ವೀರಾಜಪೇಟೆ, ಜ. ೨೩: ಕ್ಷÄಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೋರ್ವ ಪಿಸ್ತೂಲಿನಿಂದ ಗುಂಡು ಹಾರಿಸಿದ ಪರಿಣಾಮ ಇಬ್ಬರಿಗೆ ಗಾಯಗಳಾಗಿರುವ ಘಟನೆ ವೀರಾಜಪೇಟೆ ಹೊರವಲಯ ಪೆರುಂಬಾಡಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ವೀರಾಜಪೇಟೆ ತಾಲೂಕಿನ ಮಾಯಮುಡಿ ಬಾಳಾಜೆ ಗ್ರಾಮದ ನಿವಾಸಿ, ವಿನಯ್ ಅಯ್ಯಪ್ಪ (೪೪) ಪಿಸ್ತೂಲಿನಿಂದ ಇಬ್ಬರಿಗೆ ಗುಂಡು ಹಾರಿಸಿ ಬಂಧಿತನಾದ ವ್ಯಕ್ತಿ.

ಘಟನೆಯ ವಿವರ: ವಿನಯ್ ಅಯ್ಯಪ್ಪ ನಿನ್ನೆ ರಾತ್ರಿ ಪೆರುಂಬಾಡಿ ತಪಾಸಣಾ ಕೇಂದ್ರದ ಬಳಿಯ ಕೂರ್ಗ್ ಗೇಟ್ ಹೊಟೇಲ್‌ಗೆ ಆಗಮಿಸಿ ಉಪಹಾರ ಸೇವಿಸಿ ಮರಳಿದ್ದು, ತನ್ನ ಮಹೇಂದ್ರ ಬೊಲೇರೋ ಜೀಪ್ (ಕೆಎ ೧೨ ಜೆಡ್ ೪೪೧೪)ನಲ್ಲಿ ಮನೆಗೆ ಹಿಂತಿರುಗುವ ಸಂದರ್ಭ ರಾತ್ರಿ ಸುಮಾರು ೧೦ ಗಂಟೆಗೆ ದ್ವಿತೀಯ ಪೆರುಂಬಾಡಿ (ಬಾಳುಗೋಡು) ಮುಖ್ಯರಸ್ತೆ ಬದಿಯಲ್ಲಿರುವ ಅಯ್ಯಪ್ಪ ದೇಗುಲದ ಮುಂದೆ ಜೀಪನ್ನು ನಿಲ್ಲಿಸಿದ್ದು, ದೇಗುಲ ಮುಂದೆ ನಿಂತು ಮೂತ್ರ ವಿಸರ್ಜನೆಗೆ ಮುಂದಾಗಿದ್ದಾನೆ ಎನ್ನಲಾಗಿದೆ. ಈ ವೇಳೆ ದೇಗುಲದ ಆವರಣದ ಸನಿಹದ ಕಾಫಿಯ ಕಣದಲ್ಲಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ. ಪೆರುಂಬಾಡಿ ಗ್ರಾಮದ ನಿವಾಸಿ ಕೆ.ಬಿ. ಹರೀಶ್ ದೇಗುಲದ ಮುಂದೆ ಮೂತ್ರ ವಿಸರ್ಜನೆ ಮಾಡುವುದು ತಪ್ಪು. ಸನಿಹದಲ್ಲಿ ಶೌಚಾಲಯವಿದೆ ಅಲ್ಲಿಗೆ ತೆರಳಿ ಎಂದು ವಿನಯ್ ಅಯ್ಯಪ್ಪಗೆ ಹೇಳಿದ್ದು, ಪಾನಮತ್ತನಾಗಿದ್ದ ವಿನಯ್ ಅಯ್ಯಪ್ಪ ಅವಾಚ್ಯ ಶಬ್ಧಗಳಿಂದ ಹರೀಶ್‌ನನ್ನು ನಿಂದಿಸಿದ್ದಾನೆ.

ಹರೀಶ್ ಮತ್ತು ವಿನಯ್ ಅಯ್ಯಪ್ಪ ನಡುವೆ ಜಗಳವಾಗಿದೆ. ಈ ವೇಳೆ ದಿಢೀರನೆ ಜೀಪಿನಲ್ಲಿದ್ದ ತನ್ನ ಪಿಸ್ತೂಲು ಕೈಗೆತ್ತಿಕೊಂಡ ವಿನಯ್ ಅಯ್ಯಪ್ಪ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಕೆ ಹಾಕಿದ್ದಾನೆ. ಇದನ್ನು ಗಮನಿಸಿದ ಅಲ್ಲೇ ಇದ್ದ ದಿನಸಿ ಅಂಗಡಿಯ ಮಾಲೀಕ ಜೋಸೆಫ್ ಎಂಬವರು ಹರೀಶ್ ಅವರ ಪತ್ನಿಗೆ ಮಾಹಿತಿ ನೀಡಿದ್ದು, ಹರೀಶ್‌ನ ಪತ್ನಿ ಮತ್ತು ಕೇರಳದಿಂದ ಕೆಲದಿನಗಳ ಹಿಂದೆ ಮಗಳ ಮನೆಗೆ ಆಗಮಿಸಿದ್ದ ಮಾವ ಬಾಲಕೃಷ್ಣ ಹಾಗೂ ಸನಿಹದ ನಿವಾಸಿ ಹರೀಶ್ ಕುಟ್ಟಿ ಎಂಬವರು ಗಳು ಆಗಮಿಸಿದ್ದಾರೆ. ಆರೋಪಿತನ ಕೈಯಲ್ಲಿದ್ದ ಪಿಸ್ತೂಲ್ ಕಸಿಯಲು ಪ್ರಯತ್ನಿಸುವ ವೇಳೆ ಆರೋಪಿ ಗುಂಡು ಹಾರಿಸಿದ್ದು, ಪರಿಣಾಮ ಆಟೋ ಚಾಲಕ ಹರೀಶ್ ಕುಟ್ಟಿ (೨೯) ಅವರ ಎಡಕಾಲಿನ ತೊಡೆಯ ಭಾಗಕ್ಕೆ ಗುಂಡು ತಗುಲಿದೆ. ಹರೀಶ್ ಅವರ ಮಾವ ಕೆ.ಕೆ. ಬಾಲಕೃಷ್ಣ (೬೫) ಅವರ ಎಡಗೈಗೆ ಗುಂಡು ಬಿದ್ದಿದೆ.

ಘಟನೆ ನಡೆಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಘಟನೆಯ ಕುರಿತು ಗ್ರಾಮಸ್ಥರು ಪೊಲೀಸ್ ೧೧೨ಗೆ ಕರೆ ಮಾಡಿದ್ದಾರೆ. ತಕ್ಷಣವೇ ವೀರಾಜಪೇಟೆ ನಗರ ಠಾಣೆಗೆ ಸುದ್ದಿ ಮುಟ್ಟಿಸಲಾಗಿ ವೀರಾಜಪೇಟೆ ನಗರ ಠಾಣಾಧಿಕಾರಿ ಜಗದೀಶ್ ಧೂಳ್ ಶೆಟ್ಟಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ

(ಮೊದಲ ಪುಟದಿಂದ) ಆರೋಪಿಯನ್ನು ಬಂಧಿಸಿದ್ದಾರೆ ಕೃತ್ಯಕ್ಕೆ ಬಳಸಿದ ಪಿಸ್ತೂಲು ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಗಾಯಾಳುಗಳು ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾರೆ. ಆರೋಪಿ ವಿನಯ್ ಅಯ್ಯಪ್ಪ ಮೇಲೆ ಅಂಗಡಿ ಮಾಲೀಕ ಪಿ.ವಿ. ಜೊಸೇಫ್ ಅವರು ನೀಡಿರುವ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಈ ನಡುವೆ ವಿನಯ್ ಅಯ್ಯಪ್ಪ, ಗ್ರಾಮಸ್ಥರು ಗುಂಪು ಕಟ್ಟಿಕೊಂಡು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

-ಕಿಶೋರ್ ಕುಮಾರ್ ಶೆಟ್ಟಿ