ಸೋಮವಾರಪೇಟೆ, ಜ. ೨೧: ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದ ಮಂದಿಗೆ ಪಟ್ಟಣ ಪೊಲೀಸರು ದಂಡ ವಿಧಿಸುತ್ತಿದ್ದಾರೆ.
ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವ ಬಗ್ಗೆ ವ್ಯಾಪಕ ಪ್ರಚಾರ ನಡೆಸುತ್ತಿದ್ದರೂ ಕೆಲ ಸಾರ್ವಜನಿಕರು ಮಾಸ್ಕ್ ಧರಿಸುತ್ತಿಲ್ಲ. ಇನ್ನು ಕೆಲವರು ಗಲ್ಲಕ್ಕೆ ಮಾಸ್ಕ್ ಹಾಕುತ್ತಿದ್ದು, ಪೊಲೀಸರನ್ನು ಕಂಡಾಗ ಮಾತ್ರ ಬಾಯಿ ಮತ್ತು ಮೂಗು ಮುಚ್ಚಿಕೊಳ್ಳುತ್ತಿದ್ದಾರೆ.
ಮೊನ್ನೆ ನಡೆದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಸಾರ್ವಜನಿಕರು ಸಮರ್ಪಕವಾಗಿ ಮಾಸ್ಕ್ ಧರಿಸದ ಬಗ್ಗೆ ಚರ್ಚೆಯಾಗಿದ್ದು, ಯಾವುದೇ ಮುಲಾಜಿಗೆ ಒಳಗಾಗದೇ ಪೊಲೀಸರು ದಂಡ ವಿಧಿಸಬೇಕು. ಆ ಮೂಲಕ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಅವರು ಸೂಚನೆ ನೀಡಿದ್ದರು.
ಇದೀಗ ಪಟ್ಟಣ ವ್ಯಾಪ್ತಿಯಲ್ಲಿ ಬೀಟ್ ನಡೆಸುತ್ತಿರುವ ಪೊಲೀಸರು ಮಾಸ್ಕ್ ಧರಿಸದ ಮಂದಿಗೆ ದಂಡ ವಿಧಿಸುವ ಮೂಲಕ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.