ಶ್ರೀಮಂಗಲ, ಜ. ೨೩: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಅತಿವೃಷ್ಟಿಗೆ ತುತ್ತಾಗಿ ಬೆಳೆನಷ್ಟಗೊಂಡ ಪ್ರಕರಣದಲ್ಲಿ ಪರಿಹಾರ ಹಣ ಬೆಳೆಗಾರರ ಖಾತೆಗೆ ಇನ್ನೂ ಸಂಪೂರ್ಣವಾಗಿ ಪಾವತಿ ಯಾಗಿಲ್ಲ. ಬಹಳಷ್ಟು ಬೆಳೆಗಾರರಿಗೆ ಭಾಗಶಃ ಪರಿಹಾರ ಹಣ ಬಂದಿದೆ. ಆದಷ್ಟು ಬೇಗ ಪೂರ್ತಿ ಪರಿಹಾರ ಹಣವನ್ನು ಪಾವತಿಸುವಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಒತ್ತಾಯಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದ ಬೆಳೆ ನಷ್ಟ ಪರಿಹಾರ ಹಣ ಹೆಕ್ಟೇರ್‌ಗೆ ರೂ. ೧೮ ಸಾವಿರದಂತೆ ಎರಡು ಹೆಕ್ಟೇರ್‌ಗೆ ೩೬ ಸಾವಿರ ಪಾವತಿಯಾಗಬೇಕು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ ತಲಾ ರೂ. ೧೦ ಸಾವಿರ ಘೋಷಿಸಿದ್ದಾರೆ. ಆದರೆ, ಬಹಳಷ್ಟು ಪ್ರಕರಣದಲ್ಲಿ ಭಾಗಶಃ ಹಣವನ್ನು ಬೆಳೆಗಾರರ ಖಾತೆಗೆ ವರ್ಗಾಯಿಸಲಾಗಿದೆ. ಇನ್ನು ಕೆಲವು ಬೆಳೆಗಾರರಿಗೆ ಮುಖ್ಯ ಮಂತ್ರಿ ಘೋಷಿಸಿದ್ದ ಹೆಚ್ಚುವರಿ ಪರಿಹಾರ ಹಣ ಪಾವತಿಯಾಗಿಲ್ಲದ್ದ ಬಗ್ಗೆ ಜಿಲ್ಲಾಧಿಕಾರಿ ಗಮನಿಸಬೇಕೆಂದು ಹೇಳಿದರು. ಕಂದಾಯ ಸಚಿವ ಆರ್. ಅಶೋಕ್ ಅವರು ಬೆಳೆ ನಷ್ಟದ ಪರಿಹಾರವನ್ನು ಜನವರಿ ೧೫ ರೊಳಗೆ ಪಾವತಿಸುವುದಾಗಿ ಹೇಳಿಕೆ ನೀಡಿದ್ದರು. ಆದರೂ, ಇನ್ನು ಸಂಪೂರ್ಣ ಹಣ ಪಾವತಿಯಾಗಿಲ್ಲ.

ಕಳೆದ ವರ್ಷವೂ ಸಹ ಅರ್ಹ ಬೆಳೆಗಾರರಿಗೆ ಪರಿಹಾರ ಹಣ ಪಾವತಿಯಾಗಿಲ್ಲ ಕಳೆದ ವರ್ಷದಂತೆ ಈ ವರ್ಷವೂ ಕಂದಾಯ ಇಲಾಖೆಯ ಲೋಪದೋಷ ಹಾಗೂ ನಿರ್ಲಕ್ಷ÷್ಯದಿಂದ ಬೆಳೆಗಾರರು ಪರಿಹಾರದಿಂದ ವಂಚಿತರಾಗದAತೆ ಜಿಲ್ಲಾಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕೆಂದು ಮನವಿ ಮಾಡಿದರು.

ರಸಗೊಬ್ಬರ ಬೆಲೆ ಮತ್ತೆ ಹೆಚ್ಚಾಗಿದ್ದು, ಇದು ಆತಂಕಕಾರಿಯಾಗಿದೆ. ಉತ್ಪಾದನಾ ವೆಚ್ಚ ಬಹಳ ಹೆಚ್ಚಾಗಿದ್ದು, ಪೊಟ್ಯಾಶ್ ರಸಗೊಬ್ಬರದ ದರ ರೂ. ೯೦೦ಗಳಿಂದ ರೂ. ೧೭೦೦ಗೆ ಏರಿಕೆಯಾಗಿರುವುದು ದೊಡ್ದ ಅನ್ಯಾಯವಾಗಿದ್ದು, ಸರಕಾರ ಹಳೆಯ ದರದಲ್ಲಿ ರಸಗೊಬ್ಬರ ಒದಗಿಸಬೇಕು. ಇಲ್ಲದಿದ್ದರೆ ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.

ಕೋವಿಡ್ ಸೋಂಕಿನಿAದ ಮೃತಪಟ್ಟ ಬಿಪಿಎಲ್ ಕುಟುಂಬದ ಸದಸ್ಯರಿಗೆ ಸರ್ಕಾರ ಪರಿಹಾರ ಹಣ ನೀಡುವ ಘೋಷಣೆ ಮಾಡಿದ್ದು, ಬಹಳಷ್ಟು ಬಿಪಿಎಲ್ ಕುಟುಂಬಗಳಿಗೆ ಈ ಪರಿಹಾರ ಹಣ ದೊರೆತಿಲ್ಲ. ಕುಟುಂಬದ ಸದಸ್ಯರನ್ನು ಕಳೆದುಕೊಂಡವರು ಪರಿಹಾರ ಹಣಕ್ಕಾಗಿ ಅಲೆದಾಡುವಂತಾಗದೇ ಅವರ ಮನೆಗೆ ಅಥವಾ ಖಾತೆಗೆ ನೇರವಾಗಿ ವರ್ಗಾಯಿಸುವ ಕ್ರಮ ಆಗಬೇಕೆಂದು ಒತ್ತಾಯಿಸಿದರು.

ರಸಗೊಬ್ಬರವನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರುತ್ತಿರುವುದು ಬೆಳೆಗಾರರಿಗೆ ಗೊಂದಲ ಉಂಟುಮಾಡಿದೆ. ಈ ಬಗ್ಗೆ ಸರಕಾರ ಮರುಪರಿಶೀಲನೆ ನಡೆಸುವಂತೆ ಆಗ್ರಹಿಸಿದರು.

ದಕ್ಷಿಣಕೊಡಗಿನ ಹೈಸೊಡ್ಲೂರು ಗ್ರಾಮದಲ್ಲಿ ಅಮಾಯಕ ಬೆಳೆಗಾರರ ಮೇಲೆ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡು ಮೊಕದ್ದಮೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಅದರಲ್ಲೂ ದಕ್ಷಿಣ ಕೊಡಗಿನಲ್ಲಿ ಬೆಳೆಗಾರರ ಮೇಲೆ ಹಲವು ವರ್ಷದಿಂದ ನಿರಂತರವಾಗಿ ಈ ಕಾಯ್ದೆಯ ಮೂಲಕ ಪ್ರಕರಣ ದಾಖಲಿಸುತ್ತಿದ್ದು, ಇದನ್ನು ಸಭೆಯಲ್ಲಿ ಖಂಡಿಸಲಾಯಿತು.

ಸಭೆಯಲ್ಲಿ ಒಕ್ಕೂಟದ ಪ್ರ.ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ನಿರ್ದೇಶಕ ಮದ್ರೀರ ಗಿರೀಶ್ ಗಣಪತಿ ಹಾಜರಿದ್ದರು.