ರಾಜ್ಯದಲ್ಲಿ ಕೊರೊನಾಗೆ ೫೨ ಬಲಿ

ಬೆಂಗಳೂರು, ಜ. ೨೫: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದ್ದು, ಕಳೆದ ೨೪ ಗಂಟೆಯಲ್ಲಿ ೪೧,೪೦೦ ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಅವರು ಮಂಗಳವಾರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೪೧ ಸಾವಿರ ದಾಟುವ ಮೂಲಕ ಪಾಸಿಟಿವ್ ಪ್ರಮಾಣ ಶೇ. ೨೬.೭೦ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ೧೯ ಮಂದಿ ಸೇರಿದಂತೆ ರಾಜ್ಯದಲ್ಲಿ ಕೊರೊನಾದಿಂದ ೫೨ ಮಂದಿ ಮೃತಪಟ್ಟಿದ್ದಾರೆ ಎಂದು ಸುಧಾಕರ್ ತಿಳಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ೧೯,೧೦೫ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಹೊಸ ಪ್ರಕರಣಗಳಿಗಿಂತ ಹೆಚ್ಚಾಗಿದ್ದು, ೫೩,೦೯೩ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ೩,೫೦,೭೪೨ ಸಕ್ರಿಯ ಪ್ರಕರಣಗಳಿವೆ. ಒಟ್ಟು ೧,೫೫,೦೫೪ ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು, ಜ. ೨೫: ೨೦೨೧-೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಮಂಗಳವಾರ ಪ್ರಕಟಿಸಿದೆ. ಇಂದು ಪ್ರಕಟಿಸಿದ ಅಂತಿಮ ವೇಳಾಪಟ್ಟಿಯ ಪ್ರಕಾರ, ಮಾರ್ಚ್ ೨೮ ರಿಂದ ಏಪ್ರಿಲ್ ೧೧ ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ ೨೮ ರಂದು ಪ್ರಥಮ ಭಾಷೆ, ಮಾರ್ಚ್ ೩೦ ರಂದು ದ್ವಿತೀಯ ಭಾಷೆ, ಏಪ್ರಿಲ್ ೧ ರಂದು ಅರ್ಥಶಾಸ್ತç, ಕೋರ್ ಸಬ್ಜೆಕ್ಟ್, ಏಪ್ರಿಲ್ ೪ ಗಣಿತ, ಸಮಾಜಶಾಸ್ತç, ಏಪ್ರಿಲ್ ೬ ರಂದು ಸಮಾಜ ವಿಜ್ಞಾನ, ಏಪ್ರಿಲ್ ೮ ತೃತೀಯ ಭಾಷೆ, ಏಪ್ರಿಲ್ ೧೧ ವಿಜ್ಞಾನ, ರಾಜ್ಯಶಾಸ್ತç, ಕರ್ನಾಟಕ/ಹಿಂದೂಸ್ತಾನಿ ಸಂಗೀತದ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಸಮಯ ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧.೪೫. ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು ೧೫ ನಿಮಿಷ ಕಾಲಾವಕಾಶ ನೀಡಲಾಗಿದೆ. ಮಹಾಮಾರಿ ಕೊರೊನಾ ವೈರಸ್ ಅಬ್ಬರದ ನಡುವೆಯೂ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಈಗ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಉಸ್ತುವಾರಿ ಸಚಿವ ಹೊಣೆಗಾರಿಕೆಯಲ್ಲಿ ಅಸಮಾಧಾನವಿಲ್ಲ: ಸಿಎಂ

ಬೆAಗಳೂರು, ಜ. ೨೫: ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ವಹಿಸಿರುವುದರಲ್ಲಿ ಯಾವ ಸಚಿವರುಗಳಿಗೂ ಅಸಮಾಧಾನವಿಲ್ಲ, ಯಾರೂ ಕೂಡ ಅಸಮಾಧಾನ ವ್ಯಕ್ತಪಡಿಸಿಲ್ಲ, ಎಲ್ಲರ ಜೊತೆ ನಾನು ಮಾತನಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ನಮ್ಮದು ರಾಷ್ಟಿçÃಯ ಪಕ್ಷ, ರಾಷ್ಟಿçÃಯ ಮಟ್ಟದಲ್ಲಿ ನೀತಿಯಡಿಯಲ್ಲಿ ಹೈಕಮಾಂಡ್ ಮತ್ತು ಎಲ್ಲರ ಜೊತೆ ಚರ್ಚಿಸಿ ಜಿಲ್ಲೆಗಳ ಉಸ್ತುವಾರಿ ಹೊಣೆಯನ್ನು ಸಚಿವರುಗಳಿಗೆ ವಹಿಸಲಾಗಿದೆ. ಇದು ತಮ್ಮ ನಿರ್ಧಾರವಲ್ಲ, ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ದೆಹಲಿಯತ್ತ ಬೊಟ್ಟು ಮಾಡಿ ತೋರಿಸಿದ್ದಾರೆ. ಈ ಮೂಲಕ ಮಾಧ್ಯಮಗಳಲ್ಲಿ ಬರುತ್ತಿರುವ ಅಸಮಾಧಾನದ ಹೊಗೆಯನ್ನು ಶಮನಗೊಳಿಸುವ ಪ್ರಯತ್ನವನ್ನು ಸಿಎಂ ಬೊಮ್ಮಾಯಿ ಮಾಡುತ್ತಿರುವಂತೆ ಕಾಣುತ್ತಿದೆ. ಎಲ್ಲ ಸಚಿವರ ಬಳಿಯೂ ನಾನು ಮಾತನಾಡಿದ್ದೇನೆ, ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿದ್ದೇವೆ. ಸರ್ಕಾರದ ಪರವಾಗಿ ಸೂಕ್ತವಾಗಿ ಜನರ ಪರವಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ಗೊಂದಲ, ಅಸಮಾಧಾನ ಎಂಬ ಸುದ್ದಿಗಳೆಲ್ಲ ವಾಸ್ತವಕ್ಕೆ ದೂರ ಎಂದು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ವ್ಯಾಖ್ಯಾನ ಕೊಡುವುದಿಲ್ಲ, ಕೆಲವೇ ದಿನಗಳಲ್ಲಿ ರಾಜ್ಯದ ಜನತೆಗೆ ರಾಜಕೀಯ ಬೆಳವಣಿಗೆ ಗೊತ್ತಾಗಲಿದೆ ಎಂದು ಸಿಎಂ ಕುತೂಹಲ ಕೆರಳಿಸುವ ಮಾತುಗಳನ್ನು ಕೂಡ ಹೇಳಿದರು.

ನೀರಜ್ ಛೋಪ್ರಾಗೆ ಪರಂ ವಿಶಿಷ್ಟ ಸೇವಾ ಪದಕ ಗೌರವ

ನವದೆಹಲಿ, ಜ. ೨೫: ಒಲಂಪಿಕ್ ಚಿನ್ನದ ಹುಡುಗ ನೀರಜ್ ಛೋಪ್ರಾ ಪರಂ ವಿಶಿಷ್ಟ ಸೇವಾ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಾರಿ ಈ ಪ್ರಶಸ್ತಿಯನ್ನು ೨೯ ಮಂದಿಗೆ ನೀಡಲಾಗಿದೆ. ಗಣರಾಜ್ಯೋತ್ಸವದ ಮುನ್ನಾದಿನದಂದು ಒಲಿಂಪಿಯನ್ ನೀರಜ್ ಚೋಪ್ರಾ ಅವರಿಗೆ ಪರಂ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗಿದೆ. ನೀರಜ್ ಚೋಪ್ರಾ ಅವರು ಒಲಂಪಿಕ್ಸ್ನಲ್ಲಿ ಜಾವ್ಲಿನ್ ಥ್ರೋ ಮೂಲಕ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಟ್ರಾö್ಯಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದಾರೆ. ರಾಷ್ಟçಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಸಂಜೆ ರಾಷ್ಟçಪತಿ ಭವನದಲ್ಲಿ ೩೮೪ ರಕ್ಷಣಾ ಸಿಬ್ಬಂದಿಯನ್ನು ಶೌರ್ಯ ಮತ್ತು ಇತರ ಪ್ರಶಸ್ತಿಗಳೊಂದಿಗೆ ಗೌರವಿಸಿದರು. ಪ್ರಶಸ್ತಿಗಳಲ್ಲಿ ೧೨ ಶೌರ್ಯ ಚಕ್ರಗಳು, ೨೯ ಪರಂ ವಿಶಿಷ್ಟ ಸೇವಾ ಪದಕಗಳು. ಇದರ ಮುಂದುವರಿದ ಭಾಗವಾಗಿ ನಾಲ್ಕು ಉತ್ತಮ ಯುದ್ಧ ಸೇವಾ ಪದಕಗಳು, ೫೩ ಅತಿ ವಿಶಿಷ್ಟ ಸೇವಾ ಪದಕಗಳು, ೧೩ ಯುದ್ಧ ಸೇವಾ ಪದಕಗಳನ್ನು ನೀಡಲಾಗಿದೆ.

೫೬ ಭಾರತೀಯ ಮೀನುಗಾರರ ಬಿಡುಗಡೆಗೆ ಶ್ರೀಲಂಕಾ ಕೋರ್ಟ್ ಆದೇಶ

ಕೊಲಂಬೋ, ಜ. ೨೫: ದ್ವೀಪ ರಾಷ್ಟçದ ಪ್ರಾದೇಶಿಕ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ೫೬ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಶ್ರೀಲಂಕಾ ನ್ಯಾಯಾಲಯ ಮಂಗಳವಾರ ಆದೇಶಿಸಿದೆ. ಡಿಸೆಂಬರ್ ಮಧ್ಯಭಾಗದಲ್ಲಿ ಮನ್ನಾರ್‌ನ ದಕ್ಷಿಣ ಸಮುದ್ರದಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಉತ್ತರ ಜಾಫ್ನಾ ಪರ್ಯಾಯ ದ್ವೀಪದ ನ್ಯಾಯಾಲಯವು ಆದೇಶಿಸಿದೆ. ೫೬ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ನ್ಯಾಯಾಲಯವು ಆದೇಶಿಸಿದೆ ಎಂದು ತಿಳಿದು ಸಂತೋಷವಾಗಿದೆ ಎಂದು ಕೊಲಂಬೊ ದಲ್ಲಿರುವ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ. ಮಂಗಳವಾರ ೫೬ ಮೀನುಗಾರರನ್ನು ಬಿಡುಗಡೆ ಮಾಡುವುದರೊಂದಿಗೆ ಶ್ರೀಲಂಕಾದ ವಶದಲ್ಲಿ ಯಾವುದೇ ಭಾರತೀಯ ಮೀನುಗಾರರು ಇರುವುದಿಲ್ಲ ಎಂದು ಶ್ರೀಲಂಕಾ ಅಧಿಕಾರಿಗಳು ಮತ್ತು ಭಾರತೀಯ ರಾಜತಾಂತ್ರಿಕ ಮೂಲಗಳು ದೃಢಪಡಿಸಿವೆ. ಆರ್ಥಿಕ ನೆರವು ಮಾತುಕತೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮಾನವೀಯ ಆಧಾರದ ಮೇಲೆ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಭಾರತದ ಅಧಿಕಾರಿಗಳು ಶ್ರೀಲಂಕಾವನ್ನು ಒತ್ತಾಯಿಸಿದ್ದರಿಂದ ಮೀನುಗಾರರ ಬಿಡುಗಡೆಗೆ ನ್ಯಾಯಾಲಯವು ಆದೇಶಿಸಿದೆ.