*ಗೋಣಿಕೊಪ್ಪಲು, ಜ. ೨೨: ೭ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯ ೬ನೇ ವರ್ಷದ ‘ಗೋಣಿಕೊಪ್ಪಲು ಪ್ರೀಮಿಯರ್ ಲೀಗ್ ಕ್ರಿಕೆಟ್’ ಪಂದ್ಯಾಟ ನಡೆಸಿ ಕ್ರಿಕೆಟ್ ಆಸಕ್ತರ ಮನತಣಿಸಲು ಸಜ್ಜಾಗಿದೆ.

ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ. ೨೪, ೨೫ ಮತ್ತು ೨೬ರ ಈ ಮೂರು ದಿನಗಳು ಮೈದಾನದಲ್ಲಿ ಕ್ರಿಕೆಟ್ ಕಲರವ ನಡೆಯಲಿದೆ. ಪಂದ್ಯಾಟದಲ್ಲಿ ೮ ತಂಡಗಳು ಭಾಗವಹಿಸಲಿದ್ದು, ಈಗಾಗಲೇ ತಂಡದ ಆಟಗಾರರನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡ ಲಾಗಿದೆ. ಇಂಡಿಯನ್ ಪ್ರಿಮಿಯರ್ ಲೀಗ್‌ನಂತೆ ೮ ತಂಡಗಳಿಗೂ ರಾಯಲ್ ಚಾಲೆಂರ‍್ಸ್ ಬೆಂಗಳೂರು, ಚೆನೈ ಸೂಪರ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸ್ ಹೈದರಾ ಬಾದ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಎಂದು ಹೆಸರಿಡಲಾಗಿದೆ. ನುರಿತ ಆಟಗಾರರು ತಂಡದಲ್ಲಿ ಇದ್ದು, ಆಟದ ಕುತೂ ಹಲದ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ಜಿ.ಪಿ.ಎಲ್. ಲೀಗ್ ತಣಿಸಲಿದೆ.

ಕ್ರಿಕೆಟ್ ಉತ್ಸವ ಹಿನ್ನೆಲೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನವನ್ನು ಶುಚಿಗೊಳಿಸಿ, ಸುಣ್ಣಬಣ್ಣ ಬಳಿಯ ಲಾಗಿದೆ. ಕ್ರಿಕೆಟ್ ಉತ್ಸವ ಪ್ರಾರಂಭದ ದಿನದಂದು ತಳಿರು ತೋರಣಗಳಿಂದ ಸಿಂಗರಿಸಲಾ ಗುವುದು. ಅಲ್ಲದೇ ತಂಡದ ಆಟಗಾರರನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿ ಗೌರವಿಸಲಾಗುವುದು ಎಂದು ೭ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಸಂಸ್ಥೆಯ ಪ್ರಮುಖರು ಹಾಗೂ ಉದ್ಯಮಿಗಳು ೮ ತಂಡವನ್ನು ಖರೀದಿ ಮಾಡಿ ತಂಡವನ್ನು ಮುನ್ನೆಡೆಸಲಿದ್ದಾರೆ. ೭ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಸಿಂಗಿ, ಉಪಾಧ್ಯಕ್ಷ ಅಪ್ಪಿ, ಸ್ಥಾಪಕ ಅಧ್ಯಕ್ಷ ಶರ್ಫುದ್ದೀನ್, ಪ್ರಧಾನ ಕಾರ್ಯದರ್ಶಿ ಶಮ್ಮು, ಕೋಶಾಧಿಕಾರಿ ಸ್ವಾಮಿ, ನಿರ್ದೇಶಕರುಗಳಾದ ಬಷೀರ್, ಶಾನೀಫ್, ಫಾಸಿಲ್, ಗಣೇಶ್ ಮಂಜು ಮತ್ತು ಇನ್ನಿತರ ಪದಾಧಿಕಾರಿಗಳ ನಿರ್ವಹಣೆಯಲ್ಲಿ ಪಂದ್ಯಾಟ ನಡೆಯಲಿದೆ.