ಸೋಮವಾರಪೇಟೆ, ಜ.೨೪: ಅರಣ್ಯದಿಂದ ನಾಡಿಗೆ ಬರುವ ಕಾಡಾನೆಗಳಿಗೆ ತಡೆಯೊಡ್ಡಲು ಅರಣ್ಯ ಇಲಾಖೆಯಿಂದ ತೋಡಲಾಗಿರುವ ಕಂದಕವೀಗ ವಿದ್ಯಾರ್ಥಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ಶಾಲೆಯ ಪಕ್ಕದಲ್ಲಿಯೇ ಕಂದಕ ನಿರ್ಮಿಸಿರುವ ಅರಣ್ಯ ಇಲಾಖೆ, ಶಾಲಾ ಆವರಣದಲ್ಲಿ ಬೇಲಿ ನಿರ್ಮಿಸದೇ ತನ್ನ ಬೇಜವಾಬ್ದಾರಿ ತೋರಿರುವುದರಿಂದ, ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಭಯದಿಂದ ಓಡಾಡಬೇಕಿದೆ.
ಸಮೀಪದ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಂತಹ ಕಂದಕ ನಿರ್ಮಾಣವಾಗಿದ್ದು, ಕಾಮಗಾರಿ ಮುಗಿಸಿದ ಅರಣ್ಯ ಇಲಾಖೆ ಮಕ್ಕಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮರೆತುಬಿಟ್ಟಿದೆ.
ಆನೆ ಕಾರಿಡಾರ್ ಯೋಜನೆಯಡಿ ಅರಣ್ಯ ಇಲಾಖೆ ವತಿಯಿಂದ ೨೦೨೧ರ ಮೇ ತಿಂಗಳಿನಲ್ಲಿ ಶಾಲೆಯ ಪಕ್ಕದಲ್ಲಿಯೇ ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿರುವ ಸಂದರ್ಭವೇ ಕಂದಕ ನಿರ್ಮಾಣವಾದ ನಂತರ ಶಾಲೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತಂತಿಬೇಲಿ ನಿರ್ಮಿಸಿಕೊಡುವಂತೆ ಮುಖ್ಯೋಪಾಧ್ಯಾಯರು ಹಾಗೂ ಪೋಷಕರು ಮನವಿ ಮಾಡಿದ್ದರು. ಆದರೆ ಇವರುಗಳ ಮನವಿಗೆ ಈವರೆಗೆ ಅರಣ್ಯ ಇಲಾಖೆ ಸ್ಪಂದಿಸಿಲ್ಲ.
ಈ ಹಿಂದೆ ಇದ್ದ ಬೇಲಿಯನ್ನು ಕಾಮಗಾರಿ ನಡೆಯುವ ಸಂದರ್ಭ ಕಿತ್ತುಹಾಕಿದ್ದು, ಬೇಲಿ ಇದ್ದ ಜಾಗದಲ್ಲಿ ಬೃಹತ್ ಕಂದಕ ನಿರ್ಮಿಸಲಾಗಿದೆ. ಇದರೊಂದಿಗೆ ಶಾಲಾ ಕಟ್ಟಡದ ಸನಿಹವೇ ಕಂದಕ ನಿರ್ಮಿಸಿರುವು ದರಿಂದ ಕಟ್ಟಡಕ್ಕೂ ಅಭದ್ರತೆ ಕಾಡಲಾರಂಭಿಸಿದೆ.
ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದು, ಪುಟ್ಟ ಮಕ್ಕಳು ಶಾಲಾ ಆವರಣದಲ್ಲಿ ಓಡಾಡುತ್ತಿರುತ್ತಾರೆ. ಅಪ್ಪಿತಪ್ಪಿ ವಿದ್ಯಾರ್ಥಿಗಳು ಈ ಕಂದಕದೊಳಗೆ ಬಿದ್ದರೆ ಅಪಾಯ ಖಚಿತ. ತಕ್ಷಣ ಸಂಬAಧಿಸಿದ ಇಲಾಖಾಧಿಕಾರಿಗಳು ಇತ್ತ ಗಮನಹರಿಸಿ ಬೇಲಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಹಾಗೂ ಶಿಕ್ಷಕ ವರ್ಗದವರು ಒತ್ತಾಯಿಸಿದ್ದಾರೆ.