ನಾಪೋಕ್ಲು, ಜ. ೨೧: ಕಾರ್ಮಿಕರು ಮತ್ತು ಬೆಳೆಗಾರರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಾರ್ಮಿಕರಿಲ್ಲದೆ ಬೆಳೆಗಾರರಿಲ್ಲ. ಬೆಳೆಗಾರರಿಲ್ಲದೆ ಕಾರ್ಮಿಕರಿಲ್ಲ ಎಂಬ ಕಾಲವೊಂದಿತ್ತು. ಆದರೆ ಅದು ಈಗ ಬುಡಮೇಲಾಗಿದೆ. ಅಸ್ಸಾಂ ಕಾರ್ಮಿಕರಂತೂ ಪಡೆದ ಸಾಲದ ಹಣ ಹಾಗೂ ತೋಟ ಕೆಲಸದ ಸಾಮಗ್ರಿಗಳ ಸಹಿತ ನಾಪತ್ತೆಯಾಗುತ್ತಿದ್ದಾರೆ

ಕಾಫಿ ಕುಯ್ಲಿನ ಸಮಯಕ್ಕೆ ಬೇಕು ಎಂದು ವರ್ಷವಿಡೀ ಕೆಲಸವಿಲ್ಲದಿದ್ದರೂ, ಹಣವಿಲ್ಲದಿದ್ದರೂ ಸಾಲ ಮಾಡಿ ಅವರಿಗೆ ಕೂಲಿ ನೀಡಿ ಸಾಕಿ ಸಲಹಿದ ಕಾರ್ಮಿಕರು, ಅದರಲ್ಲೂ ಬಹುಪಾಲು ಅಸ್ಸಾಂ ಕಾರ್ಮಿಕರು ಕಾಫಿ ಕುಯ್ಲು ಆರಂಭಗೊಳ್ಳುತ್ತಿದ್ದAತೆ ಹೆಚ್ಚಿನ ಹಣದಾಸೆಗೆ ಬಲಿಯಾಗಿ ತಮಗೆ ಆಸರೆಯಾಗಿದ್ದ ಮಾಲೀಕರಿಗೆ ಸುಳ್ಳು ನೆಪ ಹೇಳಿ ಬೇರೆಡೆಗೆ ವಲಸೆ ಹೋಗುತ್ತಿದ್ದಾರೆ. ಇವರನ್ನು ನಂಬಿದ ಬೆಳೆಗಾರರಿಗೆ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುಪಾಲು ಅಸ್ಸಾಂ ಕಾರ್ಮಿಕರು ಹೇಳದೆ ಕೇಳದೆ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಸಾಲ ಪಡೆದು ಮರು ಪಾವತಿಸದೆ ತೋಟದಲ್ಲಿನ ಕೆಲವು ವಸ್ತುಗಳನ್ನು ರಾತೋರಾತ್ರಿ ಒಯ್ದು ನಾಪತ್ತೆಯಾಗುತ್ತಿದ್ದಾರೆ.

ನಾಲ್ಕುನಾಡಿನಲ್ಲಿ ಹೆಚ್ಚಿನ ಸಮಸ್ಯೆ: ವಲಸೆ ಕಾರ್ಮಿಕರ ಸಮಸ್ಯೆ ನಾಲ್ಕುನಾಡು ವಿಭಾಗದಲ್ಲಿ ಹೆಚ್ಚು ಎನ್ನುತ್ತಿದ್ದಾರೆ ಸ್ಥಳೀಯ ಕಾಫಿ ಬೆಳೆಗಾರ ಹಾಗೂ ಭಾರತೀಯ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ. ದಕ್ಷಿಣ ಕೊಡಗಿನಲ್ಲಿ ಕಾಫಿ ಕುಯ್ಯಲು ಕೆ.ಜಿ.ಗೆ ರೂ. ೨.೫೦ ಮಾತ್ರ ಇದೆ. ಆದರೆ ಇಲ್ಲಿ ಮನಸ್ಸಿಗೆ ತೋಚಿದಂತೆ ರೂ. ೩, ೪, ೫ ಕೇಳುತ್ತಾರೆ ಎಂದು ಹೇಳುತ್ತಾರೆ ಅವರು.

ಬೆಳೆಗಾರರಲ್ಲಿ ಒಗ್ಗಟ್ಟಿನ ಕೊರತೆ: ನಾಲ್ಕುನಾಡು ವ್ಯಾಪ್ತಿಯಲ್ಲಿ ಅಸ್ಸಾಂ ಕಾರ್ಮಿಕರಿಗೆ ರೂ. ೨೫೦ ಸಂಬಳ ನಿಗದಿ ಮಾಡಲಾಯಿತು.

(ಮೊದಲ ಪುಟದಿಂದ) ಆ ಸಂದರ್ಭದಲ್ಲಿ ಕಾಫಿ ಕುಯ್ಯಲು ದರ ನಿಗದಿ ಮಾಡಿಲ್ಲ. ಈ ಕಾರಣದಿಂದ ಕಾರ್ಮಿಕರು ಮನ ಬಂದAತೆ ಹಣ ಕೇಳುತ್ತಿದ್ದಾರೆ. ನೀಡಲು ಸಾಧ್ಯವಿಲ್ಲ ಎಂದರೆ ಬೇರೆಡೆಗೆ ಹೋಗುವದಾಗಿ ಬೆದರಿಸುತ್ತಾರೆ. ತೆರಳುತ್ತಾರೆ. ಈ ಕಾರಣದಿಂದ ಕೆಲವು ಬೆಳೆಗಾರರು ಯಾರಿಗೂ ತಿಳಿಯದಂತೆ ಹೆಚ್ಚಿನ ಕೂಲಿ ನೀಡುತ್ತಿದ್ದಾರೆ. ಬೆಳೆಗಾರರು ಒಗ್ಗಟ್ಟಿನಿಂದ ಈ ಸಮಸ್ಯೆಯನ್ನು ನಿವಾರಿಸಬೇಕಾಗಿದೆ. ಇಲ್ಲವಾದರೆ ತಾವು ಬೆಳೆದ ಫಸಲನ್ನು ಕಾರ್ಮಿಕರಿಗೆ ನೀಡಿ ತಾವು ಸಾಲಗಾರರಾಗಿಯೇ ಮುಂದುವರಿಯಬೇಕಾಗುತ್ತದೆ ಎನ್ನುತ್ತಾರೆ ಡಾ. ಕಾವೇರಪ್ಪ.

ಉದ್ಯೋಗಿಗಳಿಂದ ಹೆಚ್ಚಿನ ಸಮಸ್ಯೆ : ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿ ನೌಕರಿಯಲ್ಲಿರುವ ಜಿಲ್ಲೆಯ ಬೆಳೆಗಾರರು ಕಾರ್ಮಿಕರ ಕೂಲಿ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯ ಬೆಳೆಗಾರರು. ೧೦-೧೫ ದಿನಗಳ ರಜೆಯಲ್ಲಿ ತಮ್ಮ ಊರಿಗೆ ಆಗಮಿಸುವ ಅವರು ಆದಷ್ಟು ಬೇಗ ತಮ್ಮ ತೋಟದ ಕಾಫಿ ಕುಯ್ಲು ಮುಗಿಸಿ ವಾಪಾಸಾಗಲು ಹಾತೊರೆಯುತ್ತಾರೆ. ಅದಕ್ಕಾಗಿ ದುಪ್ಪಟ್ಟು ಕೂಲಿ ನೀಡಲೂ ಅವರು ತಯಾರಿರುತ್ತಾರೆ. ಒಮ್ಮೆ ಹೆಚ್ಚಿನ ಕೂಲಿ ಪಡೆದ ಕಾರ್ಮಿಕರು ನಂತರ ಅದಕ್ಕಿಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಹಿಂಜರಿಯುತ್ತಾರೆ. ಇದು ಸಮಸ್ಯೆಗೆ ಮೂಲ ಕಾರಣ ಎನ್ನಲಾಗುತ್ತಿದೆ.

ತೋಟ ಗುತ್ತಿಗೆ ಪಡೆವವರಿಂದ ಹೆಚ್ಚಿನ ಕೂಲಿ : ಕಾಫಿ ತೋಟಗಳನ್ನು ಗುತ್ತಿಗೆ ಪಡೆದವರು ಕೂಲಿ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಅವರಿಗೆ ಹೆಚ್ಚಿನ ಲಾಭ ಇರುವುದರಿಂದ, ಹೆಚ್ಚು ತೋಟಗಳನ್ನು ಗುತ್ತಿಗೆ ಪಡೆದಿರುವುದರಿಂದ, ಕಾರ್ಮಿಕರ ಕೊರತೆ ನೀಗಿಸಲು ಮತ್ತು ಬೇಗನೆ ಕೆಲಸ ಮುಗಿಸಲು ಅವರು ಹೆಚ್ಚು ಕೂಲಿ ನೀಡುತ್ತಾರೆ. ಇದು ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ ಎನ್ನುತ್ತಾರೆ ಬೆಳೆಗಾರರು.

ಬಾಡಿಗೆಯಲ್ಲಿ ವಾಸಿಸುವ ಕಾರ್ಮಿಕರಿಂದ ಒತ್ತಡ : ಹಿಂದೆ ಕಾರ್ಮಿಕರು ಬೆಳೆಗಾರರ ತೋಟದ ಮನೆಯಲ್ಲಿ ವಾಸವಿದ್ದು ಕೆಲಸ ನಿರ್ವಹಿಸುತ್ತಿದ್ದರು. ಆದರೆ ಈಗ ಅಸ್ಸಾಂ ಕಾರ್ಮಿಕರು ಬಾಡಿಗೆ ಮನೆಗಳಲ್ಲಿ ವಾಸವಿದ್ದು ಕೆಲಸಕ್ಕೆÀ ಹೋಗುತ್ತಾರೆ. ಅವರು ಹೇಳಿದ ಕೂಲಿ ನೀಡಿದರೆ ಮಾತ್ರ ಕೆಲಸಕ್ಕೆ ಬರುವದಾಗಿ ಒತ್ತಡ ಹೇರುತ್ತಾರೆ. ಬೇಕಾದರೆ ಬೆಳೆಗಾರರು ತಮ್ಮ ವಾಹನಗಳಲ್ಲಿ ಕರೆದೊಯ್ದು ಕೆಲಸ ಮಾಡಿಸಿಕೊಳ್ಳಬೇಕು.

ಕಮಿಷನ್ ದಂಧೆ : ಕೆಲವು ಜನ ತಮ್ಮ ಕೈಕೆಳಗೆ ೨೫-೫೦ ಜನ ಕಾರ್ಮಿಕರನ್ನು ಇರಿಸಿಕೊಂಡಿದ್ದಾರೆ. ಬೆಳೆಗಾರರಿಗೆ ಕಾರ್ಮಿಕರು ಬೇಕಾದರೆ, ಒಬ್ಬರಿಗೆ ಅಥವಾ ಒಂದು ಕೆ.ಜಿ. ಕಾಫಿಗೆ ಇಂತಿಷ್ಟು ಎಂದು ಕಮಿಷನ್ ನೀಡಬೇಕು. ಕೂಲಿಯನ್ನು ಕೂಡ ಅವರ ಕೈಯಲ್ಲಿಯೇ ನೀಡಬೇಕು ಇದೂ ಕೂಡ ಹೆಚ್ಚಿನ ಕೂಲಿಗೆ ಕಾರಣವಾಗಿದೆ. -ಪಿ.ವಿ. ಪ್ರಭಾಕರ್