ಇಂದು ರಾಷ್ಟಿçÃಯ ಹೆಣ್ಣು ಮಕ್ಕಳ ದಿನ

ಹೆಣ್ಣು ಮಕ್ಕಳ ರಕ್ಷಣೆ, ಅಭಿವೃದ್ಧಿ, ಶಿಕ್ಷಣ ಮತ್ತು ಸುರಕ್ಷತೆಗಾಗಿ ಕೇಂದ್ರದ ಎನ್‌ಡಿಎ ಸರ್ಕಾರ ೨೦೧೫ರಲ್ಲಿ ಈ ದಿನವನ್ನು ಆಚರಣೆಗೆ ತಂದಿತು. ಲಿಂಗಾನುಪಾತದಲ್ಲಿರುವ ದೊಡ್ಡ ವ್ಯತ್ಯಾಸವನ್ನು ತಪ್ಪಿಸುವ ಉದ್ದೇಶವನ್ನು ಹೊಂದಿದ್ದು, ಹೆಣ್ಣು ಮಕ್ಕಳನ್ನು ಓದಿಸಿ, ಹೆಣ್ಣು ಮಕ್ಕಳನ್ನು ಬೆಳೆಸಿ ಎಂಬ ಅಭಿಯಾನದಡಿಯಲ್ಲಿ ಈ ಆಚರಣೆಯನ್ನು ಅನುಷ್ಠಾನಕ್ಕೆ ತರಲಾಯಿತು. ಭಾರತದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ತನ್ನ ಜೀವನವನ್ನು ಮುಡುಪಾಗಿಟ್ಟ ಸಾವಿತ್ರಿ ಭಾಯಿ ಫುಲೆಯವರನ್ನು ಈ ಸಂದರ್ಭದಲ್ಲಿ ಸ್ಮರಿಸದಿದ್ದಲ್ಲಿ ಇದು ಅರ್ಥಪೂರ್ಣ ಆಚರಣೆಯಾಗಲಾರದು. ಅಕ್ಷರದವ್ವ, ಇಂಡಿಯಾಸ್ ಫಸ್ಟ್ ಲೇಡಿ ಟೀಚರ್ ಎಂದು ಗುರುತಿಸಿಕೊಂಡ ಸಾವಿತ್ರಿ ಭಾಯಿ ಫುಲೆಯವರು ಭಾರತದ ಮಹಿಳಾ ಸಾಕ್ಷರತಾ ಬೆಳವಣಿಗೆಯ ಇತಿಹಾಸದಲ್ಲಿ ಮಿನುಗುವ ತಾರೆಯಾಗಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ತನ್ನ ಸಾಮರ್ಥ್ಯ ಅಭಿವ್ಯಕ್ತಿಗೆ ಅವಕಾಶವೇ ಇಲ್ಲದಂತಾಗಿ ದ್ವಿತೀಯ ದರ್ಜೆಯ ಪ್ರಜೆ ಎಂಬAತೆ ಹೆಣ್ಣನ್ನು ನಡೆಸಿಕೊಳ್ಳುತ್ತಿದ್ದ ದಿನಗಳವು. ಪುರುಷ ಶೋಷಣೆಯು ಕೂಗೆಬ್ಬಿಸುತ್ತಿದ್ದ ದಿನಗಳಲ್ಲಿ ಇವೆಲ್ಲದಕ್ಕೂ ಅಪವಾದವೆಂಬAತೆ ತನ್ನ ಕೈ ಹಿಡಿದ ಪತಿಯಿಂದಲೇ ಅಕ್ಷರಾಭ್ಯಾಸ ಮಾಡಿ, ಶೈಕ್ಷಣಿಕ ಸಾಧನೆಗೆ ಟೊಂಕಕಟ್ಟಿದ ದಿಟ್ಟೆ. ಪತಿ ಸತ್ಯಶೋಧಕ ಸಮಾಜದ ಸ್ಥಾಪಕರಾದ ಜ್ಯೋತಿ ಬಾ ಫುಲೆ ಅವರ ಬೆಂಬಲ, ಪ್ರೋತ್ಸಾಹ ಸಾವಿತ್ರಿ ಭಾಯಿಯವರು ಶಿಕ್ಷಕ ತರಬೇತಿಯನ್ನು ಪಡೆದು ಭಾರತದಲ್ಲಿಯೇ ಮೊಟ್ಟ ಮೊದಲನೆ ಹೆಣ್ಣು ಮಕ್ಕಳ ಶಾಲೆಯನ್ನು ತೆರೆಯುವಲ್ಲಿ ಮೊದಲಿಗರಾದರು. ಸಮಾಜದ ಕ್ರೂರದೃಷ್ಟಿಗೆ ದಂಪತಿ ಬಲಿಯಾಗಬೇಕಾಯಿತು. ಸಾವಿತ್ರಿ ಭಾಯಿಯವರು ಶಾಲೆಗೆ ಪಾಠ ಮಾಡಲು ತೆರಳುವಾಗ ಕುಪಿತರಾದ ಜನರು ಅವರ ಮೇಲೆ ಮಣ್ಣು, ಸಗಣಿಯನ್ನು ಎರಚಿ ಪ್ರತಿರೋಧವನ್ನೊಡುತ್ತಿದ್ದರು, ಅವಮಾನಮಾಡುತ್ತಿದ್ದರು. ಆದರೂ ಪತ್ನಿಯ ಸಾಧನೆಗೆ ಬೆನ್ನೆಲುಬಾಗಿ ನಿಂತದ್ದು ಅವರ ಪತಿ ಜ್ಯೋತಿಬಾ ಫುಲೆ ಅವರು. ಸೋಲು ಮತ್ತು ಅವಮಾನವನ್ನು ಮೆಟ್ಟಿನಿಲ್ಲಲು ಅವರಿಗೆ ಶಕ್ತಿ ತುಂಬಿದ್ದು ಅವರ ಪತಿ. ಇವರ ಆದರ್ಶ ದಾಂಪತ್ಯ, ಜೀವನಸಾಧನೆ ಸ್ತಿçà ಸಮುದಾಯಕ್ಕೆ ಸ್ಫೂರ್ತಿಯಾಗಬೇಕು.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕಂಡ ಒಂದು ವಿಚಾರ. ಮೈಸೂರು ಜಿಲ್ಲೆಯ ಒಂದು ಗ್ರಾಮದಲ್ಲಿ ನಾಗಮ್ಮ ಎಂಬ ಸ್ಮಶಾನ ಕಾಯುವ ಹೆಂಗಸಿನ ಜೀವನಗಾಥೆ. ಬದುಕು ನಡೆಸಲು ಅನಿವಾರ್ಯವಾಗಿ ಸ್ಮಶಾನದಲ್ಲಿ ಗುಂಡಿತೋಡುವ, ಶವಸಂಸ್ಕಾರ ನಡೆಸುವ ಕೆಲಸಕ್ಕೆ ನಾಗಮ್ಮಳ ಗಂಡ ತೊಡಗಿಕೊಂಡ. ಗಂಡನ ಕೆಲಸಕ್ಕೆ ಸಾಥ್ ಕೊಟ್ಟು ನಾಗಮ್ಮ ತಾನೂ ಅದೇ ಕೆಲಸದಲ್ಲಿ ತೊಡಗಿಕೊಂಡಳು. ಸುಮಾರು ೨೧ ವರ್ಷಗಳಿಂದ ಅದೇ ಕಾಯಕದಲ್ಲಿ ಮುಂದುವರಿದ ನಾಗಮ್ಮ ಒಂದು ದಿನ ತನ್ನ ಗಂಡನನ್ನು ಕಳೆದುಕೊಂಡಳು. ಇಬ್ಬರು ಮಕ್ಕಳನ್ನು ಬೆಳೆಸುವ ಜವಬ್ದಾರಿಗೆ ಹೆಗಲು ಕೊಟ್ಟು ಮಕ್ಕಳನ್ನು ದಡ ಸೇರಿಸಿದರೂ ಕೂಡ ತಮಗೆ ಒಲಿದ ವೃತ್ತಿಯಿಂದ ಹಿಂದೆ ಸರಿಯಲಿಲ್ಲ. ಕುಟುಂಬ ಮತ್ತು ಗ್ರಾಮದ ಜನತೆಯಿಂದ ಅವಮಾನಕ್ಕೆ ಒಳಗಾಗುತ್ತಿದ್ದ ನಾಗಮ್ಮ ಎಲ್ಲರ ಬದುಕಿಗೆ ಅಂತ್ಯ ಹಾಡುವ ಸ್ಮಶಾನದಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡು ಹೆಣ್ಣು ಮಕ್ಕಳ ಆತ್ಮಸ್ಥೆöÊರ್ಯಕ್ಕೆ ಸಾಕ್ಷಿಯಾದಳು. ಹೆಣ, ದೆವ್ವ, ಭೂತಗಳೆಂದು ಭಯಪಡದೆ ವಾಸ್ತವ ಪ್ರಪಂಚದಲ್ಲಿ ಬದುಕಿದಳು. ಅವಳ ಎದೆಗಾರಿಕೆಗೇನಿದೆ ಸಾಟಿ?!

೨೦೨೧ನೇ ಸಾಲಿನ ಪಂಪ ಪ್ರಶಸ್ತಿಗೆ ಭಾಜನರಾದ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿಯವರ ಬಗೆಗೆ ಎಲ್ಲರಿಗೂ ತಿಳಿದಿದೆ. ಹೋರಾಟದ ಬದುಕೆಂದರೆ ಆಕೆಯದು. ಏಳನೇ ತರಗತಿಯವರೆಗೆ ಮಂಜುನಾಥನಾಗಿದ್ದ ಆಕೆಯನ್ನು ನಂತರದಲ್ಲಾದ ಶಾರೀರಿಕ ಬದಲಾವಣೆ ಮಂಜಮ್ಮಳನ್ನಾಗಿಸಿತು. ತೃತೀಯ ಲಿಂಗಿಯಾದ ಕಾರಣ ತಂದೆ ತಾಯಿಯರೇ ಸಮಾಜಕ್ಕೆ ಹೆದರಿ ಮನೆಯಿಂದ ಹೊರಹಾಕಿದರು. ಸಂಬAಧಿಕರು ಹತ್ತಿರ ಸೇರಿಸಲಿಲ್ಲ. ಅವರಿವರ ಮನೆಯಲ್ಲಿ ಭಿಕ್ಷಾಟನೆ ಮಾಡಿ ಹೊಟ್ಟೆ ತುಂಬಿಸಿಕೊAಡ ಈಕೆ ಕಾಮುಕರಿಂದ ಅತ್ಯಾಚಾರಕ್ಕೂ ಒಳಗಾದಳು. ಆತ್ಮಹತ್ಯೆಗೆ ಪ್ರಯತ್ನಿಸಿ ಸಾವನ್ನು ಗೆದ್ದಳು. ನಂತರ ಮನಸ್ಸು ಗಟ್ಟಿ ಮಾಡಿಕೊಂಡು ಜೋಗತಿ ನೃತ್ಯವನ್ನು ಕಲಿಯುತ್ತ ಕಲಾಸೇವೆಗೆಂದು ಬದುಕನ್ನು ಮೀಸಲಿಟ್ಟರು. ಅವರ ಕಲಾ ಸೇವೆ ಪಂಪಾ ಪ್ರಶಸ್ತಿಗೆ ಭಾಜನರಾಗುವ ಮೂಲಕ ಅವರನ್ನು ರಾಷ್ಟçಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ಇದಲ್ಲವೇ ಸಾರ್ಥಕ ಬದುಕೆಂದರೆ! ಕರ್ನಾಟಕದ ಮತ್ತೊಬ್ಬರು ಕಾಯಕ ಯೋಗಿ ಸಾಲುಮರದ ತಿಮ್ಮಕ್ಕ. ಮಕ್ಕಳಿಲ್ಲದೆ ಬರಡಾದ ಬದುಕಿಗೆ ಅಮೃತ ಸಿಂಚನವೆAಬAತೆ ರಸ್ತೆ ಬದಿಯಲ್ಲಿ ಗಿಡ ಬೆಳೆಸುವ ಪುಣ್ಯ ಕಾರ್ಯದಲ್ಲಿ ತೊಡಗಿಕೊಂಡದ್ದು ಸರ್ವವಿದಿತ ವಿಚಾರ. ನೂರು ಮಕ್ಕಳನ್ನು ಹೆತ್ತು ಮಹಾತಾಯಿ ಎನಿಸಿಕೊಂಡಿದ್ದರೂ ಪ್ರಾಯಶಃ ಅವರ ಹೆಸರು ಅಜರಾಮರವಾಗಿರುತ್ತಿರಲಿಲ್ಲ. ಲೆಕ್ಕವಿಲ್ಲದಷ್ಟು ಮರಗಳನ್ನು ಬೆಳೆಸಿದ್ದು ಇಂದು ಅವರಲ್ಲಿದ್ದ ಮಾತೃತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇಂತಹ ಅದೆಷ್ಟೋ ಬೆಂಕಿಯಲ್ಲಿ ಅರಳಿದ ಹೂವುಗಳು ನಮ್ಮೊಂದಿಗೆ ಇದ್ದರೂ ಗುರುತಿಸಿ ಅನುಸರಿಸುವಲ್ಲಿ ನಾವು ವಿಫಲರಾಗಿದ್ದೇವೆ. ಎಲ್ಲರ ಪ್ರೋತ್ಸಾಹ, ಬೆಂಬಲವಿದ್ದು ಏನೂ ಸಾಧಿಸದೆ ಉದಾಸೀನತೆಯಿಂದ ದಿನದೂಡುವವರು, ಮಾನಸಿಕ ಶಾಂತಿಯನ್ನು ಕಳೆದುಕೊಳ್ಳುವವರು, ಎಲ್ಲವೂ ಇದ್ದು ಏನೂ ಇಲ್ಲದಂತಿರುವವರು ಯೋಚಿಸಬೇಕು. ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾಲದ ಹೊರೆಗೆ ಕುಗ್ಗಿ ಹೋಗಿ ಆತ್ಮಹತ್ಯೆಗೆ ಶರಣಾದದ್ದು ಹಳೆಯ ವಿಚಾರ. ಅದೇ ಕಂಪೆನಿಯ ಪೂರ್ಣ ಜವಾಬ್ದಾರಿ ಹೊತ್ತ ಆತನ ಪತ್ನಿ ಗಂಡನ ಕೋಟಿಗಟ್ಟಲೆ ಸಾಲವನ್ನು ತೀರಿಸುತ್ತಿರುವ ವಿಚಾರ ಸಾಮಾಜಿಕ ಜಾಲತಾಣದ ಕೌತುಕಭರಿತ ವಿಚಾರ. ಇಂತಹ ಮಾನಸಿಕ ದೃಢತೆ ಎಷ್ಟು ಜನರಿಗಿದೆ? ಕುಡುಕ ಗಂಡ, ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿ ಮಧ್ಯದಲ್ಲಿ ಕೈಬಿಟ್ಟ ಸಂಸಾರದ ನೊಗವನ್ನು ಹೊರುವ ಹೆಣ್ಣುಮಕ್ಕಳ ಸ್ಥೆöÊರ್ಯಕ್ಕೊಂದು ಸಲಾಂ. ಹೆಣ್ಣು ಮಕ್ಕಳನ್ನು ಸ್ವಾಭಿಮಾನಿಯಾಗಿ, ಸ್ವತಂತ್ರ ಮನೋಭಾವದಿಂದ, ಅವಳ ಆತ್ಮಬಲಕ್ಕೆ ಬದ್ಧವಾಗಿ ಬೆಳೆಸಿದ್ದೇ ಆದಲ್ಲಿ ಪೋಷಕರ ಪಾಲಿಗೆ ಆನೆಬಲ ಅವಳೇ ಆಗಬಲ್ಲಳು. ಕಷ್ಟದ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಬಲ್ಲ ಶಕ್ತಿ ಅವಳಲ್ಲಿದೆ ಎನ್ನುವುದಕ್ಕೆ ಇಂತಹ ಹತ್ತು ಹಲವು ಉದಾಹರಣೆಗಳಿವೆ.

ವಿಶೇಷವಾಗಿ ಇಂತಹ ಆಚರಣೆಯ ಮೂಲಕ ಹೆಣ್ಣುಮಕ್ಕಳ ಅಗತ್ಯತೆ, ಅವಳ ಅಭಿವೃದ್ಧಿಗೆ ಪೂರಕವಾದ ವಾತಾವರಣ ಜನಮಾನಸದಲ್ಲಿ ಸಹಜವಾಗಿಯೇ ಮೂಡಬೇಕಾಗಿದೆ. ಲಿಂಗ ತಾರತಮ್ಯದ ಭೇದ ಭಾವವಿಲ್ಲದೆ ಸರ್ವರಿಗೂ ಸಮಪಾಲು ಎಂಬ ತತ್ವ ಪಾಲನೆಯಾದಲ್ಲಿ ಭಾರತೀಯ ಪರಂಪರೆಯಲ್ಲಿ ಬಿಂಬಿತವಾದ ಹೆಣ್ಣಿನ ಸ್ಥಾನಮಾನಕ್ಕೊಂದು ಪರಿಪೂರ್ಣತೆ.

- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು, ಸೈಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ.