ಮಡಿಕೇರಿ, ಜ. ೨೧: ನಗರದ ರೇಸ್ಕೋರ್ಸ್ ರಸ್ತೆ ಮೂಲಕ ಹರಿಯುವ ರಾಜ ಕಾಲುವೆಯಲ್ಲಿ ಮಳೆ ನೀರು ಚರಂಡಿ ಕಾಮಗಾರಿ ಆರಂಭಗೊAಡಿದ್ದು, ಇದರಿಂದ ನೀರು ಸರಾಗವಾಗಿ ಹರಿದು ಮಳೆಗಾಲದಲ್ಲಿ ಎದುರಾಗಬಹುದಾದ ಸಮಸ್ಯೆಗಳು ಕಡಿಮೆಯಾಗಲಿವೆ.
ಕಳೆದ ವಾರ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೂಮಿಪೂಜೆ ನೆರವೇರಿಸಿದ್ದು, ಇಂದಿನಿAದ ಕಾಮಗಾರಿ ಆರಂಭವಾಗಿದೆ. ಎಸ್.ಎಫ್.ಸಿ. ಯೋಜನೆಯಡಿಯಲ್ಲಿ ಬಿಡುಗಡೆಯಾದ ರೂ. ೧ ಕೋಟಿ ವೆಚ್ಚದಲ್ಲಿ ಚರಂಡಿ ಕಾಮಗಾರಿ ನಡೆಯಲಿದೆ.
ನಗರದ ವಿವಿಧ ಕಡೆಗಳಿಂದ ಹರಿಯುವ ಈ ಕಾಲುವೆಗೆ ತ್ಯಾಜ್ಯಗಳು ಸೇರಿ ಇದೀಗ ಕಲುಷಿತಗೊಂಡಿದೆ. ಅದಲ್ಲದೆ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲಾಗದೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುತಿತ್ತು. ಜೊತೆಗೆ ಮುಖ್ಯರಸ್ತೆಯೂ ಹಾಳಾಗುತ್ತಿತ್ತು. ಇದನ್ನು ಮನಗಂಡು ಕಾಲುವೆಯೊಳಗೆ ಮಳೆ ನೀರು ಚರಂಡಿ ಹಾಗೂ ತಡೆಗೋಡೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಕಾಲುವೆಯ ೭೫ ಮೀಟರ್ ಉದ್ದದ ೩.೫ ಮೀಟರ್ ಅಗಲದ ತನಕ ತಳಪಾಯದಲ್ಲಿ ಕಲ್ಲು, ಮಣ್ಣು ತುಂಬಿ ಕಾಂಕ್ರಿಟ್ ಹಾಕಿ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲಾಗುತ್ತದೆ. ಎರಡು ಬದಿಗಳಲ್ಲಿಯೂ ತಡೆಗೋಡೆ ಕೂಡ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಕಾಲುವೆಯಲ್ಲಿ ತುಂಬಿದ್ದ ಮಣ್ಣನ್ನು ಹಿಟಾಚಿ ಮೂಲಕ ತೆಗೆಯುವ ಕೆಲಸ ಮಾಡಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಇಂದಿರಾ ಕ್ಯಾಂಟಿನ್ ಮುಂಭಾಗದಲ್ಲಿ ಕೆಲ ಮೀಟರ್ ಕಾಂಕ್ರಿಟ್ ಚರಂಡಿಯನ್ನು ತೆಗೆದು ಸರಾಗವಾಗಿ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸ್ವಲ್ಪ ದೂರ ನೀರು ಹರಿದು ಮತ್ತೇ ಹರಿಯುವಿಕೆಗೆ ತೊಡಕಾಗಿ ನೀರು ನಿಲ್ಲುತಿತ್ತು. ಇದು ಸಮಸ್ಯೆಗೆ ಕಾರಣವಾಗಿತ್ತು. ಈ ಹಿನ್ನೆಲೆ ಕಾಂಕ್ರಿಟ್ ಚರಂಡಿ ಕಾಮಗಾರಿ ಯೋಜನೆ ರೂಪಿಸಲಾಗಿದೆ. ಆದರೆ, ಕಾಲುವೆ ಇನ್ನಷ್ಟು ದೂರ ಹರಿಯುವುದರಿಂದ ಪೂರ್ಣ ಪ್ರಮಾಣದಲ್ಲಿ ಯೋಜನೆ ವಿಸ್ತರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.