ಕುಶಾಲನಗರ, ಜ. ೨೨: ಕುಶಾಲನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ನಾಪತ್ತೆಯಾಗಿದ್ದಾರೆ.

ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ (೫೧) ಎಂಬವರು ಶುಕ್ರವಾರದಿಂದ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ನಾಪತ್ತೆಯಾದ ಪೊಲೀಸ್ ಅಧಿಕಾರಿ ಸುರೇಶ್ ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಮುಂಭಾಗ ಕರ್ತವ್ಯ ನಿರ್ವಹಿಸಿದ್ದು, ನಂತರ ಮನೆಗೆ ತೆರಳಿದವರು ನಾಪತ್ತೆಯಾಗಿರುವುದಾಗಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಸುರೇಶ್ ಪತ್ನಿ ಶೋಭಾ ದೂರು ದಾಖಲಿಸಿದ್ದಾರೆ. ಎಎಸ್‌ಐ ಸುರೇಶ್ ಕುಶಾಲನಗರದ ಸಂಚಾರಿ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪಟ್ಟಣದ ಸಿದ್ದಯ್ಯ ಪುರಾಣಿಕ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಸುರೇಶ್ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ಶೋಭಾ ಮಾಹಿತಿ ನೀಡಿದ ತಕ್ಷಣ ಕುಶಾಲನಗರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹುಡುಕಾಟದಲ್ಲಿ ತೊಡಗಿದರೂ ಯಾವುದೇ ರೀತಿ ಮಾಹಿತಿ ಲಭ್ಯವಾಗದೆ ನಂತರ ಅವರ ಮೊಬೈಲ್ ಟ್ರ‍್ಯಾಕ್ ಮಾಡಿದ ಸಂದರ್ಭ ಮುಳ್ಳುಸೋಗೆ ತನಕ ತೆರಳಿದ ಮಾಹಿತಿ ಲಭಿಸಿದೆ ಎನ್ನಲಾಗಿದೆ. ನಂತರ ಮೊಬೈಲ್ ‘ಸ್ವಿಚ್ ಆಫ್’ ಆಗಿರೋದು ತಿಳಿದುಬಂದಿದೆ.

ಮಾಹಿತಿ ಲಭ್ಯವಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮಗಳೊಂದಿಗೆ ನೆಲೆಸಿರುವ ಸುರೇಶ ಅವರ ಪತ್ನಿ ಶೋಭಾ ಕುಶಾಲನಗರಕ್ಕೆ ಆಗಮಿಸಿದ್ದು, ಹುಡುಕಾಟದಲ್ಲಿ ತೊಡಗಿದರೂ ಸುಳಿವು ದೊರೆಯದೆ ಕುಶಾಲನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

(ಮೊದಲ ಪುಟದಿಂದ) ತಾ. ೨೦ರಂದು ಪತಿ ಸುರೇಶ್‌ಗೆ ಕರೆ ಮಾಡಿದ ಸಂದರ್ಭ ಲಸಿಕೆ ಪಡೆದಿದ್ದು, ಮೈ-ಕೈ ನೋವಿದೆ ಎಂದಿದ್ದರು. ನಂತರ ರಾತ್ರಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ವಿಶ್ರಾಂತಿ ಪಡೆಯುತ್ತಿರಬಹುದು ಎಂದು ಭಾವಿಸಿ ಸುಮ್ಮನಾದೆ. ಕೆಲ ಸಮಯದ ನಂತರ ಕರೆ ಮಾಡಿದರೂ ಫೋನ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಗಾಬರಿಗೊಂಡು ನನ್ನ ಸಹೋದರಿಗೆ ವಿಷಯ ತಿಳಿಸಿದ್ದೇನೆ. ಅವರು ಮನೆಗೆ ಹೋಗಿ ನೋಡಿದಾಗ ಬೀಗ ಹಾಕಲಾಗಿತ್ತು. ನಂತರ ಲಾಕ್ ಒಡೆದು ನೋಡಿದಾಗ ಮನೆಯಲ್ಲಿ ಸುರೇಶ್ ಇರಲಿಲ್ಲ. ಸಂಬAಧಿಕರನ್ನು, ಸ್ನೇಹಿತರನ್ನು ವಿಚಾರಿಸಿದಾಗ ಯಾರ ಸಂಪರ್ಕದಲ್ಲೂ ಅವರಿರಲಿಲ್ಲ ಎಂದು ಪತ್ನಿ ಶೋಭಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಾಪತ್ತೆಯಾದ ಸುರೇಶ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸ್ವಲ್ಪಕಾಲ ಸೇವೆ ಸಲ್ಲಿಸಿದ್ದು, ನಂತರ ಎಎಸ್‌ಐ ಆಗಿ ಪದೋನ್ನತಿಗೊಂಡು ಕುಶಾಲನಗರ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪ್ರಕರಣದ ಹಿನ್ನೆಲೆಯಲ್ಲಿ ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ ವೃತ್ತ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಸಿಬ್ಬಂದಿಗಳ ತಂಡ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.