ಮಡಿಕೇರಿ, ಜ. ೨೪: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸ್ನಾತಕ ಪದವಿಯಲ್ಲಿ ಕಡ್ಡಾಯಗೊಳಿಸಿದ್ದ ಕನ್ನಡ ಭಾಷಾ ಕಲಿಕೆ ಆದೇಶವನ್ನು ಸರಕಾರ ಸದ್ಯದ ಮಟ್ಟಿಗೆ ಕೈಬಿಟ್ಟಿದೆ. ಇದರಿಂದಾಗಿ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ಇದೇ ಪ್ರಥಮ ಬಾರಿಗೆ ಅಳವಡಿಕೆ ಯಾಗುತ್ತಿರುವ ಕೊಡವ ಭಾಷಾ ಶಿಕ್ಷಣಕ್ಕೆ ಮುಂದಿನ ಸಾಲಿನಿಂದ ಒಂದಷ್ಟು ಹೆಚ್ಚಿನ ಪ್ರೋತ್ಸಾಹ-ಆಸಕ್ತಿ ಸಿಗುವ ಸಾಧ್ಯತೆ ಕಂಡುಬರುತ್ತಿದೆ.

ವಿದ್ಯಾರ್ಥಿಗಳು ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲು ಇಚ್ಚಿಸದಿದ್ದರೆ ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೆ ಅದನ್ನು ಕಡ್ಡಾಯಗೊಳಿಸದಂತೆ ಉನ್ನತ ಶಿಕ್ಷಣ ಇಲಾಖೆಯ (ವಿಶ್ವವಿದ್ಯಾನಿಯಗಳು) ಅಧೀನ ಕಾರ್ಯದರ್ಶಿ ಆರ್. ಮಹೇಶ್ ಆದೇಶ ಹೊರಡಿಸಿದ್ದಾರೆ.

ದೇಶದಲ್ಲೇ ಪ್ರಥಮ ಬಾರಿಗೆ ೨೦೨೧-೨೨ನೇ ಸಾಲಿನಿಂದ ‘ನೂತನ ರಾಷ್ಟಿçÃಯ ಶಿಕ್ಷಣ ನೀತಿ-ಎನ್‌ಇಪಿ’ಯನ್ನು ‘ಉನ್ನತ ಶಿಕ್ಷಣ’ದಲ್ಲಿ ರಾಜ್ಯ ಸರಕಾರ ಅನುಷ್ಠಾನಗೊಳಿಸಿದೆ. ಎನ್‌ಇಪಿ ಆಶಯದಂತೆ ಸ್ಥಳೀಯ ಭಾಷೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಎಲ್ಲಾ ವಿವಿ ಮತ್ತು ಪದವಿ ಕಾಲೇಜುಗಳಲ್ಲಿ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಎರಡು ವರ್ಷ ಅಂದರೆ, ನಾಲ್ಕು ಸೆಮಿಸ್ಟರ್‌ಗಳಲ್ಲಿ ಒಂದು ಭಾಷೆಯಾಗಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿತ್ತು. ಸರಕಾರದ ಈ ಕ್ರಮಕ್ಕೆ ಕೆಲವು ಖಾಸಗಿ ಪದವಿ ಕಾಲೇಜುಗಳು, ಖಾಸಗಿ ವಿವಿಗಳು ಹಾಗೂ ಟುಬಿ ಡೀಮ್ಡ್ ವಿವಿಗಳಿಂದ ವಿರೋಧ ಕೇಳಿಬಂದಿತ್ತು.

ಕನ್ನಡ ಕಡ್ಡಾಯ ಕಲಿಕೆಯಿಂದಾಗಿ ಪಿಯುಸಿ ಹಂತದಲ್ಲಿ ಕನ್ನಡ ಕಲಿಯದ, ಹೊರ ರಾಜ್ಯ ಹಾಗೂ ಹೊರ ದೇಶದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಯಾಗಲಿದೆ. ಇದರಿಂದಾಗಿ ಅವರು ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗಲು ಹಿಂದೇಟು ಹಾಕುತ್ತಾರೆ ಎಂಬ ಆಕ್ಷೇಪ ಕೇಳಿಬಂದಿದ್ದವು. ಕನ್ನಡ ಕಡ್ಡಾಯ ಕಲಿಕೆಯಿಂದಾಗಿ ಹೊರ ರಾಜ್ಯದ ಕೆಲವು ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೊರೆದ ಘಟನೆ ಸಹ ನಡೆದಿತ್ತು.ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪಿಯುಸಿ ಹಂತದಲ್ಲಿ ಕನ್ನಡ ಅಭ್ಯಾಸ ಮಾಡದ ವಿದ್ಯಾರ್ಥಿಗಳು, ಹೊರ ರಾಜ್ಯ ಮತ್ತು ಹೊರ ದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕನ್ನಡ ಕಡ್ಡಾಯ ಕಲಿಕೆಯನ್ನು ಕೇವಲ ಎರಡು ಸೆಮಿಸ್ಟರ್‌ಗಳಿಗೆ ಮಾತ್ರ ಸೀಮಿತಗೊಳಿಸಿತು ಹಾಗೂ ಈ ವಿದ್ಯಾರ್ಥಿಗಳಿಗೆ ಎರಡು ಸೆಮಿಸ್ಟರ್‌ಗಳಲ್ಲಿ ‘ವ್ಯವಹಾರಿಕ ಕನ್ನಡ’ ಕಲಿಸಲು ಕ್ರಮಕೈಗೊಂಡಿತ್ತು.

ನ್ಯಾಯಾಲಯದ ಮೊರೆ

ಸರಕಾರದ ಈ ಕ್ರಮದ ವಿರುದ್ಧ ಸಂಸ್ಕೃತ ಭಾರತಿ

(ಮೊದಲ ಪುಟದಿಂದ) (ಕರ್ನಾಟಕ) ಟ್ರಸ್ಟ್ ಸೇರಿ ಇತರೆ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಈ ಹಿನ್ನೆಲೆಯಲ್ಲಿ ೨೦೨೧ರ ಡಿ. ೧೬ ರಂದು ಮಧ್ಯಂತರ ಆದೇಶ ಹೊರಡಿಸಿದ ಕೋರ್ಟ್, ‘ಎನ್‌ಇಪಿ ಅನ್ವಯ ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕೆ ಎಂಬ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ. ಹಾಗಾಗಿ ಸರಕಾರ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಬಾರದು. ಈಗಾಗಲೇ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಕನ್ನಡ ಕಲಿಯಲು ಆಸಕ್ತಿಯಿಲ್ಲದ ವಿದ್ಯಾರ್ಥಿಗಳಿಗೆ ಮುಂದಿನ ಆದೇಶದವರೆಗೂ ಯಾವುದೇ ಕಾರಣಕ್ಕೂ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಬಾರದು’ ಎಂದು ತಿಳಿಸಿತ್ತು.

ಆದರೆ, ಕೋರ್ಟ್ ಆದೇಶ ಹೊರಡಿಸಿ ತಿಂಗಳು ಕಳೆದರೂ ಈ ಸಂಬAಧ ಸರಕಾರ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಈ ಸಂಬAಧ ಜ. ೨೦ ರಂದು ನಡೆದ ಕೋರ್ಟ್ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಕೋರ್ಟ್ನ ಅಂತಿಮ ತೀರ್ಪು ಪ್ರಕಟವಾಗುವವರೆಗೆ ಎನ್‌ಇಪಿ ಅಡಿಯಲ್ಲಿ ದಾಖಲಾಗಿರುವ ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಲಾಗಿದ್ದ ಕನ್ನಡ ಭಾಷಾ ಕಲಿಕೆಯನ್ನು ಕೈಬಿಟ್ಟಿದೆ.

ಕೊಡವ ಭಾಷಾ ಕಲಿಕೆ ಮಾಹಿತಿ

ಸದ್ಯದ ಮಟ್ಟಿಗೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಸುಮಾರು ೨೦ಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿಯಲ್ಲಿ ಕೊಡವ ಭಾಷಾ ಅಧ್ಯಯನಕ್ಕೆ ಮುಂದಾಗಿದ್ದಾರೆ. ಕೊಡವ ಅಕಾಡೆಮಿಯು ಈ ಕುರಿತಾಗಿ ನಡೆಸಿದ ಪ್ರಯತ್ನದಂತೆ ಆರಂಭದಲ್ಲಿ ಸುಮಾರು ೬೦ ರಷ್ಟು ವಿದ್ಯಾರ್ಥಿಗಳು ಈ ಬಗ್ಗೆ ಆಸಕ್ತಿ ತೋರಿದ್ದರು. ಆದರೆ ಕನ್ನಡ ಕಡ್ಡಾಯ ಎಂಬ ಕಾರಣದಿಂದಾಗಿ ನಂತರದಲ್ಲಿ ಹಲವರು ಇದಕ್ಕೆ ಹಿಂದೇಟು ಹಾಕಿದ್ದಾರೆ. ಇದೀಗ ಕಲಿಕೆ ಐಚ್ಚಿಕವಾಗಲಿರುವ ಕಾರಣದಿಂದ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪದವಿ ಮಟ್ಟದಲ್ಲಿ ವಿದ್ಯಾರ್ಥಿಗಳು ಕೊಡವ ಭಾಷೆಯ ಬಗ್ಗೆ ಆಸಕ್ತಿ ತೋರುವ ಸಾಧ್ಯತೆ ಹೆಚ್ಚಾಗಲಿದೆ ಎಂದು ಕೊಡವ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಸ್ನಾತಕೋತ್ತರ ಪದವಿಯಲ್ಲಿ ಆಸಕ್ತರು ನೇರವಾಗಿ ಕೊಡವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುವ ಕಾರಣದಿಂದ ಇಲ್ಲಿ ಈ ಬಗ್ಗೆ ಸಮಸ್ಯೆ ಇರಲಿಲ್ಲ. ಸ್ನಾತಕೋತ್ತರ ವಿಭಾಗದಲ್ಲಿ ಕೊಡವ ಭಾಷಾ ಎಂ.ಎ.ಗೆ ಅರ್ಜಿ ಸಲ್ಲಿಸಲು ಜನವರಿ ೩೦ ಕೊನೆಯ ದಿನಾಂಕವಾಗಿದೆ.

ಈ ತನಕ ೧೦ ವಿದ್ಯಾರ್ಥಿಗಳು

ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ಕೊಡವ ಭಾಷಾ ಸ್ನಾತಕೋತ್ತರ ಪದವಿಗೆ ಈ ತನಕ ೧೦ ರಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕಅಳುವಾರದಲ್ಲೂ ಇದಕ್ಕೆ ಅವಕಾಶವಿದೆ. ಅಲ್ಲಿ ಸಂಖ್ಯೆ ಕಡಿಮೆಯಾದಲ್ಲಿ ಒಂದೇ ಕಡೆಯಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ಹಾಗೂ ಮಂಗಳೂರು ವಿವಿ ಸೆನೆಟ್ ಸದಸ್ಯೆ ಆಗಿರುವ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ. ತಾ. ೩೦ರ ತನಕ ಈ ಬಗ್ಗೆ ಕಾಯಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರಾಥಮಿಕ ವಿಭಾಗದಲ್ಲಿ ಐದನೇ ತರಗತಿಯಿಂದ ಈಗಾಗಲೇ ಕೊಡವ ಪಠ್ಯ ಕ್ರಮ ಬೋಧನೆಗೆ ಚಾಲನೆ ನೀಡಲಾಗಿದೆ. ಪ್ರಸ್ತುತ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ೨೦ ವಿದ್ಯಾರ್ಥಿಗಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೂಚಮಕೇರಿಯಲ್ಲಿ ೧೨, ಸಾಯಿಶಂಕರ್ ಪೊನ್ನಂಪೇಟೆ ಯಲ್ಲಿ ೨೦, ಜೆಸಿ ವಿದ್ಯಾಸಂಸ್ಥೆ ಶ್ರೀಮಂಗಲದಲ್ಲಿ ೨೫, ಸರ್ವದೈವತಾ ಅರ್ವತ್ತೋಕ್ಲುವಿನಲ್ಲಿ ೫೮ ವಿದ್ಯಾರ್ಥಿಗಳು ಕೊಡವ ಭಾಷೆ ಅಭ್ಯಾಸಿಸುತ್ತಿದ್ದಾರೆ. ಟಿ. ಶೆಟ್ಟಿಗೇರಿಯ ರೂಟ್ಸ್, ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಗೋಣಿಕೊಪ್ಪಲುವಿನ ಲಯನ್ಸ್ ಶಾಲೆಯಲ್ಲಿ ಸದ್ಯದಲ್ಲಿ ಬೋಧನೆ ಆರಂಭವಾಗಲಿದೆ.