ಕೂಡಿಗೆ, ಜ. ೨೨: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಹೆಬ್ಬಾಲೆ ಸಂತೆ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ತಮ್ಮ ವ್ಯಾಪ್ತಿಯ ಚೆಸ್ಕಾಂ ಅಧಿಕಾರಿ ವರ್ಗದವರು ವಿದ್ಯುತ್ ಸಂಪರ್ಕವನ್ನು ಮನಬಂದAತೆ ಕಡಿತಗೊಳಿಸುವುದು ಅಲ್ಲದೆ ಅಕ್ರಮ ಸಕ್ರಮ ಯೋಜನೆ ಕೊಳವೆ ಬಾವಿಯಿಂದ ನೀರಿನ ಸಂಪರ್ಕಕ್ಕೆ ನೀಡಲಾಗಿರುವ ವಿದ್ಯುತ್ ಸಂಪರ್ಕವನ್ನು ರೈತರಿಗೆ ತಿಳಿಸದೆ ಕಡಿತಗೊಳಿಸುವುದು; ಸಾರ್ವಜನಿಕರಿಗೆ ಅನುಕೂಲವಾಗುವ ಮುಖ್ಯ ಕೆಲಸವನ್ನು ಕೈಗೊಳ್ಳುವ ಬದಲು ಖಾಸಗಿ ಕಾರ್ಯಗಳಿಗೆ ಮುಂದಾಗುತ್ತಿದ್ದಾರೆ ಎಂದು ಅಧ್ಯಕ್ಷ ಸೇರಿದಂತೆ ಸದಸ್ಯರು ಮತ್ತು ಗ್ರಾಮಸ್ಥರು ವಿದ್ಯುತ್ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕಿರಿಯ ಇಂಜಿನಿಯರ್ ರಾಣಿ ಅವರು ಪ್ರತಿಕ್ರಿಯಿಸಿ ಸರಕಾರ ನಿಯಮನುಸಾರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಮುಂದಿನ ದಿನಗಳಲ್ಲಿ ವಿದ್ಯುತ್ ಲೈನ್ ಮತ್ತು ಕಂಬಗಳ ಜೋಡಣೆ ಸೇರಿದಂತೆ ಗ್ರಾಮದ ಎಲ್ಲಾ ಕೆಲಸವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರಲ್ಲದೆ, ಸರಕಾರದ ಹೊಸ ಯೋಜನೆಯಾದ ಬೆಳಕು ಯೋಜನೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಕಾಸರಗೋಡು ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ರಸ್ತೆ ವ್ಯವಸ್ಥೆ ಬಗ್ಗೆ ತಿಳಿಸಿದರೂ, ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಗ್ರಾಮಸ್ಥರಾದ ಗಣೇಶ್, ಮಹೇಶ್, ಕಿರಣ್ ಸಭೆಗೆ ತಿಳಿಸುತ್ತಾ, ನೀರಾವರಿ ಇಲಾಖೆಯ ಈ ಗ್ರಾಮದ ರಸ್ತೆಯು ಜಿಲ್ಲಾ ಪಂಚಾಯಿತಿಗೆ ಸೇರುತ್ತದೆ, ಎಂದರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಈ ಗ್ರಾಮದ ರಸ್ತೆಯು ನೀರಾವರಿ ಇಲಾಖೆಗೆ ಸೇರುತ್ತವೆ ಎಂದು ಹೇಳಿ ಹತ್ತು ವರ್ಷಗಳು ಕಳೆದರೂ ಇದುವರೆಗೂ ಯಾವ ರಸ್ತೆಯ ಕಾಮಗಾರಿಗಳನ್ನು ಕೈಗೊಳ್ಳದೆ ಈ ರಸ್ತೆಯಗಳಲ್ಲಿ ಶಾಲಾ ವಿದ್ಯಾರ್ಥಿಗಳ ವಾಹನವು ಸಹ ಚಾಲನೆ ಮಾಡಲು ಸಾಧ್ಯವಾಗದೆ ಅವಘಡಗಳು ಸಂಭವಿಸಿವೆ. ಇದನ್ನು ಸರಿಪಡಿಸುವಂತೆ ಸಭೆಯಲ್ಲಿ ಗ್ರಾಮದ ರೈತರು ಒತ್ತಾಯ ಮಾಡಿದರು.
ಇದಕ್ಕೆ ತಾಲೂಕು ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಯಾವ ಇಲಾಖೆಯವರು ಕೆಲಸವನ್ನು ನಿರ್ವಹಿಸಬಹುದು ಎಂದು ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನು ನೀಡಿದರು.
ಸಭೆಯಲ್ಲಿ ಕುಡಿಯುವ ನೀರು ಮತ್ತು ರಸ್ತೆಗಳಿಗೆ ಸಂಬAಧಿಸಿದ ಅನೇಕ ಗ್ರಾಮಸ್ಥರು ಚರ್ಚೆಗಳನ್ನು ನಡೆಸಿದರು ಮುಂದಿನ ದಿನಗಳಲ್ಲಿ ಸರಕಾರದ ಅನುದಾನವನ್ನು ಗ್ರಾಮದ ಪ್ರಗತಿಪರ ಯೋಜನೆಗಳಿಗೆ ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳಲು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಹಾಜರಿದ್ದ ಕೃಷಿ, ತೋಟಗಾರಿಕೆ, ಆಹಾರ ಆರೋಗ್ಯ ಇಲಾಖೆಯ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಯ ಸಮರ್ಪಕವಾದ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ವಿವಿಧ ಯೋಜನೆಗೆ ಫಲಾನುಭವಿಗಳ ಅರ್ಜಿಯನ್ನು ಸ್ವೀಕಾರ ಮಾಡಿದರು. ವಾರ್ಡ್ ಸಭೆಗಳಲ್ಲಿ ಬಂದಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಗೆ ಅನುಮೋದನೆ ಮತ್ತು ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆಗಳು ನಡೆದವು.
ನೋಡೆಲ್ ಅಧಿಕಾರಿಯಾಗಿ ಹೆಬ್ಬಾಲೆ ಪಶು ವೈದ್ಯಾಧಿಕಾರಿ ಡಾ. ಸಂಜೀವಕುಮಾರ್ ಆರ್. ಶಿಂಧೆ ಅಗಮಿಸಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಮಾರಿ ಸೇರಿದಂತೆ ಇಬ್ಬರು ಸದಸ್ಯರುಗಳನ್ನು ಹೊರತುಪಡಿಸಿ ಉಳಿದ ಸದಸ್ಯರು ಹಾಜರಿದ್ದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಸ್ಮ ಸ್ವಾಗತಿಸಿ, ವಂದಿಸಿದರು.
-ಕೆ.ಕೆ. ನಾಗರಾಜಶೆಟ್ಟಿ.