ನಾಪೋಕ್ಲು, ಜ. ೨೧: ಕಾರ್ಮಿಕರ ಸಮಸ್ಯೆ, ಹೆಚ್ಚಿದ ಕೂಲಿಯಿಂದ ಕಾಫಿ ಕುಯ್ಯುವದೇ ಕಷ್ಟಕರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟಪಟ್ಟು ಕೊಯ್ಲು ಮಾಡಿ ಇಟ್ಟಿದ್ದ ೫೮ ಚೀಲ ಹಸಿ ಕಾಫಿಯನ್ನು ಕಾಡಾನೆಗಳು ಮತ್ತೇ ಕಾಫಿ ತೋಟಕ್ಕೆ ಸುರಿದು ನಷ್ಟಪಡಿಸಿದ ಘಟನೆ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಟ್ಟೀರ ಸುನಿತಾ ಅವರ ಕಾಫಿ ತೋಟದಲ್ಲಿ ಕುಯ್ದಿರಿಸಿದ ಕಾಫಿಯನ್ನು ಕಾಡಾನೆಗಳು ಚೆಲ್ಲಾಪಿಲ್ಲಿ ಮಾಡಿ ನಷ್ಟ ಉಂಟು ಮಾಡಿರುವದಾಗಿ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಾಲಡಿ ಗ್ರಾಮ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆಗಳ ಹಿಂಡು ಇದ್ದು, ಬೆಳೆಗಳನ್ನು ನಿರಂತರವಾಗಿ ನಷ್ಟಪಡಿಸುತ್ತಿವೆ. ಇವಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಈ ವ್ಯಾಪ್ತಿಯ ಗ್ರಾಮಸ್ಥರು ಮನವಿ ಮಾಡಿದ್ದಾರೆ.
-ಪಿ.ವಿ.ಪ್ರಭಾಕರ್