ಕಣಿವೆ, ಜ. ೨೦ : ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರ ಬಳಿ ನಡೆಯುತ್ತಿರುವ ಕಲ್ಲು ಕೋರೆಯು ಹಾರಂಗಿ ಜಲಾಶಯದ ಸಮೀಪವಿದ್ದು, ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷೆ ಇಂದಿರಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸುಂದರನಗರ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಸ್ಥಳದಲ್ಲಿ ಸ್ಫೋಟ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಹಾರಂಗಿ ಜಲಾಶಯದ ಸಮೀಪವೇ ಗಣಿಗಾರಿಕೆ ನಡೆಸುತ್ತಿದ್ದು, ಇದರಿಂದ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಗಣಿಗಾರಿಕೆಯನ್ನು ಸ್ಥಗಿತಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ. ಶಂಷುದ್ಧೀನ್ ಆಗ್ರಹಿಸಿದರು. ಇದಕ್ಕೆ ಸದಸ್ಯರಾದ ಫಿಲೋಮಿನಾ, ಪಾರ್ವತಿ ಧರ್ಮಪ್ಪ, ಗಿರೀಶ್ ಹಾಗೂ ಮಣಿರವರು ಸಾತ್ ನೀಡಿದರು. ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು.

ಸರ್ಕಾರದ ವಸತಿ ಯೋಜನೆಯ ಪಟ್ಟಿಯನ್ನು ಅಂತಿಮಗೊಳಿಸುವ ಬಗ್ಗೆ ಪಿಡಿಓ ಸಂತೋಷ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಬಸವ ವಸತಿ ಯೋಜನೆಯಡಿ ೩೦ ಮನೆಗಳು ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ೧೦ ಮನೆಗಳು ಬಂದಿದ್ದು, ಆದಷ್ಟು ಬೇಗನೇ ಸದಸ್ಯರು ಅರ್ಹ ಫಲಾನುಭವಿಗಳ ಹೆಸರನ್ನು ನೀಡಬೇಕು ಎಂದು ಸಭೆಗೆ ಮಾಹಿತಿ ನೀಡಿದ ಅವರು, ಸಾಮಾನ್ಯ ಮೀಸಲಾತಿಗೆ ೨೯ ಮನೆಗಳು, ಅಲ್ಪಸಂಖ್ಯಾತರಿಗೆ ೪ ಮನೆಗಳು, ಪರಿಶಿಷ್ಟ ಜಾತಿಗೆ ೭ ಮನೆಗಳು ಮತ್ತು ಪರಿಶಿಷ್ಟ ಪಂಗಡಕ್ಕೆ ೩ ಮನೆಗಳಿವೆ ಎಂದು ತಿಳಿಸಿದರು.

ಶೇ. ೨೫ ರ ನಿಧಿಯಲ್ಲಿ ಹಾಗೂ ಶೇ. ೩ ರ ನಿಧಿಯಲ್ಲಿ ಪ.ಜಾತಿ ಮತ್ತು ಪ.ಪಂ ವರ್ಗದವರಿಗೆ ಹಾಗೂ ವಿಶೇಷಚೇತನರಿಗೆ ಹೊಲಿಗೆ ಯಂತ್ರ ನೀಡುವ ಬಗ್ಗೆ ಚರ್ಚೆಗಳು ನಡೆದವು. ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಿ ಹೆಸರನ್ನು ನೀಡುವಂತೆ ಪಿಡಿಓ ಮನವಿ ಮಾಡಿದರು.

ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸುತ್ತಮುತ್ತಲಲ್ಲಿ ಬೀದಿನಾಯಿಗಳಿಂದ ಸಾರ್ವಜನಿಕರು ಕಡಿತಕ್ಕೊಳಗಾದ ಘಟನೆಗಳು ನಡೆಯುತ್ತಿವೆ. ಇದನ್ನು ಪಂಚಾಯಿತಿ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಶಂಷುದ್ಧೀನ್ ಆಗ್ರಹಿಸಿದರು. ಇದಕ್ಕೆ ಸದಸ್ಯ ಗಿರೀಶ್ ಧ್ವನಿಗೂಡಿಸಿದರು.

ಚಿಕ್ಕತ್ತೂರಿನಲ್ಲಿ ಮೈದಾನಕ್ಕಾಗಿ ಜಾಗ ಮೀಸಲಿಡಲು ಪತ್ರ ವ್ಯವಹಾರ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ನೀರು, ನೈರ್ಮಲ್ಯ ಮತ್ತು ¸ಚ್ಛತೆ ಬಗ್ಗೆ ಚರ್ಚೆಗಳು ನಡೆದವು.

ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಬಾಸ್ಕರ ನಾಯಕ್, ಸದಸ್ಯರಾದ ಚಂದ್ರು ಮೂಡ್ಲಿಗೌಡ, ಕೆ.ಕೆ. ಭೋಗಪ್ಪ, ಈರಯ್ಯ, ಆಶಾ ವೆಂಕಟೇಶ್, ದೀಪಾ, ಹರೀಶ್, ಜ್ಯೋತಿ, ಖತೀಜಾ, ಭಾಗ್ಯ ಇದ್ದರು.

(ವರದಿ : ಕೆ.ಎಸ್.ಮೂರ್ತಿ)