ವರದಿ : ಚಂದ್ರಮೋಹನ್ ಕುಶಾಲನಗರ, ಜ. ೨೨ : ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯ ಬಹುತೇಕ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಸರ್ಕಾರದ ಅಂದಾಜು ರೂ. ೫೦ ಕೋಟಿ ಅನುದಾನ ಕಾವೇರಿ ನದಿ ಪಾಲಾದಂತೆ ಗೋಚರಿಸುತ್ತಿದೆ. ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ೨೦೧೨ರಲ್ಲಿ ರೂ. ೪೦ ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಆ ಪ್ರಕಾರ ಯೋಜನೆಯ ಕಾಮಗಾರಿ ೨೦೧೪ರಲ್ಲಿ ಪ್ರಾರಂಭಗೊAಡಿದ್ದು, ಕರ್ನಾಟಕ ರಾಜ್ಯ ಒಳಚರಂಡಿ ಮಂಡಳಿ ಅಧಿಕಾರಿಗಳ ನಿರ್ಲಕ್ಷದಿಂದ ಕಾಮಗಾರಿ ಬಹುತೇಕ ನೆನೆಗುದಿಗೆ ಬಿದ್ದಿದೆ.

ಕಾಮಗಾರಿ ಪ್ರಾರಂಭಗೊAಡು ಎಂಟು ವರ್ಷ ಕಳೆದರೂ ಇನ್ನೂ ಪೂರ್ಣಗೊಳ್ಳದೆ ಕುಶಾಲನಗರ ಪಟ್ಟಣದ ಸ್ವಚ್ಛತೆ ಹಾಗೂ ಕಾವೇರಿ ನದಿಯ ಸಂರಕ್ಷಣೆಯ ಗುರಿ ಹೊತ್ತ ದೂರದೃಷ್ಟಿಯ ಯೋಜನೆ ಇನ್ನು ಲೋಕಾರ್ಪಣೆಯಾಗದೆ ಇರುವುದು ದುರಂತ ಎಂದರೆ ತಪ್ಪಾಗಲಾರದು.

ಯೋಜನೆಯ ಸಂಬAಧ ಕುಶಾಲನಗರ ಪಟ್ಟಣ ಮತ್ತು ಗ್ರಾಮ ವ್ಯಾಪ್ತಿಯ ಬಡಾವಣೆಗಳಲ್ಲಿ ೨೪೪೯ ಸಂಖ್ಯೆಯನ್ನು ಆಳುಗುಂಡಿಗಳ ನಿರ್ಮಾಣ ಮಾಡುವ ಕಾಮಗಾರಿ ಹಲವೆಡೆ ನಡೆದಿದ್ದರೂ ಇದು ಬಹುತೇಕ ಕಡೆ ನಿಯಮಬಾಹಿರವಾಗಿ ನದಿ ತಟಗಳಲ್ಲಿ ನಿರ್ಮಿಸಿರುವುದು ಕಂಡುಬAದಿದೆ.

ನಿಯಮಾನುಸಾರ ನದಿತಟದಲ್ಲಿ ಆಳುಗುಂಡಿಗಳ ನಿರ್ಮಾಣ ಮಾಡುವುದು ನಿರ್ಬಂಧವಾಗಿದ್ದರೂ ಕುಶಾಲನಗರದ ತಾವರೆಕೆರೆ ವ್ಯಾಪ್ತಿಯಿಂದ ಗುಮ್ಮನಕೊಲ್ಲಿ ತನಕ ನದಿಯ ತಟದಲ್ಲಿ ಈ ಕಾಮಗಾರಿ ನಡೆದಿರುವುದು ಕಂಡುಬAದಿದೆ. ನದಿಯ ತಟದಲ್ಲಿ ನೂರು ಅಡಿಗಳಷ್ಟು ಅಂತರ ಕಾಪಾಡದೆ ಎಲ್ಲೆಂದರಲ್ಲಿ ಕಾಮಗಾರಿಗಳು ನಡೆದಿದ್ದು ಇದೀಗ ಮೂರು ವರ್ಷಗಳ ನದಿ ಪ್ರವಾಹದಿಂದ ಬಹುತೇಕ ಆಳು ಗುಂಡಿಗಳು ಕೊಚ್ಚಿಹೋಗಿವೆ.

ಕೆಲವೊಂದು ಕಡೆ ಆಳುಗುಂಡಿಗಳನ್ನು ಮುಚ್ಚಿದ್ದು ಅದರ ಮೇಲೆ ಅಕ್ರಮವಾಗಿ ಕೆಲವು ಇತರೆ ಕಾಮಗಾರಿಗಳು ನಡೆದಿದ್ದು ಕಂಡುಬAದಿದೆ.

ನದಿ ತಟದಲ್ಲಿ ಪ್ರವಾಹ ಮಟ್ಟದ ತನಕ ಯಾವುದೇ ಕಾಮಗಾರಿ ನಡೆಸುವಂತಿಲ್ಲ ಎಂದು ನಿಯಮವಾಗಿದ್ದರೂ ಇಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಒಳಚರಂಡಿಯ ಪ್ರಥಮ ಹಂತದ ಕಾಮಗಾರಿಯ ಗುತ್ತಿಗೆದಾರರು ಯೋಜನೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ನಾಪತ್ತೆಯಾಗಿದ್ದು ಸರ್ಕಾರದ ಕೋಟ್ಯಂತರ ಅನುದಾನ ಬಹುತೇಕ ದುರುಪಯೋಗವಾದಂತೆ ಕಂಡು ಬರುತ್ತಿದೆ.

ನದಿ ಕಲುಷಿತ ತಪ್ಪಿಸುವದರೊಂದಿಗೆ ಪಟ್ಟಣದ ನೈರ್ಮಲ್ಯ ಕಾಪಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಇದೀಗ ಯೋಜನೆಯಿಂದ ಕಾವೇರಿ ನದಿ ನೀರು ಸಂಪೂರ್ಣ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿದೆ. ಅಕ್ರಮವಾಗಿ ಒಳಚರಂಡಿಯಲ್ಲಿ ಕೆಲವೆಡೆ ಶೌಚ ತ್ಯಾಜ್ಯಗಳನ್ನು ಹರಿಸಲಾಗುತ್ತಿದೆ. ಇದು ಕೂಡ ನೇರವಾಗಿ ನದಿಗೆ ಸೇರುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ.

ಕುಶಾಲನಗರ ಒಳಚರಂಡಿ ಕಾಮಗಾರಿ ಬಗ್ಗೆ ಪಟ್ಟಣದ ಪಂಚಾಯಿತಿ ಆಡಳಿತ ಮಂಡಳಿ ಸಭೆಗಳಲ್ಲಿ ಹಲವು ಬಾರಿ ಚರ್ಚೆ ಆಗಿದ್ದರೂ, ಯೋಜನೆಗೆ ಶಾಶ್ವತ ಪರಿಹಾರ ದೊರಕದಿರುವುದು ಸಂಶಯಕ್ಕೆ ಎಡೆಮಾಡಿದೆ.

೩೦ ತಿಂಗಳಲ್ಲಿ ಪೂರ್ಣಗೊಳಿಸಿ ಅನುಷ್ಠಾನಗೊಳಿಸಬೇಕಾಗಿದ ಪ್ರಥಮ ಹಂತದ ಯುಜಿಡಿ ಕಾಮಗಾರಿ ಎಂಟು ವರ್ಷಗಳು ಕಳೆದರೂ ಪೂರ್ಣಗೊಳ್ಳದೆ ಇರುವುದು ನಿಜಕ್ಕೂ ವಿಷಾದನೀಯ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಕುಶಾಲನಗರ ಪಟ್ಟಣ ಮತ್ತು ನೆರೆಯ ಗ್ರಾಮಗಳ ಕಲುಷಿತ ತ್ಯಾಜ್ಯಗಳು ನೇರವಾಗಿ ನದಿಗೆ ಹರಿಯುವ ಮೂಲಕ ನದಿಯ ನೀರನ್ನು ಕಲುಷಿತಗೊಳಿಸುತ್ತಿರುವುದು ಪ್ರಸಕ್ತ ಬೆಳವಣಿಗೆಯಾಗಿದೆ.

(ಮೊದಲ ಪುಟದಿಂದ) ಬಹುನಿರೀಕ್ಷಿತ ಕುಶಾಲನಗರ ಒಳಚರಂಡಿ ಕಾಮಗಾರಿ ಯೋಜನೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕೆಂದು ಸ್ಥಳೀಯರ ಒತ್ತಾಸೆ ಆಗಿದೆ. ಆದರೆ ಇದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿರುವುದು ಚರ್ಚೆಗೆ ಗ್ರಾಸವಾಗಿದೆ.

ಯೋಜನೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕೆಂದು ಈ ಹಿಂದೆ ಸ್ಥಳೀಯ ಸಂಘ-ಸAಸ್ಥೆಗಳು ಉಪವಾಸ ಸತ್ಯಾಗ್ರಹ ಮತ್ತಿತರ ಹೋರಾಟಗಳು ನಡೆಸಿ ರುವುದನ್ನು ಇಲ್ಲಿ ಸ್ಮರಿಸಬಹುದು. ಆದರೆ ಇದೀಗ ಯೋಜನೆಯ ಎರಡನೇ ಹಂತದ ಅಂದಾಜು ರೂ. ೧೮ ಕೋಟಿ ವೆಚ್ಚದಲ್ಲಿ ಪ್ರಾರಂಭ ಗೊಂಡಿದ್ದು, ಕೂಡ ನಿಧಾನಗತಿಯಲ್ಲಿ ಸಾಗುತ್ತಿದೆ.

೨೦೨೧ರ ಡಿಸೆಂಬರ್ ಅಂತ್ಯದೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದ ಅಧಿಕಾರಿಗಳು ಕಾಮಗಾರಿಯನ್ನು ನಿಧಾನಗತಿಯಲ್ಲಿ ನಡೆಸುತ್ತಿದ್ದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎನ್ನುತ್ತಾರೆ ನಾಗರಿಕರು. ಕೂಡಲೇ ಯೋಜನೆಯನ್ನು ಪೂರ್ಣ ಗೊಳಿಸಲು ಕೂಡಲೇ ಅಧಿಕಾರಿಗಳು ಕಾರ್ಯತತ್ಪರ ರಾಗಬೇಕು, ಆ ಮೂಲಕ ನದಿ ಕಲುಷಿತ ತಪ್ಪಿಸುವುದರೊಂದಿಗೆ ಪಟ್ಟಣದ ಸ್ವಚ್ಛತೆ ಕಾಪಾಡುವ ಪ್ರತಿಷ್ಠಿತ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂಬುದು ಎಲ್ಲರ ಆಗ್ರಹವಾಗಿದೆ.