ಕೆ.ಎಸ್.ಮೂರ್ತಿ ಕಣಿವೆ, ಜ. ೨೪ : ಹಾರಂಗಿ ಹಾಗೂ ಕಾವೇರಿ ನದಿಗಳು ಸಂಗಮಗೊಳ್ಳುವ ಕೂಡಿಗೆಯ ಕೃಷಿ ಫಾರಂ ಒಳಗಿನ ೧೯ ಎಕರೆ ವಿಶಾಲ ವ್ಯಾಪ್ತಿಯಲ್ಲಿ ಕಳೆದ ೪೦ ವರ್ಷಗಳ ಹಿಂದೆ ಸ್ಥಾಪನೆಗೊಂಡ ಸರ್ಕಾರಿ ಕ್ರೀಡಾಶಾಲೆ ರಾಜ್ಯ ಸರ್ಕಾರದ ಅವಕೃಪೆಯಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿದೆ.

ಹದಿಹರೆಯದ ಮಕ್ಕಳಲ್ಲಿ ಕ್ರೀಡಾಸ್ಫೂರ್ತಿ ತುಂಬುವ ಮೂಲಕ ಕ್ರೀಡಾ ಜಿಲ್ಲೆ ಕೊಡಗಿಗೆ ಕೀರ್ತಿ ತರಬೇಕೆಂಬ ಕನಸು ಹೊತ್ತು ಕುಶಾಲನಗರದವರೇ ಆದ ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರು ನಿರ್ಮಿಸಿದ ಈ ಸರ್ಕಾರಿ ಕ್ರೀಡಾಶಾಲೆ ಸರಿಯಾದ ನಿರ್ವಹಣೆ ಅಥವಾ ಮೇಲುಸ್ತುವಾರಿ ಇಲ್ಲದೇ ಕಮರುತ್ತಿದೆ.

ಅಂದರೆ ಈ ಕ್ರೀಡಾ ಶಾಲೆಯಲ್ಲಿ ಸಾಧನೆ ತೋರುತ್ತಿರುವ ಗ್ರಾಮೀಣ ಪ್ರದೇಶಗಳ ಬಡ ಪ್ರತಿಭಾನ್ವಿತ ಸಾಧಕ ಮಕ್ಕಳಿಗೆ ಭವಿಷ್ಯವೇ ಇಲ್ಲವೆಂಬAತಹ ವಾತಾವರಣ ನಿರ್ಮಾಣವಾಗುತ್ತಿದೆ.

ಅಂದರೆ ಶಾಲೆಯ ಹತ್ತನೇ ತರಗತಿ ಹೆಚ್.ವಿ. ಚಿಂತನ್ ಎಂಬಾತ ಇತ್ತೀಚೆಗಷ್ಟೇ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ನಡೆದ ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆ ತೋರುವ ಮೂಲಕ ಚಿನ್ನದ ಪದಕದೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾನೆ. ರಾಷ್ಟçಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ ನಾಗಾಲ್ಯಾಂಡ್ ರಾಜ್ಯದ ಕೊಹಿಮಾದಲ್ಲಿ ಜ- ೧೫ ರಂದು ಇತ್ತಾದರೂ ಕೋವಿಡ್ ಕಾರಣಕ್ಕೆ ಮುಂದೂಡಲ್ಪಟ್ಟಿದೆ. ಆದರೆ ರಾಷ್ಟçಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಶಾಲೆಯಿಂದ ನಾಗಾಲ್ಯಾಂಡ್ ರಾಜ್ಯಕ್ಕೆ ತೆರಳಬೇಕಿದ್ದ ಕ್ರೀಡಾಪಟು ಸಾಧಕ ವಿದ್ಯಾರ್ಥಿ ಚಿಂತನ್‌ಗೆ ಶಾಲೆಯಿಂದ ಆಗಲೀ, ಯುವ ಸಬಲೀಕರಣ ಸೇವಾ ಇಲಾಖೆಯಿಂದಾಗಲೀ ಪೂರಕವಾದ ಪ್ರೋತ್ಸಾಹ ದೊರಕದೇ ಇದ್ದುದು ಸಾಧಕ ವಿದ್ಯಾರ್ಥಿ ಹಾಗೂ ಪೋಷಕರಿಗೆ ಅತೀವ ನೋವು ಉಂಟುಮಾಡಿದೆ. ಅಂದರೆ, ರಾಷ್ಟçಮಟ್ಟದ ಕ್ರೀಡೆಯಲ್ಲಿ ಪಾಲ್ಗೊಳ್ಳಲು ನಾಗಾಲ್ಯಾಂಡ್ ರಾಜ್ಯಕ್ಕೆ ತೆರಳಬೇಕಿದ್ದ ಕ್ರೀಡಾಪಟು ಚಿಂತನ್ ಅವರ ಖರ್ಚು - ವೆಚ್ಚ ಭರಿಸಲು ಆತನ ಹೆತ್ತ ತಾಯಿ ಕೊರಳಿನ ಮಾಂಗಲ್ಯ ಸರವನ್ನು ಅಡವಿಟ್ಟು ಸಾಲ ಪಡೆದು ಕಳುಹಿಸುವ

(ಮೊದಲ ಪುಟದಿಂದ) ಸ್ಥಿತಿ ಬಂದೊದಗಿರುವುದು ಕ್ರೀಡಾ ಇಲಾಖೆಯ ಅವ್ಯವಸ್ಥೆ ಅಥವಾ ಬೇಜವಾಬ್ದಾರಿತನಕ್ಕೆ ತಾಜಾ ಉದಾಹರಣೆಯಂತಿದೆ. ಶಾಲೆಯ ಮುಖ್ಯ ಶಿಕ್ಷಕ ದೇವಕುಮಾರ್ ಅವರಲ್ಲಿ ಈ ಬಗ್ಗೆ ಕೇಳಿದಾಗ ನಮ್ಮಲ್ಲಿ ಯಾವುದೇ ಅನುದಾನವಿಲ್ಲ ಎಂದು ಕೈಚೆಲ್ಲಿ ಕುಳಿತಿದ್ದರು.

ಹಾಗೆಯೇ ಜಿಲ್ಲಾ ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಕೂಡ ಈ ಬಗ್ಗೆ ಮೌನ ವಹಿಸಿದ್ದರು. ಕೊನೆಗೆ ಪಂದ್ಯಾವಳಿ ಕೋವಿಡ್ ಕಾರಣಕ್ಕೆ ಮುಂದೂಡಲ್ಪಟ್ಟಿದೆ.

ಅAದರೆ, ಸಾಧಕ ಕ್ರೀಡಾ ಪ್ರತಿಭೆಗಳಿಗೆ ಆರ್ಥಿಕವಾಗಿ ಸಹಾಯ ಮಾಡದ ಕ್ರೀಡಾ ಇಲಾಖೆ ಇಷ್ಟೊಂದು ಬಡತನದಲ್ಲಿದೆಯೇ ಎಂಬುದು ಕ್ರೀಡಾ ಪ್ರೇಮಿಗಳ ಪ್ರಶ್ನೆಯಾಗಿದೆ.

ಸೋರುತ್ತಿರುವ ಒಳಾಂಗಣ ಕ್ರೀಡಾಂಗಣ

ಕೊಡಗು ಕ್ರೀಡಾ ಇಲಾಖೆ ಅಥವಾ ಜಿಲ್ಲಾಡಳಿತ ಕೂಡಿಗೆಯ ಕ್ರೀಡಾಶಾಲೆಯನ್ನು ಕಡೆಗಣಿಸಿರುವುದಕ್ಕೆ ಶಾಲೆಯ ಪ್ರಾಂಗಣದಲ್ಲಿರುವ ಓಳಾಂಗಣ ಕ್ರೀಡಾಂಗಣವೇ ಸಾಕ್ಷಿಯಾಗಿದೆ.

ಅಂದರೆ, ೧೫ ವರ್ಷಗಳ ಹಿಂದೆ, ಕ್ರೀಡಾ ವಿದ್ಯಾರ್ಥಿಗಳ ಸಮಗ್ರ ಕ್ರೀಡಾ ಸಾಧನೆಯ ಹಿತದೃಷ್ಟಿಯಿಂದ ನಿರ್ಮಿಸಿದ್ದ ಈ ಒಳಾಂಗಣ ಕ್ರೀಡಾಂಗಣ ವಿದ್ಯಾರ್ಥಿಗಳಿಗೆ ಸರಿಯಾಗಿ ಬಳಕೆಯಾಗಲೇ ಇಲ್ಲ ಎನ್ನುವುದು ವಿಪರ್ಯಾಸವೇ ಸರಿ. ಏಕೆಂದರೆ ಓಳಾಂಗಣ ಕ್ರೀಡಾಂಗಣದ ಮೇಲ್ಛಾವಣಿಯ ಮೇಲೆ ಹೊದಿಕೆಯಾಗಿದ್ದ ಎಸಿ ಶೀಟುಗಳು ಗಾಳಿಗೆ ಹಾರಿಹೋಗಿದ್ದು ಮಳೆಯ ನೀರು ಗೋಡೆಗಳ ಮೇಲೆಲ್ಲಾ ಜಿನುಗಿ ಇಡೀ ಆವರಣ ಹಾಳಾಗುತ್ತಿದ್ದರೂ ಕೂಡ ಇಲಾಖೆ ಇದರ ದುರಸ್ತಿಗೆ ಮುಂದಾಗಿಯೇ ಇಲ್ಲ.

ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಹಾಗೂ ಕ್ರೀಡಾ ಶಾಲೆಯ ಮುಖ್ಯ ಶಿಕ್ಷಕರ ನಿರ್ಲಕ್ಷö್ಯದಿಂದಾಗಿ ಐದು ಕೋಟಿ ರೂಪಾಯಿಗಳನ್ನು ವ್ಯಯಿಸಿ ನಿರ್ಮಿಸಿದ್ದ ಒಳಾಂಗಣ ಕ್ರೀಡಾಂಗಣ ಈಗ ನಿರ್ವಹಣೆಯಿಲ್ಲದೇ ಹಾಳಾಗುತ್ತಿದೆ.

ಈ ಒಳಾಂಗಣದ ಆವರಣದಲ್ಲಿ ಜಿಮ್ನಾಸ್ಟಿಕ್ ತರಬೇತಿಗೆಂದು ಯೂರೋಪ್‌ನಿಂದ ಖರೀದಿಸಿ ತಂದಿರಿಸಿರುವ ಒಂದೂವರೆ ಕೋಟಿ ವೆಚ್ಚದ ಜಿಮ್ನಾಸ್ಟಿಕ್ ಪರಿಕರಗಳು ಹಾಳಾಗುತ್ತಿವೆ. ವಿದ್ಯುತ್ ಸರಬರಾಜು ಕೂಡ ಸ್ಥಗಿತಗೊಂಡಿದೆ.

ಇದುವರೆಗೂ ಈಜುಕೊಳವೇ ಇಲ್ಲ

ಕ್ರೀಡಾ ಕಲಿಗಳಾದ ವಿದ್ಯಾರ್ಥಿಗಳ ಸಮಗ್ರ ಕ್ರೀಡಾ ಚಟುವಟಿಕೆಗಳ ಅಭ್ಯುದಯದ ದೃಷ್ಟಿಯಿಂದ ಶಾಲೆಯ ಆವರಣದಲ್ಲಿ ಅತೀ ಅಗತ್ಯವಾಗಿ ನಿರ್ಮಾಣಗೊಳ್ಳಬೇಕಿದ್ದ ಈಜುಕೊಳ ಇದುವರೆಗೂ ಆಗಿಲ್ಲ.

ಪದವಿ ತರಗತಿಗಳೂ ಇಲ್ಲ : ರಾಜ್ಯದ ಮೊದಲ ಕ್ರೀಡಾಶಾಲೆ ಬೆಂಗಳೂರಿನ ಕ್ರೀಡಾಶಾಲೆಯಲ್ಲಿ ಇರುವಂತೆ ರಾಜ್ಯದ ಎರಡನೇ ಶಾಲೆ ಖ್ಯಾತಿಯ ಕೊಡಗಿನ ಕೂಡಿಗೆಯ ಇಲ್ಲಿ ಪದವಿ ತರಗತಿಗಳನ್ನು ಕ್ರೀಡಾ ಸಚಿವಾಲಯ ಈ ಹಿಂದೆಯೇ ತೆರೆಯಬೇಕಿತ್ತು. ಆದರೆ ಎಲ್ಲರ ಬೇಜವಾಬ್ದಾರಿತನದಿಂದಾಗಿ ಈ ಶಾಲೆ ಕ್ರೀಡಾ ಕಲಿಗಳ ಪಾಲಿಗೆ ಶಾಪವಾಗಿಯೇ ಇದೆ.

ವಿದ್ಯಾರ್ಥಿಗಳಿಗೆ ತಕ್ಕ ಸೌಲಭ್ಯಗಳಿಲ್ಲ

ಆರಂಭದಲ್ಲಿ ಕೇವಲ ಎಂಟನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಕ್ರೀಡಾ ಸಾಧಕ ಮಕ್ಕಳಿದ್ದ ಈ ಕ್ರೀಡಾ ಶಾಲೆಯಲ್ಲಿ ಬಳಿಕ ಕ್ರೀಡೆಯಲ್ಲಿ ಸಾಧನೆ ತೋರುವ ಪಿಯು ವ್ಯಾಸಾಂಗ ಮಾಡುವ ಮಕ್ಕಳು ಕೂಡ ಇರುವುದರಿಂದ ಪೂರಕವಾದ ವಸತಿ ಗೃಹಗಳು ಇಲ್ಲ. ಜೊತೆಗೆ ಕಲಿಕೆಯ ಕೊಠಡಿಗಳೂ ಇಲ್ಲ. ಕ್ರೀಡಾ ಪರಿಕರಗಳ ಕೊರತೆಯೂ ಬಾಧಿಸುತ್ತಿದೆ.

ಪಿಯು ಹಂತದಲ್ಲಿನ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಸಾಧನೆ ತೋರುತ್ತಾ ಪದವಿ ತರಗತಿಗಳಿಗೆ ತೆರಳುವವರಿಗೆ ಇದೇ ಶಾಲಾ ಆವರಣದಲ್ಲಿ ಪದವಿ ತರಗತಿ ಹಾಗೂ ವಸತಿ ವ್ಯವಸ್ಥೆ ಕಲ್ಪಿಸುವುದು ಅತೀ ಅವಶ್ಯವಿದೆ.

ದೂರದ ಪ್ರದೇಶಗಳ ಗ್ರಾಮೀಣ ಪ್ರದೇಶಗಳಿಂದ ದಾಖಲಾಗಿರುವ ಮಕ್ಕಳು ಪಿಯು ನಂತರದ ಶಿಕ್ಷಣ ಪಡೆಯಲು ಬೇರೆಡೆಗೆ ತೆರಳುವ ಅನಿವಾರ್ಯತೆಯಿಂದಾಗಿ ಬೇರೆ ಕಾಲೇಜುಗಳಿಗೆ ಸೇರಿದಾಗ ಅಲ್ಲಿನ ವಾತಾವರಣ ಕ್ರೀಡಾ ಪಟುಗಳ ಉತ್ಸಾಹವನ್ನು ಕುಗ್ಗಿಸುವ ಸಾಧ್ಯತೆಯೂ ಇರುವುದರಿಂದ ಇದೇ ಕ್ರೀಡಾ ಶಾಲೆಯ ಆವರಣದಲ್ಲಿ ಪಿಯು ಹಾಗೂ ಪದವಿ ತರಗತಿ ಆರಂಭಿಸುವತ್ತ ಆಡಳಿತಾರೂಢರು ಹಾಗೂ ಇಲಾಖೆಯ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದೆ.

ವೇದನೆಗಳ ನಡುವೆಯೂ ಕ್ರೀಡಾ ಪಟುಗಳ ಸಾಧನೆ

ಈ ಕ್ರೀಡಾ ಶಾಲೆಯಲ್ಲಿ ಈ ಹಿಂದೆ ತರಬೇತಿ ಪಡೆದಿರುವ ವಿದ್ಯಾರ್ಥಿಗಳಾದ ಪ್ರಮೀಳಾ ಅಯ್ಯಪ್ಪ, ರವಿನಾಯ್ಕರ್ ಹಾಗೂ ಶೋಭಾ ಜಾವುರ್ ಹಾಕಿ, ಅಥ್ಲೆಟಿಕ್ ಹಾಗೂ ಜಿಮ್ನಾಸ್ಟಿಕ್‌ಗಳಲ್ಲಿ ಒಲಿಂಪಿಯನ್ ಗಳಾಗಿ ಹೆಸರು ಮಾಡಿ ಇದೀಗ ಉನ್ನತ ಹುದ್ದೆಗಳಲ್ಲಿದ್ದಾರೆ.

ಈ ಶಾಲೆಯ ೨೦ ಮಂದಿ ಕ್ರೀಡಾ ತರಬೇತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕೊಡಮಾಡುವ ಏಕಲವ್ಯ ಪ್ರಶಸ್ತಿಗಳು ಬಂದಿವೆ.

ಶಾಲೆಯ ವಿದ್ಯಾರ್ಥಿ ಸುಳ್ಯದ ರೆಬೆಕಾ ಜೋಸ್ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದ್ದಾರೆ.

ಪಿರಿಯಾಪಟ್ಟಣದ ಬಡ ಕುಟುಂಬದ ಪಿ.ಎಸ್. ಉಮಾ ಎಂಬ ವಿದ್ಯಾರ್ಥಿನಿ ಶಾಟ್‌ಪುಟ್‌ನಲ್ಲಿ ರಾಜ್ಯಮಟ್ಟದ ೩೩ ವರ್ಷಗಳ ದಾಖಲೆಯನ್ನು ಮುರಿದು ರಾಷ್ಟçಮಟ್ಟದ ಸಾಧನೆ ಮಾಡಿ ಇದೀಗ ಭಾರತೀಯ ರೈಲ್ವೇಯಲ್ಲಿ ಉದ್ಯೋಗದಲ್ಲಿದ್ದಾರೆ.

ಇನ್ನೂ ಪ್ರಸಕ್ತ ಸಾಲಿನಲ್ಲಿ ಅಂದರೆ ೨೦೨೨ ರಲ್ಲಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಹೆಚ್.ವಿ. ಚಿಂತನ್ ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕಗಳಿಸಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಸಕ್ತ ಕ್ರೀಡಾ ಶಾಲೆಯ ಒಟ್ಟು ೧೭೦ ವಿದ್ಯಾರ್ಥಿಗಳ ಪೈಕಿ ೩೪ ವಿದ್ಯಾರ್ಥಿಗಳು ಪಿಯು ವ್ಯಾಸಾಂಗ ಮಾಡುತ್ತಿದ್ದಾರೆ.

ಉಳಿದ ೧೩೬ ವಿದ್ಯಾರ್ಥಿಗಳು ಎಂಟರಿAದ ಹತ್ತನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಾರೆ.

ಶಾಲೆಯಲ್ಲಿ ಕ್ರೀಡಾ ತರಬೇತಿ ಮಕ್ಕಳಿಗೆ ಜಿಮ್ನಾಸ್ಟಿಕ್, ಅಥ್ಲೆಟಿಕ್ ಹಾಗೂ ಹಾಕಿ ಕ್ರೀಡೆಗಳಿಗೆ ತರಬೇತಿ ನೀಡಲಾಗುತ್ತಿದೆ.

ಶಾಲೆಯ ಪ್ರಾಂಗಣದಲ್ಲಿ ರೂ. ೩.೫೦ ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿರುವ ಹಾಕಿ ಟರ್ಫ್ ಕ್ರೀಡಾಂಗಣ ಇನ್ನಷ್ಟೇ ಉದ್ಘಾಟನೆ ಆಗಬೇಕಿದೆ. ಹಾಗೂ ರೂ. ೪.೫೦ ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರಾಕ್ ಕ್ರೀಡಾಂಗಣವನ್ನು ಕಳೆದ ಐದು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಷ್ಟೆಲ್ಲಾ ಕ್ರೀಡಾ ಸೌಲಭ್ಯಗಳು ಇದಾಗ್ಯೂ ಶಾಲೆಯಲ್ಲಿ ಇರುವ ಬಾಲಕ ಹಾಗೂ ಬಾಲಕಿಯರಿಗೆ ವಸತಿ ಗೃಹಗಳು ಅತೀ ತುರ್ತು ಅಗತ್ಯವಿದೆ.

ಶಾಲೆಗೆ ಅತೀ ಅಗತ್ಯವಾಗಿ ಹೆಚ್ಚುವರಿ ವಸತಿ ಗೃಹಗಳು, ಪಿಯು ಹಾಗೂ ಕಾಲೇಜು ತರಗತಿಗಳು ಆರಂಭವಾಗಬೇಕಿದೆ. ಹಾಗೆಯೇ ಒಳಾಂಗಣ ಕ್ರೀಡಾಂಗಣದ ಸುವ್ಯವಸ್ಥೆಯೊಂದಿಗೆ ಸುಸಜ್ಜಿತ ಈಜುಕೊಳದ ಅಗತ್ಯವೂ ಇದೆ.

ಹಾಗಾಗಿ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು ಈ ಶಾಲೆಯತ್ತ ಗಮನ ಹರಿಸುವ ಮೂಲಕ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕಿದೆ.