಗದ್ದೆಯಲ್ಲಿ ಎಂದಿನAತೆ ದನಗಳನ್ನು ಮೇಯಲು ಬಿಟ್ಟಿದ್ದು ಸಂಜೆ ಐದರ ಸುಮಾರಿಗೆ ತಮ್ಮ ರಾಸೊಂದು ಗಾಬರಿಯಿಂದ ಕೊಟ್ಟಿಗೆಗೆ ಓಡಿ ಬಂದಿತ್ತು. ಉಳಿದ ಒಂದು ಗಬ್ಬದ ಹಸು, ಎರಡು ಉಳುವ ರಾಸು ಮಾÀತ್ರ ಕೊಟ್ಟಿಗೆಗೆ ಬಂದಿರಲಿಲ್ಲ. ಮಾರನೇಯ ದಿನ ಬೆಳಿಗ್ಗೆ ಹುಡುಕಾಡಿದಾಗ ರಾಸುಗಳ ಕಳೆಬರ ಹಾಗೂ ಅವಶೇಷಗಳು ಸಿಕ್ಕಿದವು. ವೀರಾಜಪೇಟೆ ವಲಯ ಅರಣ್ಯ ಇಲಾಖೆಗೆ ದೂರು ನೀಡಿದಾಗ ಅವರು ಸ್ಥಳಕ್ಕೆ ಬಂದು ಮಹಜರು ನಡೆಸಿ ಮೂರು ರಾಸಿಗೆ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ ಇಂದಿಗೂ ಪರಿಹಾರ ದೊರೆತ್ತಿಲ್ಲ ಎಂದು ದೂರಿದರು. ಅನಾರೋಗ್ಯದ ನಿಮಿತ ೧೫ ದಿನಗಳ ಕಾಲ ಕಚೇರಿಗೆ ಆಗಮಿಸಲು ಸಾಧ್ಯವಾಗಿಲ್ಲ. ಹುಲಿ ಧಾಳಿ ವಿಚಾರದಲ್ಲಿ ವಲಯ ಅರಣ್ಯಾಧಿಕಾರಿ ಜೊತೆ ಮಾತನಾಡಿ ಸೂಕ್ತ ಪರಿಹಾರ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಎಸಿಎಫ್ ರೋಶಿನಿ ತಿಳಿಸಿದ್ದಾರೆ.