*ಸಿದ್ದಾಪುರ, ಜ. ೨೫: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಬೆಳೆಗಾರ ಜೋಸ್ ಕೊರಿಯನ್ ಅವರ ತೋಟದ ಬಳಿ ಹಾಡಹಗಲೇ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಆತಂಕ ಸೃಷ್ಟಿಸಿದೆ.

ಇಂದು ತೋಟದ ಬಳಿಯ ಆನೆ ಕಂದಕದ ಮಣ್ಣಿನ ರಾಶಿಯ ಮೇಲೆ ಹುಲಿಯೊಂದು ಮಲಗಿರುವುದನ್ನು ಸ್ಥಳೀಯರು ಗಮನಿಸಿದ್ದಾರೆೆ. ಅಲ್ಲದೆ ದೂರದಿಂದಲೇ ಕ್ಯಾಮರಾಗಳಲ್ಲಿ ಫೋಟೋ ಕ್ಲಿಕ್ಕಿಸುವ ಪ್ರಯತ್ನ ಮಾಡಿದರಾದರೂ ಹುಲಿ ಸ್ಪಷ್ಟವಾಗಿ ಸೆರೆಯಾಗಿಲ್ಲ. ಕಾಡಾನೆಗಳಂತೆ ಹುಲಿ ಕೂಡ ಹಗಲು ಹೊತ್ತಿನಲ್ಲೇ ರಾಜಾರೋಷವಾಗಿ ತಿರುಗಾಡುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರು ತೋಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಅನಾಹುತಗಳು ಸಂಭವಿಸುವ ಮೊದಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೇಯಲು ಬಿಟ್ಟ ಹಸುಗಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹುಲಿ ಹಸುಗಳನ್ನು ಭಕ್ಷಿಸುತ್ತಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. -ಸುಧಿ