ಮಡಿಕೇರಿ, ಜ. ೨೨: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಭಾಷೆಯನ್ನು ಮೂರನೇ ಭಾಷೆಯಾಗಿ ಅಳವಡಿಸುವ ನಿಟ್ಟಿನಲ್ಲಿ ಹಾಗೂ ಕೊಡವ ಭಾಷೆಯನ್ನು ಉಳಿಸಿ ಬೆಳೆಸಲು ಮಕ್ಕಳಿಗೆ ಕೊಡವ ಭಾಷೆಯಲ್ಲಿ ವಿದ್ಯಾಭ್ಯಾಸ ಕಲಿಯಲು ಪಠ್ಯ ಪುಸ್ತಕ ತಯಾರಿಸಿದೆ. ಈಗಾಗಲೇ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಶಿಕ್ಷಕರಿಗೆ ಕೊಡವ ಪಾಠ ಪುಸ್ತಕದ ಬಗ್ಗೆ ತರಬೇತಿ ಕಾರ್ಯಾಗಾರವನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗಿದೆ. ಈ ಕಾರ್ಯಾಗಾರಕ್ಕೆ ೨೦ ಶಾಲೆಯ ಶಿಕ್ಷಕರು ಸ್ವಇಚ್ಛೆಯಿಂದ ಕಲಿಸಲು ಮುಂದಾಗಿದ್ದಾರೆ. ಇನ್ನೂ ಕೊಡಗಿನಲ್ಲಿರುವ ಯಾವುದಾದರೂ ಶಾಲೆಗಳಲ್ಲಿ ಸ್ವಇಚ್ಛೆಯಿಂದ ಕಲಿಯಲು ವಿದ್ಯಾರ್ಥಿಗಳು/ ಶಾಲೆಗಳು ಮುಂದಾದಲ್ಲಿ ಶಿಕ್ಷಕರಿಗೆ ಕಾರ್ಯಾಗಾರ ಮಾಡಿದ ವೀಡಿಯೋವನ್ನು ಹಾಗೂ ಪಠ್ಯ ಪುಸ್ತಕದ ಪ್ರತಿಯನ್ನು ಶಾಲೆಗೆ ನೀಡಲಾಗುವುದು. ಕೊಡವ ಭಾಷೆಯನ್ನು ಕಲಿತ ಮಕ್ಕಳಿಗೆ ಅಕಾಡೆಮಿ ವತಿಯಿಂದ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.